ನವದೆಹಲಿ: ಭಾರತದ ಅತಿದೊಡ್ಡ ಸ್ಟಾಕ್ ಬ್ರೋಕರ್ ಕಂಪನಿ "ಝೆರೊಧಾ" ಸಂಸ್ಥಾಪಕ ನಿತಿನ್ ಕಾಮತ್ ಅವರು ಆರು ವಾರಗಳ ಹಿಂದಷ್ಟೇ "ಲಘು ಸ್ಟ್ರೋಕ್"ನಿಂದ ಬಳಲಿದ್ದಾಗಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯ ಮೂಲಕ ಸೋಮವಾರ (ಫೆ.26) ಬಹಿರಂಗಪಡಿಸಿದ್ದಾರೆ. ಸ್ಟ್ರೋಕ್ಗೆ ಕಾರಣ ಏನೆಂಬುದನ್ನು ನಿತಿನ್ ಕಾಮತ್ ಸ್ಪಷ್ಟವಾಗಿ ದೃಢೀಕರಿಸದಿದ್ದರೂ, ಅನೇಕ ಅಂಶಗಳು ಇದಕ್ಕೆ ಕಾರಣವಾಗಿರಬಹುದು ಎಂದು ಹೇಳಿದ್ದಾರೆ.
ಸುಮಾರು 6 ವಾರಗಳ ಹಿಂದೆ ನಾನು ಸೌಮ್ಯ ಸ್ವಭಾವದ ಸ್ಟ್ರೋಕ್ನಿಂದ ಬಳಲಿದೆ. ತಂದೆಯ ನಿಧನದ ಚಿಂತೆ, ಕಳಪೆ ನಿದ್ರೆ, ನಿಶ್ಯಕ್ತಿ, ನಿರ್ಜಲೀಕರಣ ಮತ್ತು ಅತಿಯಾದ ಕೆಲಸ, ಇವುಗಳಲ್ಲಿ ಯಾವುದಾದರೂ ಸಂಭವನೀಯ ಕಾರಣಗಳಾಗಿರಬಹುದು ಎಂದು ಕಾಮತ್ ತಮ್ಮ ಇನ್ಸ್ಟಾಗ್ರಾಂ ಪೇಜ್ನಲ್ಲಿ ಬರೆದುಕೊಂಡಿದ್ದಾರೆ.
ತಮ್ಮ ಮುಖ ಇಳಿಬೀಳುತ್ತಿರುವುದನ್ನು ಕಾಮತ್ ಮೊದಲು ಗಮನಿಸಿದರು ಮತ್ತು ಅಂದಿನಿಂದ ಓದಲು ಮತ್ತು ಬರೆಯಲು ತುಂಬಾ ಕಷ್ಟಪಡಬೇಕಾಯಿತು. 3 ರಿಂದ 6 ತಿಂಗಳೊಳಗೆ ಸಂಪೂರ್ಣ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕಾಮತ್ ವ್ಯಕ್ತಪಡಿಸಿದ್ದಾರೆ.
ಅಂದಹಾಗೆ ಕಾಮತ್ ಅವರು ಫಿಟ್ನೆಸ್ ಕಾಪಾಡಿಕೊಳ್ಳುವ ಮಹತ್ವದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಬಾರಿ ಬಹಿರಂಗವಾಗಿ ಮಾತನಾಡಿದ್ದಾರೆ. ಆದಾಗ್ಯೂ, ಸ್ಟ್ರೋಕ್ ಅನುಭವಿಸಿದ ಅವರು ತಮ್ಮ ಅಭ್ಯಾಸಗಳನ್ನು ಮರುಪರಿಶೀಲಿಸಬೇಕಿದೆ ಒಪ್ಪಿಕೊಂಡರು. ಫಿಟ್ ಆಗಿರುವ ಮತ್ತು ತನ್ನು ಬಗ್ಗೆ ಆರೋಗ್ಯ ಕಾಳಜಿ ವಹಿಸುವ ವ್ಯಕ್ತಿಯ ಮೇಲೆ ಸ್ಟ್ರೋಕ್ ಏಕೆ ಪರಿಣಾಮ ಬೀರಿತು ಎಂಬುದನ್ನು ಚಿಂತಿಸಿದಾಗ ನನಗೆ ಆಶ್ಚರ್ಯವಾಗುತ್ತದೆ ಎಂದಿದ್ದಾರೆ.
ಸದ್ಯ ಕಾಮತ್ ಅವರು ವಿಶ್ರಾಂತಿ ಪಡೆಯುತ್ತಿದ್ದಾರೆ. ಸಂಪೂರ್ಣ ಗುಣಮುಖರಾದ ಬಳಿಕ ಮತ್ತೆ ಕೆಲಸ ಕಡೆ ಗಮನ ಹರಿಸಲಿದ್ದಾರೆ. (ಏಜೆನ್ಸೀಸ್)