More

    ಷೇರುಗಳಲ್ಲಿ ಹೂಡಿಕೆ ಆಮಿಷ; ಉದ್ಯಮಿಗೆ 5.17 ಕೋಟಿ ವಂಚನೆ

    ಬೆಂಗಳೂರು: ಅಪರಿಚಿತ ಗ್ರೂಪ್‌ಗೆ ನಿಮ್ಮ ಮೊಬೈಲ್ ನಂಬರ್ ಸೇರ್ಪಡೆಯಾಗುತ್ತೆ. ಇರ್ಲಿ ಬಿಡು ಎಂದು ಸುಮ್ಮನಿರುತ್ತೀರಿ… ಅಲ್ಲಿನ ಚಾಟ್‌ಗಳು ನಿಮ್ಮ ಗಮನ ಸೆಳೆದು ನೀವು ಪ್ರತಿಕ್ರಿಯೆ ನೀಡಿದಿರೋ… ನಿಮ್ಮನ್ನು ವಂಚಿಸಲು ಖೆಡ್ಡಾ ರೆಡಿಯಾಗಿರುತ್ತೆ! ಅಂಥದ್ದೇ ಖೆಡ್ಡಾಕ್ಕೆ ಬಿದ್ದು ಬೆಂಗಳೂರಿನ ವ್ಯಕ್ತಿ ಬರೋಬ್ಬರಿ 5.17 ಕೋಟಿ ರೂ. ಕಳೆದುಕೊಂಡಿದ್ದಾರೆ.
    ಷೇರು ಖರೀದಿಸಿದರೆ ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭಾಂಶ ಸಿಗಲಿದೆ ಎಂದು ಉದ್ಯಮಿಗೆ ಆಮಿಷವೊಡ್ಡಿದ್ದ ಸೈಬರ್ ಕಳ್ಳರು ನಡೆಸಿದ ಕೃತ್ಯವಿದು.
    ಜಯನಗರ 7ನೇ ಹಂತದ ನಿವಾಸಿ ಅಶೋಕ್ ತಿರುಪಲ್ಲಪ್ಪ ಮೋಸಕ್ಕೆ ಒಳಗಾದ ಉದ್ಯಮಿ. ಇವರು ಕೊಟ್ಟ ದೂರಿನ ಮೇರೆಗೆ ಸೈಬರ್ ಕ್ರೈಂ ಠಾಣೆಯಲ್ಲಿ ಎ್ಐಆರ್ ದಾಖಲು ಮಾಡಿಕೊಂಡಿರುವ ಪೊಲೀಸರು, ಆರೋಪಿಗಳ ಬಂಧನಕ್ಕೆ ಬಲೆಬೀಸಿದ್ದಾರೆ.

    ಮಾರ್ಚ್ 11ರಂದು ಅಪರಿಚಿತ ವ್ಯಕ್ತಿ, ಉದ್ಯಮಿ ವಾಟ್ಸ್‌ಆ್ಯಪ್‌ಗೆ ಬಿವೈಎಸ್ ಡಾಟ್ ಕಾಂ ಲಿಂಕ್ ಕಳುಹಿಸಿದ್ದ. ಆ ಲಿಂಕ್ ಓಪನ್ ಮಾಡದೆ ಉದ್ಯಮಿ ನಿರ್ಲಕ್ಷ್ಯ ವಹಿಸಿದ್ದರು. ಆನಂತರ ವೈ-5 ಎವರ್ ಕೋರ್ ೈನಾನ್ಸಿಯಲ್ ಲೀಡರ್ ಎಂಬ ವಾಟ್ಸ್‌ಆ್ಯಪ್ ಗ್ರೂಪ್‌ಗೆ ಉದ್ಯಮಿಯನ್ನು ಸೇರಿಸಿದ್ದು, ಅದರಲ್ಲಿ 160 ಸದಸ್ಯರು ಇದ್ದರು. ಉದ್ಯಮಿಗೆ ವಾಟ್ಸ್‌ಆ್ಯಪ್ ಕಾಲ್ ಮಾಡಿದ ಇಬ್ಬರು ಅಪರಿಚಿತರು ಷೇರು ಮಾರ್ಕೆಟ್ ವಿವರ ತಿಳಿಸಿ ಲಿಂಕ್ ಕಳುಹಿಸಿ ಆ್ಯಪ್ ಡೌನ್‌ಲೋಡ್ ಮಾಡುವಂತೆ ಸಲಹೆ ನೀಡಿದ್ದರು. ಅಲ್ಲದೆ, ಷೇರು ಖರೀದಿ ಮಾಡಿದರೆ ನಿಮಗೆ ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಸಿಗಲಿದೆ ಎಂದು ತಿಳಿಸಿದ್ದರು. ಸೈಬರ್ ವಂಚಕರ ಮಾತು ನಂಬಿದ ಉದ್ಯಮಿ, ಲಿಂಕ್ ಓಪನ್ ಮಾಡಿ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ಅದರ ಮೂಲಕ ಷೇರುಗಳನ್ನು ಖರೀದಿ ಮಾಡಲು ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿದ್ದರು. ಸೈಬರ್ ವಂಚಕರು ಕೊಡುತ್ತಿದ್ದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಏ.2ರ ವರೆಗೂ 5.17 ಕೋಟಿ ರೂ. ವರ್ಗಾಯಿಸಿದ್ದರು. ಈ ನಡುವೆ ಅಪರಿಚಿತ ವ್ಯಕ್ತಿಗಳು ಮತ್ತೆ ಮತ್ತೆ ಕರೆ ಮಾಡಿ ಹೆಚ್ಚಿನ ಹೂಡಿಕೆ ಮಾಡುವಂತೆ ಒತ್ತಾಯ ಮಾಡುತ್ತಿದ್ದರು. ಅನುಮಾನ ಬಂದು ಉದ್ಯಮಿ, ತಾನು ಖರೀದಿಸಿದ್ದ ಷೇರುಗಳನ್ನು ಮಾರಿ ಮಾಡಿ ಹಣ ಹಿಂಪಡೆಯಲು ಮುಂದಾದಾಗ ಮಾರಾಟ ಸಾಧ್ಯವಾಗಿಲ್ಲ. ಈ ಬಗ್ಗೆ ಕರೆ ಮಾಡಿ ವಿಚಾರಿಸಿದಾಗ ಸಬೂಬು ಹೇಳಿ ಕಾಲ ಮುಂದೂಡುತ್ತಿದ್ದರು. ಕೊನೆಗೊಂದು ದಿನ ಸಂಪರ್ಕವನ್ನೇ ಕಡಿತ ಮಾಡಿಕೊಂಡಿದ್ದರು. ವಾಟ್ಸ್‌ಆ್ಯಪ್ ಗ್ರೂಪ್ ಸಹ ಡಿಲೀಟ್ ಆಗಿದ್ದು, ಮೋಸಕ್ಕೆ ಒಳಗಾಗಿರುವುದು ಉದ್ಯಮಿಗೆ ಗಮನಕ್ಕೆ ಬಂದಿದೆ. ಈ ಬಗ್ಗೆ ಉದ್ಯಮಿ ಕೊಟ್ಟ ದೂರಿನ ಮೇರೆಗೆ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ವಂಚನೆಗಾಗಿಯೇ ಗ್ರೂಪ್ ರಚನೆ?:

    ಅಮಾಯಕರಿಗೆ ಗಾಳ ಹಾಕುವ ಉದ್ದೇಶಕ್ಕೆ ಸೈಬರ್ ವಂಚಕರು ಟೆಲಿಗ್ರಾಂ ಮತ್ತು ವಾಟ್ಸ್‌ಆ್ಯಪ್‌ನಲ್ಲಿ ಗ್ರೂಪ್ ತೆರೆದಿರುತ್ತಾರೆ. ಒಂದೊಂದು ಗ್ರೂಪ್‌ನಲ್ಲಿ 100 ರಿಂದ 150 ಸದಸ್ಯರು ಇರುವಂತೆ ಅವರೇ ಸೇರಿಕೊಂಡಿರುತ್ತಾರೆ. ಅದಕ್ಕೆ ಮೂರ‌್ನಾಲ್ಕು ಮಂದಿ ಅಮಾಯಕರನ್ನು ಸೇರಿಸಿಕೊಂಡು ಗಾಳ ಎಸೆಯುತ್ತಾರೆ. ವಂಚಕರು ಚಾಟ್ ಶುರು ಮಾಡಿ ನನಗೆ ಇಷ್ಟು ಲಕ್ಷ ರೂಪಾಯಿ ಲಾಭ, ನನಗೆ ಇಷ್ಟು ಕಮಿಷನ್ ಬಂತು ಎಂದು ಬಣ್ಣ ಬಣ್ಣವಾಗಿ ಚಾಟ್ ಮಾಡಿ ನಂಬಿಸುತ್ತಾರೆ. ಇತ್ತ ಅಮಾಯಕರು ಗ್ರೂಪ್‌ನಲ್ಲಿ ನಡೆಯುವ ಚಾಟ್ ಗಮನಿಸಿ ಹೆಚ್ಚಿನ ಲಾಭಾಂಶ ಸಿಗಬಹುದು ಎಂದು ನಂಬಿ ಲಕ್ಷಾಂತರ ರೂಪಾಯಿ ಹೂಡಿಕೆ ಮಾಡಿ ಮೋಸಕ್ಕೆ ಒಳಗಾಗುತ್ತಿದ್ದಾರೆ. ಹೀಗಾಗಿ ಅಪರಿಚಿತ ಗ್ರೂಪ್‌ಗೆ ನಿಮ್ಮ ನಂಬರ್ ಆ್ಯಡ್ ಆದಾಗ ಎಚ್ಚರವಹಿಸಿ ಎನ್ನುತ್ತಾರೆ ಪೊಲೀಸರು.

    1930ಗೆ ಕರೆ ಮಾಡಿ :

    ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭಾಂಶ ಕೊಡುವುದಾಗಿ ಆಮಿಷವೊಡ್ಡಿ ಆನ್‌ಲೈನ್‌ನಲ್ಲಿ ಹೂಡಿಕೆ ಮಾಡಿಕೊಂಡು ವಂಚನೆ ಮಾಡುವ ಸೈಬರ್ ಕಳ್ಳರ ಗ್ಯಾಂಗ್ ಸಕ್ರಿಯವಾಗಿದೆ. ಅಪರಿಚಿತ ಲಿಂಕ್ ಮತ್ತು ಕರೆಗಳ ಬಗ್ಗೆ ಎಚ್ಚರ ವಹಿಸಿ. ಮೋಸಕ್ಕೆ ಒಳಗಾದರೇ ಕೂಡಲೇ ಪೊಲೀಸ್ ಹೆಲ್ಪ್‌ಲೈನ್ 1930ಗೆ ಕರೆ ಮಾಡುವಂತೆ ಪೊಲೀಸರು ಸಲಹೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts