More

    ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಉಚ್ಚಾಟನೆ

    ನವದೆಹಲಿ: ಪ್ರಶ್ನೆ ಕೇಳಲು ಲಂಚ ಪಡೆದ ಆರೋಪ ಹೊತ್ತಿರುವ ತೃಣಮೂಲ ಕಾಂಗ್ರೆಸ್​ (ಟಿಎಂಸಿ) ಸಂಸದೆ ಮಹುವಾ ಮೊಯಿತ್ರಾರನ್ನು ಸಂಸತ್​ ಸ್ಥಾನದಿಂದ ಇಂದು (ಡಿ.08) ಉಚ್ಚಾಟಿಸಲಾಗಿದೆ.

    ಮಹುವಾ ಮಯಿತ್ರಾರನ್ನು ಉಚ್ಚಾಟಿಸುವ ಸಂಬಂಧ ಸಂಸದೀಯ ನೈತಿಕ ಸಮಿತಿಯು ನೀಡಿದ ವರದಿಯನ್ನು ಸದನವೂ ಅಂಗೀಕರಿಸಿದ ಬಳಿಕ ಉಚ್ಚಾಟನೆ ಮಾಡಲಾಗಿದೆ. ಸಂಸದೀಯ ವ್ಯವಹಾರಗಳ ಸಚಿವರು ಲೋಕಸಭೆಯಲ್ಲಿ ವರದಿಯನ್ನು ಮಂಡಿಸಿದರು. ಧ್ವನಿ ಮತಗಳ ಮೂಲಕ ಎನ್​ಡಿಎ ಸರ್ಕಾರದ ನಿರ್ಣಯವನ್ನು ಸರ್ವಾನುಮತದಿಂದ ಸದನ ಅಂಗೀಕರಿಸಿತು.

    ಉಚ್ಚಾಟನೆಗೆ ನೈತಿಕ ಸಮಿತಿ ಶಿಫಾರಸು ಮಾಡಿದ ವರದಿಯಲ್ಲಿ ಪ್ರಶ್ನೆ ಕೇಳಲು ಲಂಚ ಪಡೆದ ಪ್ರಕರಣದಲ್ಲಿ ಮಹುವಾ ಅವರು ತಪ್ಪಿತಸ್ಥರೆಂದು ಕಂಡುಬಂದಿದೆ. ಇಂದು ಬೆಳಗ್ಗೆಯಷ್ಟೇ ಲೋಕಸಭೆಯಲ್ಲಿ ನೈತಿಕ ಸಮಿತಿಯ ವರದಿಯ ಮೇಲೆ ಚರ್ಚೆ ನಡೆಯಿತು. ಈ ವೇಳೆ ಕಾಂಗ್ರೆಸ್​ ಸಂಸದ ಮನೀಶ್​ ತಿವಾರಿ, ಟಿಎಂಸಿ ಸಂಸದರಾದ ಕಲ್ಯಾಣ್​ ಬ್ಯಾನರ್ಜಿ ಮತ್ತು ಸುದಿಪ್​ ಬಂದೋಪಾಧ್ಯಾಯ ಹಾಗೂ ಜೆಡಿಯು ಸಂಸದ ಗಿರಿಧರಿ ಯಾದವ್​ ಅವರು ಶಿಫಾರಸು ವರದಿಯನ್ನು ವಿರೋಧಿಸಿದರು.

    ಮತ್ತೊಂದೆಡೆ ಬಿಜೆಪಿ ಸಂಸದ ಡಾ.ಹೀನಾ ವಿ ಗವಿತ್ ಮತ್ತು ಅಪರಾಜಿತಾ ಸಾರಂಗಿ ನೈತಿಕ ಸಮಿತಿಯ ಶಿಫಾರಸನ್ನು ಬೆಂಬಲಿಸಿದರು.

    ಏನಿದು ಪ್ರಕರಣ?
    ಸಂಸತ್ತಿನಲ್ಲಿ ಪ್ರಧಾನಿ ಮೋದಿ ವಿರುದ್ಧ ಪ್ರಶ್ನೆಗಳನ್ನು ಕೇಳಲು ಉದ್ಯಮಿ ದರ್ಶನ್ ಹಿರಾನಂದಿನಿ ಬಳಿ ಮಹುವಾ ಮೊಯಿತ್ರಾ ಅವರು ಲಂಚವನ್ನು ಸ್ವೀಕರಿಸಿದ್ದಾರೆ ಮತ್ತು ಲೋಕಸಭೆಯ ಲಾಗಿನ್ ಐಡಿಗಳನ್ನು ಸಹ ಹಂಚಿಕೊಂಡಿದ್ದಾರೆ ಎಂದು ಬಿಜೆಪಿ ಸಂಸದ ನಿಶಿಕಾಂತ್​ ದುಬೆ ಅವರು ಗಂಭೀರ ಆರೋಪ ಮಾಡಿದ್ದರು. ಮಹುವಾ ಮತ್ತು ಹಿರಾನಂದನಿ ನಡುವೆ ಲಂಚ ವಿನಿಮಯ ಎಂಬುದಕ್ಕೆ ಸಾಕಷ್ಟು ಪುರಾವೆಗಳಿವೆ ಎಂದಿದ್ದ ದುಬೆ, ಸುಪ್ರೀಂಕೋರ್ಟ್ ವಕೀಲ ಜೈ ಅನಂತ್ ದೇಹದ್ರಾಯ್ ಅವರ ಪತ್ರವನ್ನು ಉಲ್ಲೇಖಿಸಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಲೋಕಸಭೆಯ ನೈತಿಕ ಸಮಿತಿ ತನಿಖೆ ಆರಂಭಿಸಿತು. ಮಹುವಾಗೆ ಸಮನ್ಸ್​ ನೀಡಿ ವಿಚಾರಣೆ ನಡೆಸಿತು.

    ನೈತಿಕ ಸಮಿತಿಯು ಈ ಸಂಪೂರ್ಣ ವಿಷಯದ ಬಗ್ಗೆ ಸುಮಾರು 500 ಪುಟಗಳ ವಿವರವಾದ ವರದಿಯನ್ನು ಸಿದ್ಧಪಡಿಸಿತು. ಮಹುವಾ ಮೊಯಿತ್ರಾ ವಿರುದ್ಧದ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿದ ಸಮಿತಿಯು ಅವರ ನಡವಳಿಕೆಯನ್ನು ಆಕ್ಷೇಪಾರ್ಹ ಮತ್ತು ಅನೈತಿಕ ಎಂದು ಬಣ್ಣಿಸಿದೆ. ಇದನ್ನು ಆಧರಿಸಿ ಸಮಿತಿಯು ತನ್ನ ವರದಿಯಲ್ಲಿ ಮಹುವಾ ಅವರ ಸಂಸತ್ ಸದಸ್ಯತ್ವ ರದ್ದತಿಗೆ ಶಿಫಾರಸು ಮಾಡಿತು.(ಏಜೆನ್ಸೀಸ್​)

    ವಿವಾದಗಳ ಸುಳಿಯಲ್ಲಿ ಮಹುವಾ ಮೊಯಿತ್ರಾ: ಕೊನೆಗೂ ಮೌನ ಮುರಿದ ಮಮತಾ ಬ್ಯಾನರ್ಜಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts