ನ್ಯೂಸ್

ಲೇಡಿ ತಹಸೀಲ್ದಾರ್​ಗೆ ಯುವಕರ ಅವಾಜ್​! ವಿಡಿಯೋ ವೈರಲ್​

ರಾಯಚೂರು: ಮೈಕ್ ಹಚ್ಚ ಬೇಡಿ ಎಂದು ಬುದ್ಧಿವಾದ ಹೇಳಲು ಬಂದ ದೇವದುರ್ಗದ ಲೇಡಿ ತಹಸೀಲ್ದಾರ್​ಗೆ ಆವಾಜ್ ಹಾಕಿದ ಯುವಕರು, ಸುಪ್ರೀಂಕೋರ್ಟ್ ಕಾನೂನಿನ ಪಾಠ ಮಾಡಿದ್ದಾರೆ. ಆ ವಿಡಿಯೋ ವೈರಲ್​ ಆಗಿದೆ.

ದೇವದುರ್ಗ ಪಟ್ಟಣದ ಶಾಂತಿ ನಗರದಲ್ಲಿ ಯುವಕರು ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದಾರೆ. ಮೂರ್ತಿ ಪ್ರತಿಷ್ಠಾಪನ ಸ್ಥಳದಲ್ಲಿ ಮೈಕ್ ಹಚ್ಚಿ ಹೆಚ್ಚು ಸೌಂಡ್ ಕೊಡಲಾಗಿತ್ತು. ಸೋಮವಾರ ಇಲ್ಲಿಗೆ ಬಂದ ಪ್ರಭಾರಿ ತಹಸೀಲ್ದಾರ್​ ಸಂತೋಷಿ ರಾಣಿ ಅವರು ಮೈಕ್​ ಬಳಸದಂತೆ ತಿಳಿಹೇಳಿದ್ದಾರೆ. ಇದಕ್ಕೆ ಬಗ್ಗೆ ಯುವಕರು ತಹಸೀಲ್ದಾರ್​ ಅವರನ್ನೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ.

ವರ್ಷದಲ್ಲಿ ಹನ್ನೊಂದು ದಿನ ಕೂರಿಸುವ ಗಣೇಶನಿಗೆ ನಿರ್ಬಂಧ ಹಾಕುವ ನೀವುಗಳು ಮಸೀದಿಯಲ್ಲಿ ವರ್ಷ ಪೂರ್ತಿ ಮೈಕ್ ಹಾಕಿ ಗದ್ದಲ ಮಾಡುವವರಿಗೆ ಏಕೆ ನಿರ್ಬಂಧ ಹಾಕಲ್ಲ? ಸುಪ್ರೀಂ ಕೋರ್ಟ್​ ಆದೇಶ ಗೊತ್ತೈತಿ ನಿಮ್ಗೆ... ಎಂದು ಯುವಕರು ತಹಸೀಲ್ದಾರ್​ರನ್ನು ತರಾಟೆಗೆ ತೆಗೆದುಕೊಂಡರು. ನಮ್ಮ ಮೇಲೆ ಕೇಸ್​ ಫೈಲ್​ ಮಾಡ್ತೀರಾ ಮಾಡಿ, ಗಣೇಶ ಪ್ರತಿಷ್ಠಾಪನೆ ವಿಚಾರವಷ್ಟೇ ನಿಮ್ಮ ಡ್ಯೂಟಿನಾ? ನಿಮಗೆ ಬೇರೆ ಕೆಲಸ ಇಲ್ವಾ? ಆ ಕೆಲಸಗಳನ್ನು ಮೊದಲು ಮಾಡಿ ಎಂದು ಆವಾಜ್ ಹಾಕಿದರು.

ಯುವಕರ ಆವಾಜ್​ಗೆ ಸೈಲಂಟ್ ಆಗಿ ನಿಂತ ತಹಸೀಲ್ದಾರ್​, ಸ್ಥಳಕ್ಕೆ ಪೊಲೀಸರನ್ನು ಕರೆಸಿದರು. ಪೊಲೀಸರ ಬಳಿಯೂ ಅರೆಸ್ಟ್ ವಾರೆಂಟ್ ಕೊಡ್ರೆ ನಾವೆಲ್ಲರೂ ಬರ್ತೇವೆ.. ನಾವು ಗಣೇಶ ಹಬ್ಬ ಮಾಡೋಕು ನೀವು ಯಾಕೆ ಅಡ್ಡಿ ಮಾಡೋದು? ನಾವು ನಮ್ಮ ಸಂಸ್ಕೃತಿಯನ್ನು ಆಚರಣೆ ಮಾಡುತ್ತಿದ್ದೇವೆ... ಎಂದು ಅವಾಜ್​ ಹಾಕಿದರು. ಈ ವಿಡಿಯೋ ವೈರಲ್​ ಆಗಿದೆ.