ಬೆಂಗಳೂರು: ನಾಗರಪಂಚಮಿಯ ದಿನದಂದು ಅಲ್ಲಲ್ಲಿ ನಾಗರಹಾವು ದರ್ಶನವಾಗುವುದು ಸಹಜ. ಅಂಥ ಕೆಲವು ಸನ್ನಿವೇಶ ಪ್ರತಿ ನಾಗರಪಂಚಮಿಯಂದು ಕಾಣಸಿಗುತ್ತದೆ. ಪಂಚಮಿಯ ಮುನ್ನ ದಿನವಾದ ನಿನ್ನೆ ವಿಧಾನಸೌಧದಲ್ಲೇ ನಾಗರಹಾವು ಕಾಣಿಸಿಕೊಂಡಿತ್ತು.
ಹೀಗೆ ನಾಗರಪಂಚಮಿ ದಿನ ಇಲ್ಲೊಂದು ಕಡೆ ಕೂಡ ನಾಗರಹಾವು ಕಾಣಿಸಿಕೊಂಡಿದೆ. ಅಷ್ಟೇ ಆಗಿದ್ದರೆ ಈ ವಿಷಯ ಅಂಥ ಗಮನ ಸೆಳೆದಿರುತ್ತಿರಲಿಲ್ಲ. ಆದರೆ ಇಲ್ಲೊಂದಷ್ಟು ಯುವಕರು ಈ ನಾಗರಹಾವಿನ ಮುಂದೆ ಕೇಕ್ ಇಟ್ಟು ಹ್ಯಾಪಿ ಬರ್ತ್ಡೇ ಎಂದಿದ್ದಾರೆ. ಈ ಮೂಲಕ ಪಂಚಮಿಯನ್ನೂ ಬರ್ತ್ಡೇ ರೀತಿ ಆಚರಿಸಿದ್ದಾರೆ.
ಬಯಲಿನಂಥ ಜಾಗದಲ್ಲಿ ಕಾಣಿಸಿಕೊಂಡ ನಾಗರಹಾವಿನ ಮುಂದೆ ಬರ್ತ್ಡೇ ಕೇಕ್ ಇಟ್ಟ ಇವರು, 'ನಗುತ ನಗುತ ಬಾಳು ನೀನು ನೂರು ವರುಷ..' ಎಂಬ ಹಾಡನ್ನು ಹೇಳಿದ್ದು, ಅದರಲ್ಲೊಬ್ಬ ಹಾವಿನ ಹೆಡೆ ಮೇಲೆ ಕೈ ಇರಿಸಿ ಕೆಳಕ್ಕೆ ಅದುಮಿ ಕೇಕ್ ತಿನ್ನಿಸಲು ಯತ್ನಿಸಿದ್ದೂ ಚಿತ್ರೀಕರಣಗೊಂಡಿದೆ. ಈ ಕುರಿತ ವಿಡಿಯೋ ಈಗ ವೈರಲ್ ಆಗುತ್ತಿದೆ. ಈ ಘಟನೆ ಎಲ್ಲಿಯದ್ದು ಎನ್ನುವ ಕುರಿತು ಖಚಿತ ಮಾಹಿತಿ ಇನ್ನಷ್ಟೇ ಸಿಗಬೇಕಿದೆ.