ಮಾಂಡು ಸಾಂಸ್ಕೃತಿಕ ಉತ್ಸವನ್ನು ಪ್ರವಾಸೋದ್ಯಮ ಸಚಿವೆ ಉಷಾ ಠಾಕೂರ್ ಉದ್ಘಾಟಿಸಿದರು. 
ನ್ಯೂಸ್

ಕೋಟೆ ಕೊತ್ತಲಗಳ ನಾಡಿನಲ್ಲಿ ಮಾಂಡು ಉತ್ಸವ ಆರಂಭ: ಗತ ವೈಭವ, ಐತಿಹ್ಯ ನೆನಪಿಸುವ ಆಚರಣೆ, ಮಧ್ಯಪ್ರದೇಶದಲ್ಲಿ 5 ದಿನಗಳ ಕಾರ್ಯಕ್ರಮ

| ಸಿ.ಕೆ.ಮಹೇಂದ್ರ ಮಾಂಡು (ಮಧ್ಯಪ್ರದೇಶ)

ಕರ್ನಾಟಕದ ಹಂಪಿಯಂತೆ ಇತಿಹಾಸದ ಗತವೈಭವವನ್ನು ಸಾಕ್ಷೀಕರಿಸುವ ಕೋಟೆ ಕೊತ್ತಲಗಳ ನಾಡು ಮಧ್ಯಪ್ರದೇಶದ ಮಾಂಡುವಿನಲ್ಲಿ ಹಮ್ಮಿಕೊಂಡಿರುವ 5 ದಿನಗಳ ‘ಮಾಂಡು ಉತ್ಸವ’ಕ್ಕೆ ಮುಖ್ಯಮಂತ್ರಿ ಶಿವರಾಜ್​ಸಿಂಗ್ ಚವ್ಹಾಣ್ ಗುರುವಾರ ಚಾಲನೆ ನೀಡಿದರು.

ಡಿ.30ರಿಂದ ಜನವರಿ 3ರವರೆಗೆ ನಡೆಯಲಿರುವ ಈ ವೈಭವದ ಉತ್ಸವದಲ್ಲಿ ಇತಿಹಾಸ, ಕಲೆ, ಸಂಸ್ಕೃತಿ, ಪರಂಪರೆ, ಪ್ರವಾಸೋದ್ಯಮ, ಧಾರ್ವಿುಕ, ಕ್ರೀಡೆ ಮತ್ತು ಮನೋರಂಜನೆಗೆ ಸಂಬಂಧಿಸಿದ ಹಲವಾರು ಕಾರ್ಯಕ್ರಮಗಳಿರುತ್ತವೆ. ಏರ್ ಬಲೂನಿಂಗ್, ಸೈಕಲಿಂಗ್ ಟೂರ್, ಹೆರಿಟೇಜ್ ವಾಕ್, ಫುಡ್ ಫೆಸ್ಟಿವಲ್, ಆರ್ಟ್ ಆಂಡ್ ಕ್ರಾಫ್ಟ್, ರೂರಲ್ ಟೂರಿಸಂ ಎಕ್ಸ್​ಪೋ, ನರ್ಮದಾ ಆರತಿ ಇನ್ನಿತರ ಕಾರ್ಯಕ್ರಮಗಳು ಜರುಗುತ್ತವೆ.

ದಾರ್ ಜಿಲ್ಲೆಯಲ್ಲಿರುವ ‘ಮಾಂಡು’ ಹೆಸರಿನ ಈ ಪ್ರದೇಶ ಒಂದು ಕಾಲದಲ್ಲಿ ವೈಭವದ ಸಾಮ್ರಾಜ್ಯವಾಗಿ ಮೆರೆದಿತ್ತು. ನಂತರದ ದಿನಗಳಲ್ಲಿ ಹಾಳು ಕೊಂಪೆಯಂತಾಗಿ ನಿರ್ಲಕ್ಷ್ಯ್ಕೆ ಒಳಗಾಗಿತ್ತು. 18ನೇ ಶತಮಾನದವರೆಗೆ ಇತ್ತ ಯಾರೂ ಗಮನ ಹರಿಸಿರಲಿಲ್ಲ. ನಂತರ ರಘುನಾಥ್ ದಾಸ್ ಎಂಬ ಇತಿಹಾಸಕಾರ ಮಾಂಡುವಿನ ಐತಿಹ್ಯವನ್ನು ಕೆದಕಿದರು. ಆ ಬಳಕವಷ್ಟೇ ‘ಮಂಡು ಸಾಮ್ರಾಜ್ಯ’ದ ಗತವೈಭವ ಬೆಳಕಿಗೆ ಬಂದಿತೆನ್ನಲಾಗಿದೆ. 10 ಮತ್ತು 11ನೇ ಶತಮಾನ ಮಾಂಡುವಿನ ಪಾಲಿಗೆ ವೈಭವದ ಕಾಲವಾಗಿತ್ತು. ‘ಪರಮಾರ’ ಎಂಬ ರಾಜವಂಶ ಈ ಸಾಮ್ರಾಜ್ಯವನ್ನು ಆಳುತ್ತಿತ್ತು. ಭೂಜ್ ಬಹದ್ದೂರ್ ಎಂಬಾತ ಈ ವಂಶದ ಪ್ರಸಿದ್ಧ ದೊರೆಯಾಗಿದ್ದನು. ಮಧ್ಯಪ್ರದೇಶದ ಈಗಿನ ರಾಜಧಾನಿ ‘ಭೂಪಾಲ್’ಗೆ ಆ ಹೆಸರು ಬರಲು ಭೂಜ್ ಬಹದ್ದೂರ್ ಹೆಸರಿನ ಪ್ರಭಾವವೇ ಕಾರಣವೆನ್ನಲಾಗಿದೆ.

ಕ್ರಿ.ಶ.612ರಲ್ಲಿ ಚಂದ್ರಸಿಂಹ ಎಂಬ ದೊರೆ ‘ಮಂಡಸದುರ್ಗ’ ಎಂಬಲ್ಲಿ ಪಾರ್ಶ್ವನಾಥ ವಿಗ್ರಹವನ್ನು ಸ್ಥಾಪಿಸಿದ್ದನು. ಅದೇ ಕಾರಣದಿಂದ ಈ ಪ್ರದೇಶಕ್ಕೆ ‘ಮಾಂಡ’ ಎಂಬ ಹೆಸರು ಬಂದಿತೆಂದು ಹೇಳಲಾಗುತ್ತದೆ. ಈ ಪ್ರಾಂತ್ಯದಲ್ಲಿ ಎಲ್ಲಿಯೇ ಓಡಾಡಿದರೂ ಕೋಟೆಗಳು, ಕೋಟೆ ದ್ವಾರಗಳು, ದೊಡ್ಡ ದೊಡ್ಡ ಮಹಲ್​ಗಳು ಕಣ್ಣಿಗೆ ಕಾಣಸಿಗುತ್ತವೆ. ಅಂದಿನ ಕಾಲಘಟ್ಟದಲ್ಲಿಯೇ ಈ ಪ್ರದೇಶ ಸುಮಾರು ಒಂದು ಮಿಲಿಯನ್​ನಷ್ಟು ಜನಸಂಖ್ಯೆ ಹೊಂದಿತ್ತು. ಆದರೆ ‘ಪರಮಾರ’ ವಂಶಸ್ಥರ ಆಳ್ವಿಕೆಯ ಕೊನೆಯ ದಿನಗಳಲ್ಲಿ ಈ ಸಾಮ್ರಾಜ್ಯ ದೆಹಲಿ ಸುಲ್ತಾನರ ದಾಳಿಗೆ ಸಿಲುಕಿ ಅವನತಿ ಹೊಂದಿತು ಎನ್ನಲಾಗಿದೆ. ಪ್ರಸ್ತುತ ಇಲ್ಲಿ ನಮ್ಮ ಹಂಪಿಯ ಮಾದರಿಯಲ್ಲಿ ಎಲ್ಲವೂ ಖಾಲಿ ಖಾಲಿ ಎಂಬಂತೆ ಭಾಸವಾಗುತ್ತದೆ. ವಿರೂಪಗೊಂಡಿರುವ ಹಿಂದು, ಜೈನ ಮತ್ತು ಬೌದ್ಧ ವಿಗ್ರಹಗಳು ಎಲ್ಲಿ ನೋಡಿದರೂ ಕಣ್ಣಿಗೆ ಕಾಣುತ್ತವೆ. ಈ ಎಲ್ಲದರ ಹಿನ್ನೆಲೆಯಲ್ಲಿ ಮತ್ತು ಆ ಕಾಲದ ಮಾಂಡುವಿನ ಇತಿಹಾಸವನ್ನು ನೆನಪಿಸುವ ಹಾಗೂ ಮರುಕಳಿಸುವಂತೆ ಮಾಡುವ ಉದ್ದೇಶದೊಂದಿಗೆ ಪ್ರತಿವರ್ಷ ‘ಮಾಂಡು ಉತ್ಸವ’ ಆಚರಿಸಿಕೊಂಡು ಬರಲಾಗುತ್ತಿದೆ.

900 ದೇಗುಲ: ಈ ಪ್ರದೇಶದಲ್ಲಿ ಸುಮಾರು 900 ದೇವಾಲಯಗಳಿವೆ. ಈ ಪೈಕಿ 300 ಜೈನ ದೇವಾಲಯಗಳಿದ್ದರೆ, ಉಳಿದವು ಹಿಂದು ದೇವಾಲಯಗಳು. ಮೊಘಲರ ಆಳ್ವಿಕೆಯ ಕಾಲದಲ್ಲಿ ಮಸೀದಿಗಳನ್ನೂ ನಿರ್ಮಾಣ ಮಾಡಲಾಗಿದೆ.