ಕುವೈತ್: ಇತ್ತೀಚಿನ ದಿನಗಳಲ್ಲಿ ಅನೇಕ ದಂಪತಿ ಕ್ಷುಲ್ಲಕ ಕಾರಣಗಳಿಗೆ ಡಿವೋರ್ಸ್ ಮೊರೆ ಹೋಗುತ್ತಿದ್ದಾರೆ. ದಿನದಿಂದ ದಿನಕ್ಕೆ ಇಂತಹ ಪ್ರಕರಣಗಳ ಸಂಖ್ಯೆಯು ಕೂಡ ಹೆಚ್ಚುತ್ತಿದೆ. ಪತಿ ತನಗೆ ಕುರ್ಕುರೆ ತಂದುಕೊಡಲಿಲ್ಲ ಅಂತ ಮಹಿಳೆಯೊಬ್ಬಳು ಡಿವೋರ್ಸ್ ನೀಡಲು ಯತ್ನಿಸಿದ ಸುದ್ದಿ ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು. ಇದೀಗ ಅಂತಹದ್ದೇ ಸುದ್ದಿಯೊಂದು ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವರದಿಯ ಪ್ರಕಾರ, ಕುವೈತ್‌ನಲ್ಲಿ ಯುವ ಇಂಜಿನಿಯರ್ ಒಬ್ಬರು ತಮ್ಮ ಹೆಂಡತಿಯ ಕಣ್ಣಿನ ಬಣ್ಣದ ವಿಚಾರದಲ್ಲಿ ಅಸಮಾಧಾನಗೊಂಡು ವಿಚ್ಛೇದನವನ್ನು ಕೋರಿದ್ದಾರೆ. ಇಂಜಿನಿಯರ್ ಕುವೈತ್‌ನ ಅಲ್-ಸಬಾಹಿಯಾ ಮೂಲದವರು. ಯುವಕ ಆರಂಭದಲ್ಲಿ ತನ್ನ ವಧುವಿನ ಕಣ್ಣುಗಳ ಬಣ್ಣ ಕಪ್ಪು ಎಂದು ಭಾವಿಸಿದ್ದ. ಆದರೆ, ಮದುವೆಯಾದ ಒಂದು ದಿನದ ನಂತರವಷ್ಟೇ ಆತನಿಗೆ ತನ್ನ ಹೆಂಡತಿಯ ಕಣ್ಣುಗಳು ಹಸಿರು ಬಣ್ಣದ್ದಾಗಿರುವುದು ಅರಿವಾಯಿತು.
ಮದುವೆಯ ದಿನ ವಧು ಕಾಂಟ್ಯಾಕ್ಟ್ ಲೆನ್ಸ್ ಧರಿಸಿದ್ದರಿಂದ ವರನಿಗೆ ಕಣ್ಣಿನ ಬಣ್ಣ ತಿಳಿದಿರಲಿಲ್ಲ. ಆದರೆ, ಮೊದಲ ರಾತ್ರಿಯ ಬಳಿಕ ಪತ್ನಿಯ ನಿಜವಾದ ಕಣ್ಣುಗಳನ್ನು ಕಂಡು ಯುವಕ ಶಾಕ್ ಆಗಿದ್ದು, ವಿಚ್ಛೇದನ ಕೇಳಿದ್ದಾನೆ. ದೃಷ್ಟಿ ಸಮಸ್ಯೆಗಳಿಂದಾಗಿ ವಧು ನಿಯಮಿತವಾಗಿ ಕಾಂಟ್ಯಾಕ್ಟ್ ಲೆನ್ಸ್ಗಳನ್ನು ಬಳಸುತ್ತಿದ್ದಾಳೆ ಎಂದು ತಿಳಿದುಬಂದಿದೆ.
ನಿಶ್ಚಿತಾರ್ಥದ ನಂತರವೂ ವಧುವಿನ ಕಣ್ಣಿನ ಬಣ್ಣದ ಬಗ್ಗೆ ಯುವಕ ವಿಚಾರಿಸಿರಲಿಲ್ಲ. ಆದರೆ, ಇದೀಗ ನಿಜವಾದ ಕಣ್ಣುಗಳನ್ನು ನೋಡಿ ವಿಚ್ಛೇದನಕ್ಕೆ ಬೇಡಿಕೆ ಇಟ್ಟಿದ್ದು, ತನ್ನನ್ನು ದಾರಿ ತಪ್ಪಿಸಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ. ವಧುವಿನ ಕಣ್ಣುಗಳ ಬಣ್ಣವು ಭವಿಷ್ಯದಲ್ಲಿ ಹುಟ್ಟುವ ಮಕ್ಕಳ ಮೇಲೆ ಪರಿಣಾಮ ಬೀರಬಹುದು ಎಂದು ಯುವಕ ಆರೋಪಿಸಿದ್ದಾನೆ. ವಧುವಿನ ಮನೆಯವರು ವರನೊಂದಿಗೆ ಮಾತುಕತೆ ನಡೆಸಿ ಸಮಸ್ಯೆಯನ್ನು ಬಗೆಹರಿಸಲು ಪ್ರಯತ್ನಿಸುತ್ತಿದ್ದಾರೆ. (ಏಜೆನ್ಸಿಸ್)