ನ್ಯೂಸ್

ಹಿಜಾಬ್ ತೀರ್ಪು ನ್ಯಾಯಮೂರ್ತಿಗಳ ಭಿನ್ನ ನಿಲುವು

| ನ್ಯಾ. ಹೇಮಂತ್ ಗುಪ್ತಾ, ಸುಪ್ರೀಂ ಕೋರ್ಟ್

ಶಿಕ್ಷಣ ಸಂಸ್ಥೆಗಳಲ್ಲಿ ಜಾತ್ಯತೀತ ತತ್ವ ಹಾಗೂ ಸಮಾನತೆಯ ಸಿದ್ಧಾಂತಕ್ಕೆ ಮಹತ್ವ ನೀಡಿರುವ ನ್ಯಾ. ಹೇಮಂತ್ ಗುಪ್ತಾ, ಧರ್ಮದ ನಂಬಿಕೆಯ ಭಾಗವಾಗಿ ಸಾಮಾಜಿಕ ನಡವಳಿಕೆ ಎಂದು ಪರಿಗಣಿಸಿ ಸಾರ್ವಜನಿಕ ಸ್ಥಳದಲ್ಲಿ ಹಿಜಾಬ್ ಧರಿಸಬೇಕೆಂದು ಅರ್ಜಿದಾರರು ಬಯಸಿದ್ದಾರೆ. ತಮ್ಮ ಧರ್ಮದ ತತ್ವದಡಿಯಲ್ಲಿ ಉಡುಗೆಯ ಸ್ವಾತಂತ್ರ್ಯವನ್ನು ಅವರು ನಿರೀಕ್ಷಿಸಿದ್ದಾರೆ. ಆದರೆ, ಈ ವಿದ್ಯಾರ್ಥಿಗಳು ವಾಸ್ತವದಲ್ಲಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಾಗಿರುವಾಗ, ಧರ್ಮದಿಂದ ನಿಯಂತ್ರಿಸಲ್ಪಡುವ ಉಡುಪಿನ ಆಯ್ಕೆಗೆ ಅವಕಾಶ ನೀಡಲಾಗುತ್ತದೆಯೇ? ಕಾನೂನಿನ ಮುಂದೆ ಎಲ್ಲರೂ ಸಮಾನರು. ಜಾತಿ, ಮತ, ಲಿಂಗ, ಜನ್ಮಸ್ಥಳ ಲೆಕ್ಕಿಸದೆ ಎಲ್ಲಾ ನಾಗರಿಕರನ್ನು ಸಮಾನವಾಗಿ ಪರಿಗಣಿಸಬೇಕು. ಆದರೆ, ಧರ್ಮದ ನಂಬಿಕೆ ತಳಹದಿಯಲ್ಲಿ ಅಂತಹ ಸಮಾನತೆಯ ನೀತಿಗಳನ್ನು ರಾಜ್ಯ ಸರ್ಕಾರ ಉಲ್ಲಂಘಿಸಲು ಸಾಧ್ಯವಿಲ್ಲ ಎಂಬ ಸ್ಪಷ್ಟ ಅಭಿಮತ ಹೊರಹಾಕಿದ್ದಾರೆ.

ಶಾಲೆ-ಕಾಲೇಜುಗಳಲ್ಲಿ ಒಂದು ಧರ್ಮದ ನಿರ್ದಿಷ್ಟ ಉಡುಗೆ ಧರಿಸುವ ಅವಕಾಶಕ್ಕಾಗಿ ಒತ್ತಾಯಿಸಿದಾಗ, ಇತರರು ಕೂಡ ತಮ್ಮ ನಂಬಿಕೆ, ಆಚರಣೆಗಳನ್ನು ಪಾಲಿಸಲು ಅವಕಾಶ ಕೊಡಿ ಎಂದು ಹಠ ಹಿಡಿಯುತ್ತಾರೆ. ವಿದ್ಯಾರ್ಥಿಗಳು ಶಿಕ್ಷಣಕ್ಕೆಂದು ಪ್ರವೇಶ ಪಡೆಯುವ ಶಾಲೆಗಳಲ್ಲಿರುವ ಆರೋಗ್ಯಕರ ವಾತಾವರಣಕ್ಕೆ ಇದು ಒಳ್ಳೆಯದಲ್ಲ ಎಂದೂ ಹೇಳಿದ್ದಾರೆ.

ಸಿಖ್ಖರಿಗೆ ಪಗಡಿ ಧರಿಸಲು ಅವಕಾಶ ನೀಡಿರುವಂತೆಯೇ ನಮಗೆ ಹಿಜಾಬ್ ಧರಿಸಲು ಏಕೆ ಅನುಮತಿಯಿಲ್ಲ ಎಂಬ ಅರ್ಜಿದಾರರ ಪ್ರಶ್ನೆಗಳಿಗೆ ಉತ್ತರಿಸಿರುವ ನ್ಯಾ. ಗುಪ್ತಾ, ಸಿಖ್ ಧರ್ಮದ ಅನುಯಾಯಿಗಳ ಅಗತ್ಯ ಧಾರ್ವಿುಕ ಆಚರಣೆಗಳಲ್ಲಿ ಒಂದಾಗಿರುವ ಪಗಡಿಗೆ ನೀಡಿರುವ ಅನುಮತಿಯು, ಇಸ್ಲಾಂ ಧರ್ಮದ ಶ್ರದ್ಧಾಳುಗಳ ಹಿಜಾಬ್ ಬೇಕೆಂಬ ವಾದಕ್ಕೆ ಆಧಾರವಾಗುವುದಿಲ್ಲ. ಪಗಡಿ ಧರಿಸುವುದು ಮತ್ತು ಗಡ್ಡ ಬಿಡುವುದು ಸಿಖ್ಖರ ಅತ್ಯಗತ್ಯ ಧಾರ್ವಿುಕ ಮೂಲಭೂತ ಧಾರ್ವಿುಕ ಸಿದ್ಧಾಂತದ ಭಾಗವಾಗಿದೆ. ಈ ಅಗತ್ಯ ಆಚರಣೆಗೆ ಸಂಬಂಧಿಸಿದ ಪಂಜಾಬ್-ಹರಿಯಾಣ ಹೈಕೋರ್ಟ್ ನೀಡಿರುವ ತೀರ್ಪನ್ನು ಇದುವರೆಗೆ ಪ್ರಶ್ನಿಸಲಾಗಿಲ್ಲ. ಹಾಗಾಗಿ ಸಿಖ್ಖರ ನಂಬಿಕೆಗಳ ಬಗ್ಗೆ ಅವರನ್ನು ಕೇಳದೆ ಇಲ್ಲಿ ರ್ಚಚಿಸುವುದು ಸರಿಯಲ್ಲ. ಪ್ರತಿಯೊಂದು ನಂಬಿಕೆಯ ಆಚರಣೆಗಳನ್ನು ಆ ಧರ್ಮದ ತತ್ವಗಳ ಆಧಾರದ ಮೇಲೆ ಮಾತ್ರ ಪರಿಶೀಲಿಸಬೇಕು ಎಂದಿದ್ದಾರೆ. ಭಾರತದ ಸಂವಿಧಾನವು ಸಿಖ್ ಧರ್ಮದ ಭಾಗವಾಗಿ ಕಿರ್ಪಾನ್​ಗಳನ್ನು (ಪಗಡಿ) ಧರಿಸುವುದನ್ನು ಗುರುತಿಸಿದರೆ, ಅದು ಧರ್ಮದ ಮೂಲಭೂತ ಅವಶ್ಯಕತೆ ಎಂದು ನಾವೂ ಒಪ್ಪಿಕೊಳ್ಳುತ್ತೇವೆ ಎಂದು ಪಂಜಾಬ್-ಹರಿಯಾಣ ಹೈಕೋರ್ಟ್ ಹೇಳಿದ್ದನ್ನು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.

ಸ್ವಇಚ್ಛೆಯಂತೆ ಉಡುಗೆ ತೊಡುವ ಅಭಿವ್ಯಕ್ತಿಯ ಹಕ್ಕನ್ನು ನೀಡಿರುವ ಸಂವಿಧಾನ ಆರ್ಟಿಕಲ್ 19 (1) (ಎ) ಸಮಂಜಸ ನಿರ್ಬಂಧಗಳಿಗೂ ಒಳಪಟ್ಟಿದೆ. ಆ ನಿರ್ಬಂಧದ ಅಧಿಕಾರವನ್ನು ಬಳಸಿಕೊಂಡೇ ಸರ್ಕಾರ ಶಾಲೆಯ ಸಮಯದಲ್ಲಿ ಸಮವಸ್ತ್ರಕ್ಕೆ ಆದ್ಯತೆ ನೀಡಿದೆ ಎಂದಿರುವ ನ್ಯಾ. ಗುಪ್ತಾ, ತರಗತಿಗಳಲ್ಲಿ ಧರ್ಮದ ಗುರುತಿನ ಪ್ರದರ್ಶನಕ್ಕೆ ಅವಕಾಶ ಕೊಡುವುದು ಭ್ರಾತೃತ್ವದ ಉದಾತ್ತ ಗುರಿ ತಲುಪುವುದನ್ನು ವಿಫಲಗೊಳಿಸಿದಂತೆ. ಭ್ರಾತೃತ್ವವನ್ನು ಕೇವಲ ಒಂದು ಸಮುದಾಯದ ದೃಷ್ಟಿಕೋನದಿಂದಷ್ಟೇ ನೋಡಲಾಗುವುದಿಲ್ಲ. ಮಕ್ಕಳು ಅನ್ವೇಷಣೆಯ ಮನಸ್ಥಿತಿಯೊಂದಿಗೆ ಬೆಳೆಯಲು ಮತ್ತು ಸುಧಾರಣೆಯ ಪಥದಲ್ಲಿ ಸಾಗಲು ಶಾಲೆಯಲ್ಲಿ ಏಕರೂಪದ ವೇದಿಕೆ ನಿರ್ಮಾಣ ಮಾಡಲಾಗಿದೆ. ವಿದ್ಯಾರ್ಥಿಗಳ ನಡುವಿನ ಏಕರೂಪತೆ ಬಿಂಬಿಸುವ ಸಮವಸ್ತ್ರ, ಮಕ್ಕಳನ್ನು ಧಾರ್ವಿುಕ ಗುರುತಿನ ಭೇದವಿಲ್ಲದೆ ಬೆಳೆಯುವಂತೆ ಮಾಡುತ್ತದೆ.

ಹಿಜಾಬ್ (ಹೆಡ್ ಸ್ಕಾರ್ಫ್) ಹೆಣ್ಣುಮಕ್ಕಳ ಘನತೆ ಬಿಂಬಿಸುತ್ತದೆ ಎಂಬ ವಾದವೂ ಸಮರ್ಥನೀಯವಲ್ಲ. ವಿದ್ಯಾರ್ಥಿಗಳ ಮಧ್ಯೆ ಸಮಾನತೆಯಿರಬೇಕು ಮತ್ತು ಎಲ್ಲರೂ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಒಗ್ಗಟ್ಟಿನ ಸೌಹಾರ್ದಯುತ ವಾತಾವರಣದಲ್ಲಿ ಒಟ್ಟಾಗಿ ಅಧ್ಯಯನ ಮಾಡಬೇಕು. ಸಮವಸ್ತ್ರದ ಹಿಂದಿನ ಉದ್ದೇಶ ಕೂಡ ಅದೇ ಎಂದು ಅಭಿಪ್ರಾಯಪಟ್ಟಿದ್ದಾರೆ.

ಶಾಲೆಯ ನಿಯಮಗಳನ್ನು ಧಿಕ್ಕರಿಸುವುದು ಶಿಸ್ತಿನ ವಿರುದ್ಧದ ನಡೆಯಾಗುತ್ತದೆ. ಪ್ರೌಢಾವಸ್ಥೆ ತಲುಪದ ವಿದ್ಯಾರ್ಥಿಗಳ ಈ ವರ್ತನೆ ಸ್ವೀಕಾರಾರ್ಹವಲ್ಲ. ಅವರು ಸಹೋದರತ್ವ ಮತ್ತು ಭ್ರಾತೃತ್ವದ ವಾತಾವರಣದಲ್ಲಿ ಬೆಳೆಯಬೇಕೇ ವಿನಃ ಬಂಡಾಯ, ಪ್ರತಿಭಟನೆಯ ವಾತಾವರಣದಲ್ಲಿ ಅಲ್ಲ ಎಂದ ನ್ಯಾ. ಗುಪ್ತಾ, ಸಂವಿಧಾನದ ಆರ್ಟಿಕಲ್ 21ರ ಅಡಿಯಲ್ಲಿ ಶಿಕ್ಷಣದ ಹಕ್ಕು ಲಭ್ಯವಿದೆ. ಅಂತಹ ಹಕ್ಕನ್ನು ಪಡೆಯುವುದು ಅಥವಾ ಪಡೆಯದಿರುವುದು ವಿದ್ಯಾರ್ಥಿಯ ಆಯ್ಕೆಗೆ ಬಿಟ್ಟದ್ದು. ವಿದ್ಯಾರ್ಥಿಗೆ ಜಾತ್ಯತೀತ ಶಾಲೆಗೆ ಬರಲು ಅನುಮತಿ ಸಿಕ್ಕರೂ, ಹಿಜಾಬ್ ಗೆ ಅವಕಾಶವಿಲ್ಲದಿದ್ದರೆ ವಿದ್ಯಾರ್ಥಿ ಶಾಲೆಗೆ ಬರುವುದಿಲ್ಲ ಎಂಬ ಷರತ್ತು ಹಾಕಲು ಸಾಧ್ಯವಿಲ್ಲ. ಸಮವಸ್ತ್ರ ಧರಿಸಲು ಒಪ್ಪದೆ ಶಾಲೆಯಿಂದ ದೂರವಿರುವುದು ವಿದ್ಯಾರ್ಥಿಯ ನಿರ್ಧಾರವಾಗುತ್ತದೆಯೇ ಹೊರತು ಇಲ್ಲಿ ಶಾಲೆಯ ಪಾತ್ರವಿರುವುದಿಲ್ಲ ಎಂದು ವಿವರಿಸಿದ್ದಾರೆ.

ಕೇಂದ್ರ ಸರ್ಕಾರದ ಕೇಂದ್ರೀಯ ವಿದ್ಯಾಲಯಗಳಲ್ಲಿ ಹೆಡ್ ಸ್ಕಾರ್ಫ್ ಧರಿಸಲು ಅನುಮತಿ ನೀಡಲಾಗಿದೆ ಎಂಬ ವಾದಕ್ಕೆ ಉತ್ತರಿಸಿರುವ ಅವರು, ಈ ವಿದ್ಯಾಲಯವು ಕೇಂದ್ರ ಸರ್ಕಾರದ ಶಿಕ್ಷಣ ಸಚಿವಾಲಯದ ಅಡಿಯಲ್ಲಿ ಸ್ವಾಯತ್ತ ಸಂಸ್ಥೆಗಳಾಗಿವೆ. ಒಂದೇ ಶಿಕ್ಷಣದ ಸಾಮಾನ್ಯ ಕಾರ್ಯಕ್ರಮ ಒದಗಿಸುವ ಮೂಲಕ ರಕ್ಷಣಾ ಮತ್ತು ಅರೆ ಮಿಲಿಟರಿ ಸಿಬ್ಬಂದಿ ಸೇರಿದಂತೆ ವರ್ಗಾವಣೆ ಮಾಡಬಹುದಾದ ಕೇಂದ್ರ ಸರ್ಕಾರಿ ನೌಕರರ ಮಕ್ಕಳ ಶೈಕ್ಷಣಿಕ ಅಗತ್ಯಗಳನ್ನು ಪೂರೈಸುವುದು ಇದರ ಉದ್ದೇಶ. ಕೇಂದ್ರ ಮತ್ತು ರಾಜ್ಯಗಳ ಶಿಕ್ಷಣ ಸಂಸ್ಥೆಗಳಲ್ಲಿ ಪ್ರತ್ಯೇಕ ಆಡಳಿತ ನೀತಿಗಳಿದ್ದು, ಕಾರ್ಯವೈಖರಿಯಲ್ಲೂ ಭಿನ್ನತೆಯಿದೆ. ಕೆಲ ರಾಜ್ಯಗಳು ಹೆಡ್​ಸ್ಕಾರ್ಫ್​ಗೆ ಅನುಮತಿ ನೀಡಿವೆ ಎಂದ ಮಾತ್ರಕ್ಕೆ ಕರ್ನಾಟಕ ಸರ್ಕಾರದ ನಿರ್ಧಾರ ತರ್ಕವಿಲ್ಲದ್ದು ಎನ್ನಲಾಗದು ಎಂದು ಸಮರ್ಥನೆ ನೀಡಿದ್ದಾರೆ.

| ನ್ಯಾ. ಸುಧಾಂಶು ಧುಲಿಯಾ, ಸುಪ್ರೀಂ ಕೋರ್ಟ್

ಹೆಣ್ಣುಮಗುವೊಂದು ತನ್ನ ಶಾಲೆ ಚೀಲವನ್ನು ಬೆನ್ನ ಮೇಲೇರಿಸಿಕೊಂಡು ಶಾಲೆಗೆ ಹೋಗುವ ದೃಶ್ಯ ಭಾರತದಲ್ಲಿ ಸಾಮಾನ್ಯ. ಆಕೆ ಭವಿಷ್ಯದ ಭರವಸೆ. ನಮ್ಮ ಭವಿಷ್ಯ. ತನ್ನ ಸಹೋದರನಿಗೆ ಹೋಲಿಸಿದರೆ ಹೆಣ್ಣು ಮಕ್ಕಳಿಗೆ ಶಿಕ್ಷಣ ಪಡೆಯುವುದು ಹೆಚ್ಚು ಸವಾಲಿನ ವಿಷಯ ಎಂದು ತಮ್ಮ ತೀರ್ಪಿನಲ್ಲಿ ವಿವರಿಸಿರುವ ನ್ಯಾ. ಸುದಾಂಶು ಧುಲಿಯಾ, ಗ್ರಾಮೀಣ ಭಾಗದ ಹೆಣ್ಣುಮಕ್ಕಳ ಹಿನ್ನೆಲೆ, ಬೆಳೆದುಬರುವ ಪರಿಸರ, ಕೌಟುಂಬಿಕ ಹೊರೆ ಸೇರಿದಂತೆ ಅನೇಕ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು ಈ ನಿಲುವನ್ನು ತೆಗೆದುಕೊಳ್ಳಲಾಗಿದೆ. ಸವಾಲುಗಳ ಮೂಟೆ ಹೊತ್ತ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಬೇಡಿ ಎನ್ನುವ ಮೂಲಕ ನಾವು ಆಕೆಯ ಜೀವನವನ್ನು ಉತ್ತಮಗೊಳಿಸುತ್ತಿದ್ದೇವೆಯೇ ಎಂಬ ಪ್ರಶ್ನೆಯನ್ನವರು ಮುಂದಿಟ್ಟಿದ್ದಾರೆ.

ಭಾರತದ ಹಳ್ಳಿಗಳು ಮತ್ತು ಅರೆ ನಗರ ಪ್ರದೇಶಗಳಲ್ಲಿ ಹೆಣ್ಣು ಮಗು ತನ್ನ ತಾಯಿಯೊಂದಿಗೆ ದೈನಂದಿನ ಶುಚಿಗೊಳಿಸುವ ಮತ್ತು ಇತರೆ ಕೆಲಸಗಳಲ್ಲಿ ಸಹಾಯ ಮಾಡುವುದು ಸಾಮಾನ್ಯ. ಶಿಕ್ಷಣಕ್ಕಾಗಿ ಆಕೆಯ ಪಡಿಪಾಟಲು, ಅನುಭವಿಸುವ ಅಡೆತಡೆಗಳು ಗಂಡು ಮಗುವಿಗಿಂತ ಹಲವು ಪಟ್ಟು ಹೆಚ್ಚು. ಆದ್ದರಿಂದ ಈ ಪ್ರಕರಣವನ್ನು ಹೆಣ್ಣು ಮಗು ತನ್ನ ಶಾಲೆಯನ್ನು ತಲುಪುವಲ್ಲಿ ಈಗಾಗಲೇ ಎದುರಿಸುತ್ತಿರುವ ಸವಾಲುಗಳ ದೃಷ್ಟಿಕೋನದಿಂದ ನೋಡಬೇಕಾಗಿದೆ ಎಂದಿರುವ ನ್ಯಾ. ಧುಲಿಯಾ, ಪ್ರಜಾಪ್ರಭುತ್ವದಲ್ಲಿ ಹಿಜಾಬ್ ಧರಿಸಲು ಅವಕಾಶ ಕೊಡಿ ಎಂದು ಕೇಳುವುದು ಹೊರಲಾರದಷ್ಟು ಭಾರದ ಬೇಡಿಕೆ ಎನಿಸುತ್ತದೆಯೇ ಎಂದು ಕೇಳಿದ್ದಾರೆ.

ಹಿಜಾಬ್ ನಿರ್ಬಂಧ ಕುರಿತ ತನ್ನ 5 ಫೆಬ್ರವರಿ, 2022ರ ಆದೇಶದಲ್ಲಿ ಅಥವಾ ಹೈಕೋರ್ಟ್​ಗೆ ಸಲ್ಲಿಸಲಾದ ಅಫಿಡವಿಟ್​ನಲ್ಲಿ ಯಾವುದೇ ಸಮಂಜಸ ಕಾರಣಗಳನ್ನು ಸರ್ಕಾರ ನೀಡಿಲ್ಲ. ಹೆಣ್ಣು ಮಗುವೊಂದು ಹಿಜಾಬ್ ಧರಿಸುವುದು ಸಾರ್ವಜನಿಕ ಸುವ್ಯವಸ್ಥೆಯ ಅಥವಾ ಕಾನೂನು-ಸುವ್ಯವಸ್ಥೆಗೆ ಹೇಗೆ ಭಂಗ ತರುತ್ತದೆ ಎನ್ನುವುದು ತನ್ನ ತರ್ಕಕ್ಕೆ ನಿಲುಕದ ಪ್ರಶ್ನೆಯಾಗಿದೆ. ಹೊಂದಾಣಿಕೆಯೊಂದಿಗೆ ಬದುಕುವುದು ಮತ್ತು ವೈವಿಧ್ಯತೆಗಳನ್ನು ಒಪ್ಪಿಕೊಳ್ಳುವುದು ಪ್ರಬುದ್ಧ ಸಮಾಜದ ಸಂಕೇತವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಕಿವಿಮಾತು ಹೇಳಿರುವ ನ್ಯಾ. ಧುಲಿಯಾ, ಶಾಲೆ ಸಾರ್ವಜನಿಕ ಸ್ಥಳ. ಆದರೆ, ಶಾಲೆ ಮತ್ತು ಜೈಲು ಅಥವಾ ಮಿಲಿಟರಿ ಶಿಬಿರಗಳನ್ನು ಸಮಾನವಾಗಿ ಕಾಣುವುದು ಸರಿಯಲ್ಲ. ಹೈಕೋರ್ಟ್ ಕಾಳಜಿ ಶಾಲೆಯ ಶಿಸ್ತಿನ ಕುರಿತಾಗಿದ್ದರೆ, ಖಂಡಿತ ಅದನ್ನು ಒಪ್ಪಿಕೊಳ್ಳೋಣ. ಶಾಲೆಗಳಲ್ಲಿ ಶಿಸ್ತು ಅವಶ್ಯಕ. ಆದರೆ, ನಿಮ್ಮ ಸಾಂವಿಧಾನಿಕ ಸ್ವಾತಂತ್ರ್ಯ ಮತ್ತು ಘನತೆ ಬದಿಗಿಟ್ಟು ಶಿಸ್ತನ್ನು ಪಾಲಿಸಿ ಎನ್ನಲಾದೀತೆ ಎಂದು ಪ್ರಶ್ನಿಸಿದ್ದಾರೆ.

ಹಿಜಾಬ್ ಭಾರತೀಯ ಸಂಸ್ಕೃತಿಯ ಭಾಗ ಎನ್ನುವಂತೆ ತಮ್ಮ ತೀರ್ಪಿನಲ್ಲಿ ಚಿತ್ರಿಸಿರುವ ನ್ಯಾ. ಧುಲಿಯಾ, ವೈವಿಧ್ಯತೆ ಮತ್ತು ಶ್ರೀಮಂತ ಸಂಸ್ಕೃತಿ ಈ ಕೇಸಿನಲ್ಲಿ ಪ್ರಸ್ತುತ ವಿಷಯಗಳು. ಪದವಿಪೂರ್ವ ಕಾಲೇಜು ಹಂತದಲ್ಲಿ ನಮ್ಮ ಮಕ್ಕಳು ಇವುಗಳ ಬಗ್ಗೆ ತಿಳಿದುಕೊಳ್ಳಬೇಕು. ಅದಕ್ಕಾಗಿ ಅವರಿಗೆ ಸೂಕ್ತ ಸಲಹೆ ಮತ್ತು ಮಾರ್ಗದರ್ಶನದ ಅಗತ್ಯವಿದೆ. ನಮ್ಮ ಸಾಂವಿಧಾನಿಕ ಮೌಲ್ಯಗಳಾದ ಸಹಿಷ್ಣುತೆ, ಹೊಂದಿಕೊಳ್ಳುವಿಕೆ, ಭಾಷೆಗಳನ್ನು ಗೌರವಿಸುವುದು, ವಿಭಿನ್ನ ಆಹಾರ ಪದ್ಧತಿ ಅಥವಾ ವಿಭಿನ್ನ ಬಟ್ಟೆ ಧರಿಸುವವರ ಬಗ್ಗೆ ತಿಳಿದುಕೊಳ್ಳಬೇಕು. ವಿವಿಧ ಧರ್ಮಗಳು, ಭಾಷೆಗಳು ಮತ್ತು ಸಂಸ್ಕೃತಿಗಳ ಬಗ್ಗೆ ಅವರಲ್ಲಿ ಸಂವೇದನಾಶೀಲತೆ, ಸಹಾನುಭೂತಿ, ತಿಳಿವಳಿಕೆ ಬೆಳೆಸುವ ಸಮಯ ಇದು. ವೈವಿಧ್ಯತೆ ಬಗ್ಗೆ ಗಾಬರಿಯಾಗದೆ ಅವುಗಳನ್ನು ಆನಂದಿಸಲು, ಆಚರಿಸಬೇಕು. ವೈವಿಧ್ಯತೆಯೇ ನಮ್ಮ ಶಕ್ತಿ ಎಂಬುದನ್ನು ಅರಿತುಕೊಳ್ಳುವ ವಯಸ್ಸು ಅವರದ್ದಾಗಿರುತ್ತದೆ. ಸಂವಿಧಾನದ ಹಲವು ಪ್ರಮುಖ ಅಂಶಗಳಲ್ಲಿ ನಂಬಿಕೆ ಕೂಡ ಒಂದು. ಸಂವಿಧಾನವು ನಂಬಿಕೆಯ ದಾಖಲೆಯಾಗಿದೆ. ದೇಶದ ಅಲ್ಪಸಂಖ್ಯಾತರು ಬಹುಸಂಖ್ಯಾತರ ಮೇಲೆ ಇಟ್ಟಿರುವುದೂ ಇದೇ ನಂಬಿಕೆ ಎಂದಿದ್ದಾರೆ.