ಕ್ರೀಡೆ

ಅಬುಧಾಬಿ ಟಿ10 ಲೀಗ್‌ಗೆ ಮೂವರು ಭಾರತೀಯರು

ನವದೆಹಲಿ: ಹಿರಿಯ ಲೆಗ್ ಸ್ಪಿನ್ನರ್ ಪ್ರವೀಣ್ ತಂಬೆ ಸಹಿತ ಭಾರತದ ಮೂವರು ಬೌಲರ್‌ಗಳು ಜನವರಿ 28ರಿಂದ ನಡೆಯಲಿರುವ ಅಬುಧಾಬಿ ಟಿ10 ಕ್ರಿಕೆಟ್ ಲೀಗ್‌ನಲ್ಲಿ ಆಡಲಿದ್ದಾರೆ. 49 ವರ್ಷದ ಪ್ರವೀಣ್ ತಂಬೆ ಈ ಹಿಂದೆ ಐಪಿಎಲ್‌ನಲ್ಲೂ ಆಡಿದ್ದರು. ಕೆರಿಬಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಿದ ಮೊದಲ ಭಾರತೀಯರೆಂಬ ಹೆಗ್ಗಳಿಕೆಯೂ ಅವರದಾಗಿದೆ.

ಐಪಿಎಲ್‌ನಲ್ಲಿ ಡೆಕ್ಕನ್ ಚಾರ್ಜರ್ಸ್‌ ಪರ ಏಕೈಕ ಪಂದ್ಯ ಆಡಿರುವ ವೇಗಿ ಇಶಾನ್ ಮಲ್ಹೋತ್ರಾ ಮತ್ತು ಉತ್ತರ ಪ್ರದೇಶದ ಸ್ಪಿನ್ನರ್ ಪ್ರಶಾಂತ್ ಗುಪ್ತಾ ಟಿ10 ಲೀಗ್‌ನಲ್ಲಿ ಆಡಲಿರುವ ಮತ್ತಿಬ್ಬರು ಭಾರತೀಯರು. ತಂಬೆ ಮತ್ತು ಮಲ್ಹೋತ್ರಾ ಮರಾಠ ಅರೇಬಿಯನ್ಸ್ ಪರ ಕಣಕ್ಕಿಳಿಯಲಿದ್ದರೆ, ಪ್ರಶಾಂತ್ ಗುಪ್ತಾ ಡೆಕ್ಕನ್ ಗ್ಲಾಡಿಯೇಟರ್ಸ್‌ ತಂಡವನ್ನು ಪ್ರತಿನಿಧಿಸಲಿದ್ದಾರೆ.

ಕಳೆದ ವರ್ಷ ಭಾರತದ ಯುವರಾಜ್ ಸಿಂಗ್, ಜಹೀರ್ ಖಾನ್, ಎಸ್. ಬದ್ರಿನಾಥ್ ಮತ್ತು ಮುನಾಫ್​ ಪಟೇಲ್ ಟಿ10 ಲೀಗ್‌ನಲ್ಲಿ ಆಡಿದ್ದರು. 8 ತಂಡಗಳ ಲೀಗ್‌ನಲ್ಲಿ ಕ್ರಿಸ್ ಗೇಲ್, ಶಾಹಿದ್ ಅಫ್ರಿದಿ, ಡ್ವೇನ್ ಬ್ರಾವೊ, ಆಂಡ್ರೆ ರಸೆಲ್, ಸುನೀಲ್ ನಾರಾಯಣ್ ಮತ್ತು ಶೋಯಿಬ್ ಮಲಿಕ್ ಅವರಂಥ ಸ್ಟಾರ್‌ಗಳು ಐಕಾನ್ ಆಟಗಾರರಾಗಿ ಆಡಲಿದ್ದಾರೆ.