ಅಮೆರಿಕದ ಮೇರಿಲ್ಯಾಂಡಿನಲ್ಲಿ ಮೂರು ದಿನಗಳ 11ನೇ ವಸಂತ ಸಾಹಿತ್ಯೋತ್ಸವದ ಅದ್ಧೂರಿ ಆಚರಣೆ

America
Published on

| ಬೆಂಕಿ ಬಸಣ್ಣ, ನ್ಯೂಯಾರ್ಕ್

Benki Basanna 1
ಅಮೆರಿಕದ ಮೇರಿಲ್ಯಾಂಡಿನಲ್ಲಿ ಹನ್ನೊಂದನೇ ವಸಂತ ಸಾಹಿತ್ಯೋತ್ಸವವು ಮೇ 17, 18, 19 ಮೂರು ದಿವಸ ತುಂಬಾ ಸಂಭ್ರಮದಿಂದ ನಡೆಯಿತು. ಈ ಸಮ್ಮೇಳನವನ್ನು ಅಮೆರಿಕದ ಕನ್ನಡ ಸಾಹಿತ್ಯ ರಂಗ (ಕ.ಸಾ.ರಂ ) ಮತ್ತು ಶರಾವತಿ ಕನ್ನಡ ಬಳಗ ಜಂಟಿಯಾಗಿ ಆಯೋಜಿಸಿತ್ತು. ಅಮೆರಿಕದಲ್ಲಿ ನೆಲೆಸಿರುವ ಎಲ್ಲ ಸಾಹಿತ್ಯಾಸಕ್ತರನ್ನು ಒಗ್ಗೂಡಿಸುವುದು, ಹೊಸ ಲೇಖಕರ ಪುಸ್ತಕಗಳ ಬಿಡುಗಡೆ ಹಾಗೂ ಕನ್ನಡ ಕಲೆ, ಪರಂಪರೆ, ಸಂವಾದ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಂಭ್ರಮಿಸುವುದು ಈ ವಸಂತ ಸಾಹಿತ್ಯೋತ್ಸವದ ಮೂಲ ಉದ್ದೇಶವಾಗಿತ್ತು

ಬೆಂಕಿ ಬಸಣ್ಣನವರು ತಮ್ಮ ನಗೆ-ಬೆಳಕು ಕಾರ್ಯಕ್ರಮದಲ್ಲಿ ಹೇಳಿದ ಹಾಗೆ "ಮೇರಿಲ್ಯಾಂಡ್" ಶಬ್ದಕ್ಕೆ ಎರಡು ರೀತಿಯ ವಿಶಿಷ್ಟ ಅರ್ಥಗಳಿವೆ. ಇಂಗ್ಲೀಷ್​ನಲ್ಲಿ "Merry" ಅಂದ್ರೆ "ಆನಂದ" ಅಥವಾ "ಉಲ್ಲಾಸ". ಹಾಗಾಗಿ ಮೇರಿಲ್ಯಾಂಡ್ ಅಂದ್ರೆ ಆನಂದದ-ಭೂಮಿ, ಖುಷಿಯ-ಜಾಗ. ಆಯೋಜಕರು ಮೂರು ದಿವಸಗಳ ಕಾಲ ನಮ್ಮ ಹೊಟ್ಟೆಗೆ ಮೃಷ್ಟಾನ್ನ ಭೋಜನ ಮತ್ತು ನಮ್ಮ ಮನಸ್ಸಿಗೆ ಸಾಹಿತ್ಯ, ಸಂಗೀತ, ನೃತ್ಯ, ಗಾಯನ, ಹರಟೆ ಹೀಗೆ ಸಂತೋಷವನ್ನು ಉಣಬಡಿಸಿ ಈ ಸ್ಥಳವನ್ನು "ಮೆರ್ರಿ-ಲ್ಯಾಂಡ್" ಮಾಡಿದ್ದಾರೆ. ಇದು ಅಲ್ಲದೇ ಹಿಂದಿಯಲ್ಲಿ "ಮೇರಿ-ಲ್ಯಾಂಡ್ ", ಮೇರಾ-ಲ್ಯಾಂಡ್" ಅಂದ್ರೆ "ನನ್ನ-ಜಾಗ", ನನ್ನ "ಮಾತೃ-ಭೂಮಿ" ಎಂದು ಅರ್ಥ. ಸುಮಾರು ನಾಲ್ಕು ನೂರು ಸಮಾನ ಮನಸ್ಕ ಕನ್ನಡ ಸಾಹಿತ್ಯ ಪ್ರೇಮಿಗಳನ್ನು ಒಂದೇ ಸೂರಿನಡಿ ಸೇರಿಸಿ ಅಮೆರಿಕದಲ್ಲಿ ಮಿನಿ-ಕರ್ನಾಟಕ ಸೃಷ್ಟಿಸಿ ಮೇರಿ- ಲ್ಯಾಂಡ್ ( ನನ್ನ ಮಾತೃ ಭೂಮಿ) ಮಾಡಿದ್ದಾರೆ.

ಕಳೆದ ಆರೇಳು ತಿಂಗಳುಗಳಿಂದ ಹಗಲು ರಾತ್ರಿ ಅವಿರತವಾಗಿ ಶ್ರಮಿಸಿ ಈ ಮೂರು ದಿನಗಳ ಸಾಹಿತ್ಯ ಸಮ್ಮೇಳನವನ್ನು ತುಂಬಾ ಚೆನ್ನಾಗಿ ಆಯೋಜಿಸಿದ ಕೀರ್ತಿ ಮತ್ತು ಯಶಸ್ಸು ಶರಾವತಿ ಕನ್ನಡ ಬಳಗದ ಅಧ್ಯಕ್ಷರಾದ ಸುನಿಲ್ ವೆಂಕಟೇಶ್ ಮತ್ತು ಉಪಾಧ್ಯಕ್ಷರಾದ ಫಣಿಶ್ರೀ ನಾರಾಯಣನ್ ಹಾಗೂ ಸಮಿತಿಯವರಿಗೆ ಮತ್ತು ಕನ್ನಡ ಸಾಹಿತ್ಯ ರಂಗದ ಆಡಳಿತ ಮಂಡಳಿಯ ಅಧ್ಯಕ್ಷರಾದ ಮೈ. ಶ್ರೀ. ನಟರಾಜ್ ಹಾಗೂ ಕಾರ್ಯಕಾರಿ ಸಮಿತಿಯ ಅಧ್ಯಕ್ಷರಾದ ಶ್ರೀಕಾಂತ ಬಾಬು ಮತ್ತು ತಂಡದವರಿಗೆ ಸಲ್ಲುತ್ತದೆ.

Benki Basanna 2

ಮೂರು ದಿನಗಳ ಈ ಸಾಹಿತ್ಯ ಹಬ್ಬದಲ್ಲಿ ವಿಶೇಷ ಅತಿಥಿಗಳಾಗಿ ಪ್ರಖ್ಯಾತ ಸಾಹಿತಿಗಳಾದ ಡಾ. ಎಚ್. ಎಸ್. ಶ್ರೀಮತಿ, ಡಾ. ಕೆ. ವಿ. ನಾರಾಯಣ ತುಂಬಾ ಉತ್ಸಾಹದಿಂದ ಭಾಗವಹಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ, ಪ್ರಸಿದ್ಧ ಚಲನಚಿತ್ರ ನಿರ್ದೇಶಕ ಟಿ. ಎಸ್. ನಾಗಾಭರಣ, ಬಾಬು ಹಿರಣ್ಣಯ್ಯ ಮುಂತಾದ ಗಣ್ಯರ ಉಪಸ್ಥಿತಿ ಸಮ್ಮೇಳನಕ್ಕೆ ಶೋಭೆ ತಂದಿತ್ತು.

ಈ ಸಾಹಿತ್ಯೋತ್ಸವದಲ್ಲಿ ಅಮೆರಿಕದಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರು ಬರೆದ ಹೊಸ ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮೈ. ಶ್ರೀ. ನಟರಾಜ್ ಬರೆದ "ಗಾಳಿಯಲ್ಲಿ ಹಾರಿ ಬಂದ ಹೂಗಳು" ಮತ್ತು "ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ" ನಳಿನಿ ಮೈಯ ಸಂಪಾದಿಸಿದ "ಕಡಲು ಮತ್ತು ದಡ", ಸವಿತಾ ರವಿಶಂಕರ್ ವಿರಚಿತ ಮಕ್ಕಳ ಪುಸ್ತಕ "ಚಿಲಿಪಿಲಿ ಕನ್ನಡ ಕಲಿ", ಕಾವ್ಯ ಕಡಮೆಯವರು ಬರೆದ ಮೂರು ನಾಟಕಗಳು, ಡಾ. ಸ್ವರ್ಣ ಲತಾ ವಿರಚಿತ "ಮಹಾಭಾರತದ ವನಿತೆಯರ ವಿನೂಪನ ನೆನಪುಗಳು- ಯೋಜನ ಗಂಧಿ" ಪುಸ್ತಕಗಳು ಬಿಡುಗಡೆಯಾದವು. ತ್ರಿವೇಣಿ ರಾವ್ ಮತ್ತು ಉಮಾ ವೆಂಕಟೇಶ್ ಈ ಹೊಸ ಪುಸ್ತಕಗಳಲ್ಲಿ ಅಡಗಿರುವ ಹೂರಣವನ್ನು ಸಾಹಿತ್ಯಸಕ್ತರಿಗೆ ಪರಿಚಯಿಸುವ ಲೇಖಕರೊಂದಿಗೆ ಚಿಕ್ಕ ಮಾತುಕತೆ ಕಾರ್ಯಕ್ರಮವನ್ನು ತುಂಬಾ ಅಚ್ಚುಕಟ್ಟಾಗಿ ನಡೆಸಿಕೊಟ್ಟರು.

ಮೂರು ದಿನಗಳ ಈ ಸಾಹಿತ್ಯ ಸಮ್ಮೇಳನದಲ್ಲಿ ನಡೆದ ವಿವಿಧ ಕಾರ್ಯಕ್ರಮಗಳ ನಿರೂಪಣೆಯನ್ನು ಫಣಿಶ್ರೀ, ರಂಜಿನಿ ಕೃಷ್ಣನ್, ಶೃತಿ ರಾವ್, ಸಂದೇಶ್ ವಾಸಪ್ಪ, ಶ್ರೀಪ್ರದಾ ಆಚಾರ್ ಮತ್ತು ಡಾ. ಸ್ವರ್ಣ ಲತಾ ಅದ್ಭುತವಾಗಿ ನಡೆಸಿಕೊಟ್ಟರು. ಅದರಲ್ಲೂ ಸಂದೇಶ್ ಮತ್ತು ಫಣಿಶ್ರಿಯವರ ಸಮಯೋಚಿತ ಆಶು ಕವಿತೆಗಳು ಪ್ರೇಕ್ಷಕರಿಗೆ ಕಚಗುಳಿ ಕೊಟ್ಟವು.

Benki Basanna 3

ಶುಕ್ರವಾರ ಸಂಜೆ ಮೇ 17 ರಂದು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿ 11ನೇ ವಸಂತ ಸಾಹಿತ್ಯೋತ್ಸವವನ್ನು ಉದ್ಘಾಟಿಸಿದರು. ಈ ಸಾಹಿತ್ಯೋತ್ಸವದ ಸ್ಮರಣ ಸಂಚಿಕೆ 'ವಾಸಂತಿ'ಯನ್ನು ಬಿಡುಗಡೆಗೊಳಿಸಲಾಯಿತು. ನಂತರ ಮೇರಿಲ್ಯಾಂಡಿನ ಶರಾವತಿ ಕನ್ನಡ ಬಳಗದ ಮಕ್ಕಳಿಂದ ಸಮೂಹ ಗಾನ, ಮ್ಯಾಂಡೊಲಿನ್ ವಾದನ ಮತ್ತು ಸ್ಥಳೀಯ ಸ್ವರ ಲಹರಿ ತಂಡದವರಿಂದ ಭಾವಗೀತೆಗಳ ಕಾರ್ಯಕ್ರಮ ಏರ್ಪಾಡಾಗಿತ್ತು. ಕರ್ನಾಟಕದ ಪ್ರಸಿದ್ಧ ಲೇಖಕ ಶ್ರೀವತ್ಸ ಜೋಶಿ ಅವರು ಸ್ವರ ಲಹರಿ ತಂಡದವರ ಮಧುರ ಭಾವಗೀತೆಗಳಿಗೆ ರಸವತ್ತಾದ ನಿರೂಪಣೆ ಮಾಡಿದರು.

ಶನಿವಾರ ಬೆಳಿಗ್ಗೆ ತುಂತುರು ಮಳೆಯಲ್ಲಿ ತಾಯಿ ಭುವನೇಶ್ವರಿ ದೇವಿಯ ಪಲ್ಲಕ್ಕಿಯ ಮೆರವಣಿಗೆ ಬಲು ಸಂಭ್ರಮದಿಂದ ನಡೆಯಿತು. ಈ ಮೆರವಣಿಗೆಯಲ್ಲಿ ಕನ್ನಡಿಗರು ಜಾನಪದ ಹಾಡುಗಳಿಗೆ ಹೆಜ್ಜೆ ಹಾಕುತ್ತಾ, ಕೋಲಾಟವಾಡುತ್ತಾ ಸಾಗಿದರು. ಮುಖ್ಯ ಅತಿಥಿಗಳಾದ ಸ್ತ್ರೀವಾದಿ, ಚಿಂತಕಿ ಎಚ್. ಎಸ್. ಶ್ರೀಮತಿಯವರು ಸ್ತ್ರೀ ಸಂವೇದನೆ ಮತ್ತು ಸ್ತ್ರೀ-ಸ್ವಾವಲಂಬನೆ ವಿಷಯದ ಬಗ್ಗೆ ಮಾತನಾಡಿದರು. ಮಧ್ಯಾಹ್ನ ಭೋಜನಕ್ಕೆ ರಾಗಿ ಮುದ್ದೆ, ಬಸ್ಸಾರು ವಿಶೇಷ ಆಕರ್ಷಣೆಯಾಗಿತ್ತು. ಮಧ್ಯಾಹ್ನ ಭೋಜನದ ನಂತರ "ಸ್ತ್ರೀವಾದ - ನಿನ್ನೆ, ಇಂದು, ನಾಳೆ" ಕಾರ್ಯಕ್ರಮದ ನಿರ್ವಹಣೆಯನ್ನು ಪೂರ್ಣಿಮಾ ಕಶ್ಯಪ್ ಮತ್ತು ಸತ್ಯ ಪ್ರಕಾಶ್ ಕಾಗಿನೆಲೆ ನಡೆಸಿಕೊಟ್ಟರು. ಈ ಸಂವಾದದಲ್ಲಿ ಅರ್ಚನಾ ಮೂರ್ತಿ, ನಂದಿತಾ ನಾರಾಯಣನ್, ರವಿ ಹರಪನಹಳ್ಳಿ, ವೈಶಾಲಿ ಹೆಗಡೆ, ಶಶಿಧರ ಹಾಲಾಡಿ ಹಾಗೂ ಹರಿಚರಣ್ ಮೈಲಾರಯ್ಯ ಭಾಗವಹಿಸಿದ್ದರು. ಕಳೆದ ಎರಡು ವರ್ಷಗಳಲ್ಲಿ ಅಗಲಿದ ಕನ್ನಡದ ಬರಹಗಾರರು, ಸಾಹಿತಿಗಳಿಗೆ ಶ್ರದ್ಧಾಂಜಲಿ ಕೋರಲಾಯಿತು.

ಹೊಯ್ಸಳ ಮಹಿಳಾ ತಂಡ, ಡೆಲಾವೇರ್ ಇವರಿಂದ ನೃತ್ಯ ಮತ್ತು ಡ್ಯಾಲಸ್ ನ ಮಲ್ಲಿಗೆ ಕನ್ನಡ ಕೂಟದಿಂದ 'ಮತ್ತೆ ಬಂದ ಹುಚ್ಚುರಾಯ' ಎಂಬ ನಗೆ ನಾಟಕ ಪ್ರದರ್ಶನಗೊಂಡವು. "ರಂಗ ಭೂಮಿ ಮತ್ತು ಸ್ತ್ರೀ" ಸಂವಾದದಲ್ಲಿ ಪ್ರಖ್ಯಾತ ಚಲನಚಿತ್ರ ನಿರ್ದೇಶಕ ನಾಗಭರಣ, ಅವರ ಧರ್ಮ ಪತ್ನಿ ನಾಗಿಣಿ ಭರಣ, ನಿತೀಶ್ ಶ್ರೀಧರ್ ಮತ್ತು ಸುಮಾ ಮುರಳಿಧರ್ ಭಾಗವಹಿಸಿದ್ದರು.

Benki Basanna 4

ಶನಿವಾರ ಸಾಯಂಕಾಲ ಪ್ರೈಮ್ ಟೈಮ್ ಶೋನಲ್ಲಿ ಬೆಂಕಿ ಬಸಣ್ಣರವರ "ನಗೆ ಬೆಳಕು" ಹಾಸ್ಯ ಪ್ರಹಸನ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಿಸಿತು. ಪ್ರಸಿದ್ಧ ಹಿನ್ನಲೆ ಗಾಯಕರಾದ ಸಾಧ್ವಿನಿ ಕೊಪ್ಪ ಹಾಗೂ ಸಚಿನ್ ಭಾರದ್ವಾಜ್ ತಮ್ಮ ಮಧುರ ಗಾಯನದಿಂದ ಎಲ್ಲರನ್ನು ರಂಜಿಸಿದರು. ಅಂದು ಸಂಜೆ ವರ್ಜೀನಿಯದ ರಂಗ ವರ್ತುಲ ತಂಡ ಪ್ರದರ್ಶಿಸಿದ ಪ್ರೇಮಕವಿ ಡಾ. ಕೆ.ಎಸ್. ನರಸಿಂಹಸ್ವಾಮಿಯವರ ಕವಿತೆಗಳನ್ನಾಧರಿಸಿದ ಜನಪ್ರಿಯ ನೃತ್ಯ ನಾಟಕ 'ಮೈಸೂರು ಮಲ್ಲಿಗೆ' ನೆರೆದಿದ್ದ ಸಭಿಕರನ್ನು ಮೋಡಿ ಮಾಡಿ, ಬೇರೆಯ ಲೋಕಕ್ಕೆ ಕರೆದೊಯ್ದಿತ್ತು

ಮೂರು ದಿವಸಗಳ ಕಾಲ ರಾಗಿ ಮುದ್ದೆ, ಬಸ್ಸಾರು, ಬಿಳಿ ಹೋಳಿಗೆ, ಎಣ್ಣೆಗಾಯಿ, ಚಿತ್ರಾನ್ನ, ಬಿಸಿ ಬೇಳೆ ಬಾತ್, ಪುಳಿಯೋಗರೆ, ಮಜ್ಜಿಗೆ ಹುಳಿ, ಕೋಸಂಬರಿ ಮೈಸೂರ್ ಪಾಕ್, ಹೋಳಿಗೆ, ಲಾಡು, ಬಜ್ಜಿ, ಪಕೋಡ, ಉದ್ದಿನ ವಡೆ ಹೀಗೆ ಬಗೆ ಬಗೆಯ ಪಕ್ಕಾ ಕರ್ನಾಟಕದ ಮೃಷ್ಟಾನ್ನ ಭೋಜನ ಅಥಿತಿಗಳನ್ನು ಸಂತುಷ್ಟಗೊಳಿಸಿತು.

ರವಿವಾರ ಬೆಳಿಗ್ಗೆ ಮೈ. ಶ್ರೀ. ನಟರಾಜ್ ಅವರ ನಿರ್ವಹಣೆಯಲ್ಲಿ ನಡೆದ "ಕುಮಾರವ್ಯಾಸ ಭಾರತ - ಆಂಗ್ಲಭಾಷೆಯಲ್ಲಿ!" ಕಾರ್ಯಕ್ರಮದಲ್ಲಿ ಡಾ. ಶ್ರೀಧರ ಗಮಕವಾಚನ ಮಾಡಿದರು ಹಾಗೂ ಇದರ ಬಗ್ಗೆ ನಡೆದ ಚರ್ಚೆಯಲ್ಲಿ ಡಾ. ಕೆ. ವಿ. ನಾರಾಯಣ, ಡಾ. ನಾರಾಯಣ ಹೆಗಡೆ ಮತ್ತು ಡಾ. ಶ್ರೀಧರ ಭಾಗವಹಿಸಿದ್ದರು.

Benki Basanna 5

ಖ್ಯಾತ ರಂಗ ಕಲಾವಿದ ಬಾಬು ಹಿರಣ್ಣಯ್ಯ ಮಾರ್ಗದರ್ಶನದಲ್ಲಿ ಸೃಷ್ಟಿಯಾದ ಮಧುಸೂಧನ್ ಅಕ್ಕಿಹೆಬ್ಬಾಳ್ ಮತ್ತು ಲಕ್ಷ್ಮಿ ಹರೀಶ್ ರ ಅಬ್ಧಿ ಅಮೇರಿಕಾ ಕ್ರಿಯೇಷನ್ಸ್ರವರ 'ಸವೆಯಲಿ ಬದುಕು ' ಎನ್ನುವ ವಿಡಿಯೋ ಗೀತೆಯನ್ನು ಬಿಡುಗಡೆ ಮಾಡಲಾಯಿತು.

"ಗಂಡಸಿಗೆ ಯಾಕೆ ಬೇಕು ಗೌರಿ ದುಃಖ" ಎಂಬ ಆಸಕ್ತಿದಾಯಕ ಚರ್ಚೆಯಲ್ಲಿ ಅವನಿ ಕಶ್ಯಪ್, ಗುಂಡು ಶಂಕರ್, ತಾಂಡವಮೂರ್ತಿ, ತೋನ್ಸೆ ಕೃಷ್ಣರಾಜು, ವಸುಂದರ ಕಂದಾಚಾರ್ ಮತ್ತು ಶಶಿಕಲಾ ಚಂದ್ರಶೇಖರ್ ತಮ್ಮ ವಾದ ಮಂಡಿಸಿದರು.

ಹೊಸ ಬರಹಗಾರರಿಗೆ ವೇದಿಕೆ ಒದಗಿಸುವ "ಸಾಹಿತ್ಯ ಗೋಷ್ಠಿ" ಕಾರ್ಯಕ್ರಮದಲ್ಲಿ ಕಾವ್ಯ ಕಡಮೆ, ಪವಿತ್ರ ರಾಜೀವ್, ಪ್ರೇಮ ನವೀನ್, ಫಣಿಶ್ರೀ ನಾರಾಯಣನ್, ರವಿ ರವಿಶಂಕರ್, ರಂಜಿನಿ ಬಾಣಾವರ, ರಾಘವ ಹರಿವಾಣಂ, ಲಕ್ಷ್ಮೀನಾರಾಯಣ ಗಣಪತಿ, ಲೋಕೇಶ ಆರಣಿ, ಮತ್ತು ಸವಿತಾ ರವಿಶಂಕರ್ ಭಾಗವಹಿಸಿ ತಮ್ಮ ಸ್ವರಚಿತ ಕವನ, ಲೇಖನ, ಪ್ರಬಂಧ ಮುಂತಾದವುಗಳನ್ನು ಪ್ರಸ್ತುತಪಡಿಸಿದರು. ಈ ಕಾರ್ಯಕ್ರಮವನ್ನು ಬಹುಮುಖ ಪ್ರತಿಭೆಯ ತ್ರಿವೇಣಿ ರಾವ್ ತುಂಬಾ ಯಶಸ್ವಿಯಾಗಿ ನಡೆಸಿಕೊಟ್ಟರು.

ಮುಖ್ಯ ಅತಿಥಿಗಳೊಂದಿಗೆ ಸಂವಾದವನ್ನು ಗುರುಪ್ರಸಾದ್ ಕಾಗಿನೆಲೆ ಮತ್ತು ಕಾವ್ಯ ಕಡಮೆ ನಡೆಸಿಕೊಟ್ಟರು. ಮುಖ್ಯ ಅತಿಥಿಗಳಾದ ಎಚ್. ಎಸ್. ಶ್ರೀಮತಿ ಮತ್ತು ಕೆ. ವಿ. ನಾರಾಯಣ ರವರೊಂದಿಗೆ ಪುರುಷಕೇಂದ್ರಿತ ಸಮಾಜದಲ್ಲಿ ಸ್ತ್ರೀವಾದವನ್ನು ಕುರಿತು ಸಂವಾದವನ್ನು ಏರ್ಪಡಿಸಲಾಗಿತ್ತು.

Benki Basanna 6

ಶರಾವತಿ ಕನ್ನಡ ಬಳಗದ ಮಕ್ಕಳು ಕನ್ನಡ ನಾಡಿನ ಜನಪ್ರಿಯ ಕವಿಗಳ ಕವಿತೆ, ವಚನಗಳನ್ನು ಪ್ರಸ್ತುತಿಪಡಿಸಿದರು. ನಾಗಿಣಿ ಭರಣರವರು ಪ್ರಥಮ ಬಾರಿಗೆ ನಿರ್ದೇಶಿಸಿದ 'ಜೀನಿಯಸ್ ಮುತ್ತ' ಚಲನಚಿತ್ರ ಪ್ರದರ್ಶನ ಮಾಡಲಾಯಿತು.

ಈ ಸಮ್ಮೇಳನಕ್ಕೆ ಶರಾವತಿ ಕನ್ನಡ ಬಳಗದ ಆಡಳಿತ ಮಂಡಳಿ ಮತ್ತು ಕಾರ್ಯಕಾರಿ ಸಮಿತಿಯ ಸ್ವಯಂಸೇವಕರಾದ ಚಂದ್ರಮೋಹನ್ ಮೈಲಾರಪ್ಪ, ಗುರುಪ್ರಸಾದ್ ಸುಬ್ಬಣ್ಣ, ಸಂದೇಶ್ ವಾಸಪ್ಪ, ಶೈಲನ್ ಮಂಡ್ಯಮ್, ಸುನಿಲ್ ವೆಂಕಟೇಶ್, ಫಣಿಶ್ರೀ ನಾರಾಯಣನ್, ಮಂಜು ಕುಮಾರ, ಹರ್ಷವರ್ಧನ್, ಕಮಲಾ ಚಿಲಗೋಡ್, ನವೀನ್ ಕುಮಾರ್, ಪ್ರಮೋದ್ ಕೆ ಜೆ, ರಂಜಿನಿ ಬಾಣಾವರ, ಸೇಫ್ರ ಆಂಥೋನಿ, ಶ್ರೀಪ್ರದಾ ಆಚಾರ್, ರಾಘವೇಂದ್ರ ಶ್ರುತಿ ರಾವ್, ಪೂರ್ಣಿಮಾ ನಾಗರಾಜ್, ರಾಘವಾ ಹರಿವಾಣಂ , ಶುಭದ ಐರಾಣಿ ಹೀಗೆ ನೂರಾರು ಸ್ವಯಂಸೇವಕರು ಅವಿರತವಾಗಿ ಶ್ರಮಿಸಿದ್ದಾರೆ.ಕಳೆದ ಅನೇಕ ತಿಂಗಳುಗಳಿಂದ ಈ ಸಾಹಿತ್ಯೋತ್ಸವಕ್ಕೆ ಅವಿರತ ಶ್ರಮಿಸಿದ ವಿವಿಧ ಸಮಿತಿಗಳ ಸದಸ್ಯರು, ಸ್ವಯಂ ಸೇವಕರು ಹಾಗೂ ಪ್ರಾಯೋಜಿಕರಿಗೆ ಅನಂತ ಕೃತಜ್ಞತೆಗಳು.

Benki Basanna 7
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net