ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ
- ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ
- ತೆಲುಗು ಮತ್ತು ಕೊಡವ ಸಂಪ್ರದಾಯದಂತೆ ನೆರವೇರಿದ ಮದುವೆ
- ವೈರಲ್ ಆದ ಮದುವೆಯ ಎಕ್ಸ್‌ಕ್ಲೂಸಿವ್ ಫೋಟೋಸ್
ಉದಯಪುರ: ಚಿತ್ರರಂಗದ ಮೋಸ್ಟ್ ಫೇವರಿಟ್ ಜೋಡಿ, ರೌಡಿ ಸ್ಟಾರ್ ವಿಜಯ್ ದೇವರಕೊಂಡ (Vijay Deverakonda) ಮತ್ತು ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ (Rashmika Mandanna) ಕಡೆಗೂ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕಳೆದ ಹಲವು ದಿನಗಳಿಂದ ಹರಿದಾಡುತ್ತಿದ್ದ ಎಲ್ಲಾ ವದಂತಿಗಳಿಗೆ ತೆರೆ ಎಳೆದಿರುವ ಈ ಜೋಡಿ, ಗುರುವಾರ (ಫೆ. 26) ರಾಜಸ್ಥಾನದ ಉದಯಪುರದ ಐಷಾರಾಮಿ ರೆಸಾರ್ಟ್‌ನಲ್ಲಿ ದಾಂಪತ್ಯ ಜೀವನಕ್ಕೆ ಶುಭಾರಂಭ ಮಾಡಿದ್ದಾರೆ.
ತೆಲುಗು ಸಂಪ್ರದಾಯ ಮತ್ತು ಕೊಡವ ಶೈಲಿಯ ಮದುವೆ
ವಿಜಯ್ ಮತ್ತು ರಶ್ಮಿಕಾ ಜೋಡಿ ಇಂದು ಎರಡು ವಿಭಿನ್ನ ಸಂಪ್ರದಾಯಗಳ ಮೂಲಕ ಮದುವೆಯಾಗಿದ್ದಾರೆ. ಇಂದು ಬೆಳಿಗ್ಗೆ 10:10ಕ್ಕೆ ವಿಜಯ್ ದೇವರಕೊಂಡ ಅವರ ತೆಲುಗು ಸಂಪ್ರದಾಯದಂತೆ ವಿವಾಹ ಮಹೋತ್ಸವ ನಡೆಯಿತು. ಸಂಜೆ ರಶ್ಮಿಕಾ ಮಂದಣ್ಣ ಅವರ ಕೊಡವ (ಕೂರ್ಗ್) ಪರಂಪರೆಯನ್ನು ಗೌರವಿಸುವ ಸಲುವಾಗಿ ಕೊಡವ ಶೈಲಿಯ ಸಾಂಪ್ರದಾಯಿಕ ಮದುವೆ ಕಾರ್ಯಕ್ರಮ ಜರುಗಿತು. ಉದಯಪುರದ ಐಟಿಸಿ ಮೆಮೆಂಟೋಸ್' ಹೋಟೆಲ್ ಈ ಸುಂದರ ಕ್ಷಣಗಳಿಗೆ ಸಾಕ್ಷಿಯಾಯಿತು.
ನನ್ನ ಬೆಸ್ಟ್ ಫ್ರೆಂಡ್ ಈಗ ನನ್ನ ಹೆಂಡತಿ!
ಮದುವೆಯ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಫೋಟೋಗಳನ್ನು ಹಂಚಿಕೊಂಡ ರಶ್ಮಿಕಾ ಮಂದಣ್ಣ, ನನ್ನ ಗಂಡನನ್ನು ಪರಿಚಯಿಸುತ್ತಿದ್ದೇನೆ! ಇವರು ನನಗೆ ನಿಜವಾದ ಪ್ರೀತಿ ಎಂದರೆ ಏನು ಎಂದು ಕಲಿಸಿದವರು. ದೊಡ್ಡ ಕನಸು ಕಾಣುವುದು ತಪ್ಪಲ್ಲ ಎಂದು ಬೆನ್ನು ತಟ್ಟಿದವರು, ಎಂದು ಬರೆದುಕೊಂಡಿದ್ದಾರೆ.
ಇತ್ತ ವಿಜಯ್ ದೇವರಕೊಂಡ ಕೂಡ ಅಷ್ಟೇ ಭಾವುಕರಾಗಿ ಪೋಸ್ಟ್ ಹಾಕಿದ್ದು, ಅವಳು ಪಕ್ಕದಲ್ಲಿಲ್ಲದಿದ್ದರೆ ನನ್ನ ದಿನವೇ ಪೂರ್ಣಗೊಳ್ಳುತ್ತಿರಲಿಲ್ಲ. ಅವಳಿಲ್ಲದೆ ಊಟ ಕೂಡ ರುಚಿಸುತ್ತಿರಲಿಲ್ಲ. ಹಾಗಾಗಿ ನನ್ನ ಬೆಸ್ಟ್ ಫ್ರೆಂಡ್ನ್ನು ಈಗ ನನ್ನ ಹೆಂಡತಿ ಮಾಡಿಕೊಂಡಿದ್ದೇನೆ, ಎಂದು ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.
ಸಂಗೀತ್ದಲ್ಲಿ ಪುಷ್ಪ ಅಬ್ಬರ!
ಮದುವೆಗೂ ಮುನ್ನ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಈ ಜೋಡಿ ತಮ್ಮದೇ ಚಿತ್ರಗಳ ಹಾಡುಗಳಿಗೆ ಹೆಜ್ಜೆ ಹಾಕಿದ್ದಾರೆ. ಗೀತ ಗೋವಿಂದಂ ಮತ್ತು ಡಿಯರ್ ಕಾಮ್ರೇಡ್ ಚಿತ್ರದ ಹಾಡುಗಳು ಅತಿಥಿಗಳ ಮನಗೆದ್ದರೆ, ಪುಷ್ಪ ಚಿತ್ರದ ಪೀಲಿಂಗ್ಸ್ ಹಾಡಿಗೆ ಇಡೀ ಮದುವೆಯ ಮನೆಯೇ ಕುಣಿದು ಕುಪ್ಪಳಿಸಿದೆ. ಹಳದಿ ಶಾಸ್ತ್ರದಲ್ಲಿ ರಶ್ಮಿಕಾ ಅವರ ಸಾಕುನಾಯಿ ಆರಾ ಮತ್ತು ವಿಜಯ್ ಅವರ ಸ್ಟಾರ್ಮ್ ಹಾಗೂ ಚೆಸ್ಟರ್ ಹೆಸರಿನ ಸಾಕುನಾಯಿಗಳಿಗೂ ವಿಶೇಷ ಸ್ಥಾನ ನೀಡಿ ಅಲಂಕಾರ ಮಾಡಿದ್ದು ವಿಶೇಷವಾಗಿತ್ತು.
ಸ್ಟಾರ್ ಅತಿಥಿಗಳ ದಂಡು
ಈ ಅದ್ಧೂರಿ ವಿವಾಹಕ್ಕೆ ಸಂದೀಪ್ ರೆಡ್ಡಿ ವಂಗಾ, ಕಲ್ಯಾಣಿ ಪ್ರಿಯದರ್ಶನ್, ಆಶಿಕಾ ರಂಗನಾಥ್, ತರುಣ್ ಭಾಸ್ಕರ್, ರಾಹುಲ್ ರವೀಂದ್ರನ್ ಸೇರಿದಂತೆ ಅನೇಕ ಆಪ್ತ ಗೆಳೆಯರು ಮತ್ತು ಚಿತ್ರರಂಗದ ಗಣ್ಯರು ಸಾಕ್ಷಿಯಾಗಿದ್ದಾರೆ,(ಏಜನ್ಸೀಸ್).