ನ್ಯೂಸ್

'ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡಲು ಇನ್ಮುಂದೆ ವಿಡಿಯೋ ಮಾಡಿದ್ರೆ ಶೂಟ್ಔಟ್​!​'

ನವದೆಹಲಿ: ಹಲವರು ಮಂದಿಗೆ ಅದರಲ್ಲಿಯೂ ಯುವಜನರಿಗೆ ಇದೀಗ ಬಗೆಬಗೆಯ ಪೋಸ್​ ಕೊಟ್ಟು ಫೋಟೋ ಇಲ್ಲವೇ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದರೆಂದರೆ ಬಲು ಖುಷಿ. ಅದರಲ್ಲಿಯೂ ಇದೀಗ ಟಿಕ್​ಟಾಕ್​ನಲ್ಲಿ ವಿಡಿಯೋ ಮಾಡುವ ಹುಚ್ಚು ಹಲವರ ತಲೆಗೆ ಹತ್ತಿಬಿಟ್ಟಿದೆ.

ಕೆಲವರು ಈ ರೀತಿ ವಿಡಿಯೋ ಮಾಡಿ ಹಾಕಿದರೆ ಅವರಿಗೆ ಹಲವಾರು ಲೈಕ್ಸ್​, ಕಮೆಂಟ್​ ಬರುತ್ತಲೇ ಇರುತ್ತವೆ. ಇದು ಇನ್ನು ಕೆಲವರಿಗೆ ಸಹಿಸುವುದು ಸಾಧ್ಯವಾಗುವುದಿಲ್ಲ. ಆದ್ದರಿಂದ ವಿಡಿಯೋ ಕ್ಲಿಕ್​ ಆಗುವವನ ವಿರುದ್ಧ ಸೇಡು ತೀರಿಸಿಕೊಳ್ಳಲು ಕಾಯುತ್ತಲೇ ಇರುತ್ತಾರೆ.

ಇಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ. ಮೇಲಿಂದ ಮೇಲೆ ಬಗೆಬಗೆಯ ಸ್ಟೈಲ್​ ಮಾಡಿ ವಿಡಿಯೋ ಮಾಡಿಕೊಂಡು ಅದನ್ನು ಟಿಕ್​ಟಾಕ್​ ಸೇರಿದಂತೆ ವಿವಿಧ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದ ಬಾಲಕನನ್ನು ಪಿಸ್ತೂಲು ಹಿಡಿದಿರುವ ಇಬ್ಬರು ಯುವಕರು ಅಟ್ಯಾಕ್​ ಮಾಡಿ ಬೆದರಿಸಿದ್ದಾರೆ.

ಬಾಲಕ ನಿಯಮಿತವಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿದ್ದ. ಇದನ್ನು ಸಹಿಸದ ಕಾರಣಕ್ಕೋ ಅಥವಾ ಇನ್ನಾವ ಕಾರಣಕ್ಕೋ ಗೊತ್ತಿಲ್ಲ. ಆದರೆ ಇಬ್ಬರು ಯುವಕರು ಪಿಸ್ತೂಲ್​ ಹಿಡಿದು ಬಂದು, ಬಾಲಕನ ತಲೆಗೆ ಗುರಿಯಿಟ್ಟು, ಇನ್ನು ಮುಂದೆ ವಿಡಿಯೋ ಅಪ್​ಲೋಡ್​ ಮಾಡದಂತೆ ಧಮಕಿ ಹಾಕಿದ್ದಾರೆ. ತಮ್ಮ ಮಾತನ್ನು ಮೀರಿ ವಿಡಿಯೋ ಮಾಡಿದರೆ ಶೂಟ್​ಔಟ್​ ಮಾಡುವುದಾಗಿ ಎಚ್ಚರಿಸಿದ್ದಾರೆ.

ವಿಡಿಯೋ ಮಾಡಲು ಕ್ಯಾಮರಾ ಸಹಿತ ಬಂದಿದ್ದ ಬಾಲಕ ಈ ಯುವಕರ ನಡೆ ನೋಡಿ ಬೆವೆತು ಅಲ್ಲಿಂದ ಕಾಲ್ಕಿತ್ತಿದ್ದಾನೆ. ವಿಡಿಯೋ ಮಾಡಲು ಒಂದು ಸ್ಥಳದಲ್ಲಿ ಕ್ಯಾಮರಾ ಫಿಕ್ಸ್​ ಮಾಡಿಟ್ಟುಕೊಂಡಿದ್ದ ಬಾಲಕ. ಈ ಹಿನ್ನೆಲೆಯಲ್ಲಿ ಯುವಕರು ಅಲ್ಲಿಗೆ ಬಂದು ಧಮಕಿ ಕೊಟ್ಟಿದ್ದು, ಅವರಿಗೆ ಹೆದರಿ ಬಾಲಕ ಓಡಿ ಹೋದದ್ದು ಎಲ್ಲವೂ ಆ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಭಾರಿ ವೈರಲ್​ ಆಗುತ್ತಿದೆ. (ಏಜೆನ್ಸೀಸ್​)