ನ್ಯೂಸ್

ನಮ್ಮ ಮೆಟ್ರೋದಲ್ಲಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಕಾಮುಕ ಅರೆಸ್ಟ್​

ಬೆಂಗಳೂರು: ನಾವು ಇದುವರೆಗೂ ರಾಷ್ಟ್ರ ರಾಜಧಾನಿ ದೆಹಲಿ ಮೆಟ್ರೋ ರೈಲಿನಲ್ಲಿ ನಡೆಯುತ್ತಿದ್ದ ಅಶ್ಲೀಲ ವರ್ತನೆಗಳ ಬಗ್ಗೆ ಕೇಳಿ ಶಪಿಸುತ್ತಿದ್ದೆವು. ಆದರೀಗ ರಾಜ್ಯ ರಾಜಧಾನಿ ಬೆಂಗಳೂರು ಮೆಟ್ರೋದಲ್ಲೂ ಇಂತಹ ಘಟನೆಗಳು ವರದಿಯಾಗುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಇಂತಹ ಘಟನೆಗಳ ವಿರುದ್ಧ ಕಠಿಣ ಎಚ್ಚರಿಕೆ ನೀಡಿದರು ಸಹ ಮತ್ತೆ ಮರುಕಳಿಸುತ್ತಿರುವುದು ಎಚ್ಚರಿಕೆಯ ಕರೆಗಂಟೆಯಾಗಿದೆ. ಇದೀಗ ಯುವಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ಕೊಟ್ಟು ಸಿಕ್ಕಿಬಿದ್ದಿದ್ದಾನೆ.

ನಿನ್ನೆ (ಡಿ.07) ಬೆಳಗ್ಗೆ ರಾಜಾಜಿನಗರದ ಹಸಿರು ಮಾರ್ಗದ ಮೆಟ್ರೋ ರೈಲಿನಲ್ಲಿ ಈ ದುರ್ಘಟನೆ ನಡೆದಿದೆ. ಬೆಳಗ್ಗೆ 9.30ರ ಸುಮಾರಿಗೆ ಯುವತಿಯೊಬ್ಬಳು ರಾಜಾಜಿನಗರದಲ್ಲಿ ಮೆಟ್ರೋ ರೈಲಿನ್ನೇರಿದ್ದಾಳೆ. ಸ್ವಲ್ಪ ದೂರ ರೈಲು ಸಾಗುತ್ತಿದ್ದಂತೆ ಕಾಮುಕ ಯುವಕ, ಯುವತಿಯ ಮೈ-ಕೈ ಮುಟ್ಟಿ ಅಶ್ಲೀಲವಾಗಿ ವರ್ತಿಸಿದ್ದಾನೆ. ಇದರಿಂದ ಆಘಾತಗೊಂಡ ಸಂತ್ರಸ್ತೆ ತಕ್ಷಣ ಕೂಗಿಕೊಂಡಿದ್ದು, ಭಯಬಿದ್ದ ಕಿರಾತಕ ಮುಂದಿನ ನಿಲ್ದಾಣದಲ್ಲಿ ಇಳಿದು ಎಸ್ಕೇಪ್​ ಆಗಲು ಪ್ರಯತ್ನಿಸಿದನು. ಆದರೆ, ಮೆಟ್ರೋ ನಿಲ್ದಾಣದ ಭದ್ರತಾ ಸಿಬ್ಬಂದಿ ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಅಂದಹಾಗೆ ಬಂಧಿತ ಆರೋಪಿಯನ್ನು ಲೋಕೇಶ್ ಆಚಾರ್​​ ಎಂದು ಗುರುತಿಸಲಾಗಿದೆ. ಉಪ್ಪಾರ ಪೇಟೆ ಪೊಲೀಸರ ವಶದಲ್ಲಿರುವ ಆರೋಪಿಯನ್ನು ವಿಚಾರಣೆ ನಡೆಸಲಾಗಿದ್ದು, ಈ ಹಿಂದೆಯೂ ಈತ ಅಪರಾಧ ಕೃತ್ಯಗಳನ್ನು ಎಸಗಿರುವುದು ಬಟಾಬಯಲಾಗಿದೆ. ಹಿಂದೊಮ್ಮೆ ಬಿಎಂಟಿಸಿ ಬಸ್​ನಲ್ಲಿ ಯುವತಿಯ ಮೊಬೈಲ್​ ಕದಿಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದು ಒದೆ ತಿಂದಿದ್ದ. ಈ ವೇಳೆ ಆತನ ಬಳಿ 20 ಮೊಬೈಲ್​ ಫೋನ್​ಗಳನ್ನು ವಶಕ್ಕೆ ಪಡೆಯಲಾಗಿತ್ತು.

ಆರೋಪಿ ಲೋಕೇಶ್​ ಹೋಟೆಲ್​ ಉದ್ಯಮದ ನೌಕರ ಎಂದು ತಿಳಿದುಬಂದಿದೆ. ಯುವತಿ ನೀಡಿದ ದೂರಿನ ಆಧಾರದ ಮೇಲೆ ಆತನ ವಿರುದ್ಧ ಉಪ್ಪಾರ ಪೇಟೆ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ. ವಿಚಾರಣೆ ಆರಂಭಿಸಿದ್ದು, ಆರೋಪಿ ಬಳಿಯಿದ್ದ ಮೆಟ್ರೋ ಕಾರ್ಡ್​ಗಳನ್ನು ವಶಕ್ಕೆ ಪಡೆಯಲಾಗಿದೆ.