More

  ಪದ್ಮಶ್ರೀ ಪುರಸ್ಕೃತ ಪ್ರಖ್ಯಾತ ಗಝಲ್ ಗಾಯಕ ಪಂಕಜ್ ಉದಾಸ್ ನಿಧನ

  ನವದೆಹಲಿ: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಪ್ರಖ್ಯಾತ ಗಝಲ್ ಗಾಯಕ ಪಂಕಜ್ ಉದಾಸ್ ಅವರು ಚಿಕಿತ್ಸೆ ಫಲಿಸದೇ ಇಂದು (ಫೆ.26) ಇಹಲೋಕ ತ್ಯಜಿಸಿರುವುದಾಗಿ ಅವರ ಕುಟುಂಬ ಖಚಿತಪಡಿಸಿದೆ.

  ಭಾರವಾದ ಹೃದಯದೊಂದಿಗೆ ಪದ್ಮಶ್ರೀ ಪುರಸ್ಕೃತ, ಗಾಯಕ ಪಂಕಜ್​ ಉದಾಸ್​ ಅವರು ದೀರ್ಘಕಾಲದ ಅನಾರೋಗ್ಯದ ಕಾರಣದಿಂದ ಫೆ. 26ರಂದು ಮೃತಪಟ್ಟಿದ್ದಾರೆಂದು ನಿಮಗೆ ತಿಳಿಸಲು ತುಂಬಾ ದುಃಖವಾಗುತ್ತಿದೆ ಎಂದು ಉದಾಸ್​ ಕುಟುಂಬ ಹೇಳಿಕೆಯಲ್ಲಿ ತಿಳಿಸಿದೆ.

  ಇಂದು ಬೆಳಗ್ಗೆ 11 ಗಂಟೆಗೆ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯಲ್ಲಿ ಉದಾಸ್​ ಕೊನೆಯುಸಿರೆಳೆದರು. ಮೂಲಗಳ ಪ್ರಕಾರ ಉದಾಸ್​ ಅವರು ಕೆಲವು ತಿಂಗಳುಗಳಿಂದ ಕ್ಯಾನ್ಸರ್​ನಿಂದ ಬಳಲುತ್ತಿದ್ದರು ಮತ್ತು ಯಾರನ್ನೂ ಭೇಟಿಯಾಗುತ್ತಿರಲಿಲ್ಲ ಎಂದು ತಿಳಿದುಬಂದಿದೆ. ಗಝಲ್​​ ಮಾಂತ್ರಿಕನ ಅಂತಿಮ ಸಂಸ್ಕಾರ ಮಂಗಳವಾರ (ಫೆ.27) ನೇರವೇರಲಿದೆ ಎಂದು ಕುಟುಂಬ ಮಾಹಿತಿ ನೀಡಿದೆ.

  ಪಂಕಜ್ ಉದಾಸ್ ಅವರ ಪುತ್ರಿ ನಯಾಬ್ ಕೂಡ ತಮ್ಮ ತಂದೆಯ ನಿಧನದ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

  ಗಝಲ್​ ಮಾಂತ್ರಿಕ ಬಗ್ಗೆ
  ಪಂಕಜ್ ಉದಾಸ್ ಅವರು ಭಾವಪೂರ್ಣವಾದ ಗಝಲ್‌ಗಳಿಗೆ ಸಮಾನಾರ್ಥಕ ಹೆಸರು. ಕಳೆದ ನಾಲ್ಕು ದಶಕಗಳಿಂದ ಅವರ ಗಝಲ್​ಗಳು ಪ್ರೇಕ್ಷಕರನ್ನು ಆಕರ್ಷಿಸಿದೆ. 1951, ಮೇ 17ರಂದು ಗುಜರಾತ್​ನ ಜೀತ್​ಪುರದಲ್ಲಿ ಜನಿಸಿದರು. ಸಂಗೀತ ಹಿನ್ನೆಲೆ ಕುಟುಂಬದಲ್ಲಿ ಜನಿಸಿದ್ದರಿಂದ ಕಿರಿಯ ವಯಸ್ಸಿನಲ್ಲಿ ತಮ್ಮ ಸಂಗೀತ ಪ್ರಯಾಣವನ್ನು ಆರಂಭಿಸಿದರು. ಅವರ ಹಿರಿಯ ಸಹೋದರ ಮನ್ಹರ್ ಉದಾಸ್, ಬಾಲಿವುಡ್‌ನಲ್ಲಿ ಯಶಸ್ವಿ ಹಿನ್ನೆಲೆ ಗಾಯಕರಾಗಿದ್ದರು. ಹೀಗಾಗಿ ಸಂಗೀತದ ಜಗತ್ತಿನಲ್ಲಿ ಪಂಕಜ್ ಅವರ ಎಂಟ್ರಿಗೆ ಪ್ರವೇಶ ಸುಲಭವಾಯಿತು.

  ಉಧಾಸ್ ಅವರು ತಮ್ಮ ಆರಂಭಿಕ ವೃತ್ತಿಜೀವನದಲ್ಲಿ ಕೆಲ ಹಿಂದಿ ಚಲನಚಿತ್ರಗಳ ಹಾಡಿಗೆ ಧ್ವನಿಯಾದರು. ಅಲ್ಲದೆ, ಭಾರತೀಯ ಪಾಪ್‌ನಲ್ಲಿಯೂ ಸಹ ಹಾಡಿದರು. ಆದಾಗ್ಯೂ, ಅವರ ನಿಜವಾದ ಸಂಗೀತ ಕಲೆ ಗಝಲ್‌ ಕ್ಷೇತ್ರದಲ್ಲಿತ್ತು. ಅಂದಹಾಗೆ ಗಝಲ್​, ಸಂಗೀತಕ್ಕೆ ಹೊಂದಿಸಲಾದ ಉರ್ದು ಕಾವ್ಯದ ಒಂದು ರೂಪವಾಗಿದೆ. 1980 ರಲ್ಲಿ ಅವರು ತಮ್ಮ ಮೊದಲ ಗಜಲ್ ಆಲ್ಬಂ “ಆಹತ್” ಅನ್ನು ಬಿಡುಗಡೆ ಮಾಡಿದರು. ಈ ಆಲ್ಬಂ ಯಶಸ್ವಿಯಾಗುವ ಮೂಲಕ ಉದಾಸ್ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟಿತು. ಉದಾಸ್​ ಅವರು ಏಕಾಂಗಿಯಾಗಿ 60ಕ್ಕೂ ಹೆಚ್ಚು ಆಲ್ಬಂಗಳು ಮತ್ತು ಸಹಯೋಗದೊಂದಿಗೆ ಸಾಕಷ್ಟು ಪ್ರಾಜೆಕ್ಟ್​ಗಳನ್ನು ಸಹ ಬಿಡುಗಡೆ ಮಾಡಿದರು.

  ಗಝಲ್‌ಗಳನ್ನು ಮುಖ್ಯವಾಹಿನಿಗೆ ತರುವಲ್ಲಿ ಉದಾಸ್​ ಪ್ರವರ್ತಕರಾದರು. ನಾಮ್ (1986) ಚಿತ್ರದ “ಚಿತ್ತಿ ಆಯಿ ಹೈ” ಮತ್ತು “ಆ ಗಲೇ ಲಗ್ ಜಾ” ನಂತಹ ಹಾಡುಗಳು ಪ್ರಖ್ಯಾತಿಯನ್ನು ತಂದುಕೊಟ್ಟಿತು. ಅಲ್ಲದೆ, ಭಾರತದ ಪ್ರಮುಖ ಗಝಲ್ ಗಾಯಕರಲ್ಲಿ ಒಬ್ಬರಾಗಿ ಉದಾಸ್​ ಅವರ ಸ್ಥಾನವನ್ನು ಗಟ್ಟಿಗೊಳಿಸಿದ್ದವು. ಉದಾಸ್​ ಅವರಿಗೆ ಫಿಲ್ಮ್‌ಫೇರ್ ಪ್ರಶಸ್ತಿ, ಗಜಲ್ ಗಾಯನಕ್ಕಾಗಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಮತ್ತು ಭಾರತದ ನಾಲ್ಕನೇ ಅತ್ಯುನ್ನತ ನಾಗರಿಕ ಗೌರವ ಪದ್ಮಶ್ರೀ ಸೇರಿದಂತೆ ಹಲವಾರು ಪ್ರತಿಷ್ಠಿತ ಪ್ರಶಸ್ತಿಗಳು ಒಲಿದಿವೆ.

  ಸಂಗೀತದಿಂದಾಚೆಗೆ ಉದಾಸ್ ಅವರು ವಿನಮ್ರ ಮತ್ತು ಉತ್ತಮ ವ್ಯಕ್ತಿತ್ವಕ್ಕೆ ಹೆಸರುವಾಸಿಯಾಗಿದ್ದರು. ಪಂಕಜ್ ಉದಾಸ್ ಅವರ ಧ್ವನಿಯು ಗಜಲ್ ಪ್ರೇಮಿಗಳ ಹೃದಯದಲ್ಲಿ ಶಾಶ್ವತವಾಗಿ ನೆಲೆಗೊಂಡಿದೆ. (ಏಜೆನ್ಸೀಸ್​)

  ಪ್ರಾಣಿ ಸಂಕುಲಕ್ಕೆ ಜೀವನಾಡಿ ವಂತಾರಾ ಯೋಜನೆ: ಅನಂತ್​ ಅಂಬಾನಿ ಘೋಷಣೆ, ಭಾರತದಲ್ಲಿ ಇದೇ ಮೊದಲು

  ಸಿಂಹ-ಸಿಂಹಿಣಿಗೆ ‘ಅಕ್ಬರ್-ಸೀತಾ’ ​​ಎಂದು ಹೆಸರಿಟ್ಟ ಅಧಿಕಾರಿ ಅಮಾನತು, ಛೀಮಾರಿ ಹಾಕಿದ ಹೈಕೋರ್ಟ್

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts