ಅಹಮದಾಬಾದ್: ಇಲ್ಲಿನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ 17ನೇ ಆವೃತ್ತುಯ ಎಲಿಮಿನೇಟರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಿದ್ದು, ಉಭಯ ತಂಡಗಳಿಗೂ ಈ ಪಂದ್ಯ ಮಹತ್ವದಾಗಿದೆ. ಸತತ ಸೋಲುಗಳಿಂದ ಕಂಗೆಟ್ಟು ಭರ್ಜರಿ ಕಮ್ಬ್ಯಾಕ್ ಮಾಡಿರುವ ಆರ್ಸಿಬಿ ರಾಜಸ್ಥಾನ ವಿರುದ್ಧ ಗೆದ್ದು ಅಭಿಮಾನಿಗಳ ಬಹುವರ್ಷದ ಕನಸನ್ನು ಸಾಕಾರಗೊಳಿಸಲು ಸಜ್ಜಾಗಿದೆ.
ಹಾಲಿ ಐಪಿಎಲ್ ಆವೃತ್ತಿಯಲ್ಲಿ ಭರ್ಜರುಇ ಫಾರ್ಮ್ನಲ್ಲಿರುವ ವಿರಾಟ್ ಕೊಹ್ಲಿ 709 ರನ್ಗಳಿಸುವ ಮೂಲಕ ಆರೆಂಜ್ ಕ್ಯಾಪನ್ನು ತಮ್ಮದಾಗಿಸಿಕೊಂಡಿದ್ದಾರೆ. ಹಾಲಿ ಐಪಿಎಲ್ ಆವೃತ್ತಿಯಲ್ಲಿ ಹಲವು ದಾಖಲೆಗಳನ್ನು ತಮ್ಮದಾಗಿಸಿಕೊಂಡಿರುವ ವಿರಾಟ್ ರಾಜಸ್ಥಾನ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲೂ ಮತ್ತೊಂದು ಐತಿಹಾಸಿಕ ರೆಕಾರ್ಡ್ಅನ್ನು ತಮ್ಮದಾಗಿಸಿಕೊಂಡಿದ್ದಾರೆ.
ಐಪಿಎಲ್ ಶುರುವಾದಾಗಿನಿಂದಲೂ ಆರ್ಸಿಬಿ ಪರ ಆಡುತ್ತಿರುವ ವಿರಾಟ್ 251 ಪಂದ್ಯಗಳ 243 ಇನ್ನಿಂಗ್ಸ್‌ಗಳಲ್ಲಿ 7971 ರನ್ ಗಳಿಸಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 8 ಸಾವಿರ ರನ್ ಪೂರೈಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ 29 ರನ್ಗಳಿಸಿದ ವೇಳೆ ವಿರಾಟ್ ಈ ಸಾಧನೆ ಮಾಡಿದ್ದಾರೆ. ಪ್ರಸ್ತುತ, ವಿರಾಟ್ ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್‌ಮನ್ ಕೂಡ ಆಗಿದ್ದಾರೆ.
ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 8 ಶತಕ ಮತ್ತು 50 ಅರ್ಧ ಶತಕಗಳನ್ನು ಗಳಿಸಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಕೊಹ್ಲಿ 702 ಬೌಂಡರಿ ಹಾಗೂ 271 ಸಿಕ್ಸರ್ ಬಾರಿಸಿದ್ದಾರೆ. 113 ರನ್ ಅವರ ಅತ್ಯುತ್ತಮ ಸ್ಕೋರ್ ಆಗಿದೆ. ಹಾಲಿ ಆವೃತ್ತಿಯಲ್ಲಿ 155 ಸ್ಟ್ರೈಕ್ ರೇಟ್ನಲ್ಲಿ 708 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಕೊಹ್ಲಿ 59 ಬೌಂಡರಿ ಹಾಗೂ 37 ಸಿಕ್ಸರ್‌ಗಳನ್ನು ಬಾರಿಸಿ ಟಾಪ್ ಸ್ಕೋರರ್ ಆಗಿದ್ದಾರೆ.