ನ್ಯೂಸ್

ನಟ ಯಶ್​ ನನ್ನ ಬಳಿ ಬಂದು ಕಣ್ಣೀರಿಟ್ಟಿದ್ದ! ಭಾರೀ ವೈರಲ್​ ಆಗ್ತಿದೆ ತಮಿಳು ನಟ ಜೈ ಆಕಾಶ್​ ಹೇಳಿಕೆ

ಬೆಂಗಳೂರು: ಕೆಜಿಎಫ್​ ಚಿತ್ರದ ಮೂಲಕ ಸ್ಯಾಂಡಲ್​ವುಡ್​​ ಸಿನಿಮಾ ಮಾರುಕಟ್ಟೆಯನ್ನು ರಾಷ್ಟ್ರವ್ಯಾಪಿ ವಿಸ್ತರಿಸಿದಲ್ಲದೆ, ನ್ಯಾಷನಲ್​ ಸ್ಟಾರ್​ ಆಗಿ ಹೊಮ್ಮಿದ ನಟ ರಾಕಿಂಗ್​ ಸ್ಟಾರ್​ ಯಶ್​ ಇಂದು ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಒಂದು ಕಾಲದಲ್ಲಿ ಯಶ್​ ಅವಕಾಶಗಳಿಗಾಗಿ ಅಲೆಯುತ್ತಿದ್ದರು. ಆದರೀಗ ಯಶ್​ ಕಾಲ್​ಶೀಟ್​ಗಾಗಿ ನಿರ್ಮಾಪಕರು ಕಾದು ಕುಳಿತಿದ್ದಾರೆ. ಯಾವುದೇ ಇಂಡಸ್ಟ್ರಿಗೆ ಹೋದರು ಯಶ್​ ಬಗ್ಗೆ ಮಾತನಾಡುವವರು ಇದ್ದಾರೆ. ಆ ಮಟ್ಟಕ್ಕೆ ಯಶ್​ ಬೆಳೆದಿದ್ದಾರೆ.

ಯಶ್​ ಅವರ ಸಿನಿ ಪಯಾಣ ಅಷ್ಟು ಸುಲಭವಾಗಿರಲಿಲ್ಲ. ಸಿನಿಮಾ ರಂಗದಲ್ಲಿ ಬ್ಯಾಕ್​ಗ್ರೌಂಡ್​ ಇರುವವರೇ ಯಶಸ್ಸು ಸಿಗದೇ ಒಂದೇ ಒಂದು ಯಶಸ್ಸಿಗಾಗಿ ಇನ್ನೂ ಪ್ರಯತ್ನ ಪಡುತ್ತಿದ್ದಾರೆ. ಅಂತಹದರಲ್ಲಿ ಕಡಿಮೆ ಅವಧಿಯಲ್ಲಿ ಯಶ್​ ನ್ಯಾಷನಲ್​ ಸ್ಟಾರ್​ ಆಗಿ ಹೊರಹೊಮ್ಮಲು ಅವರಲ್ಲಿರುವ ಪ್ರತಿಭೆಯೇ ಕಾರಣ ಎಂದು ಖಚಿತವಾಗಿ ಹೇಳಬಹುದಾಗಿದೆ. ಆರಂಭದಲ್ಲಿ ಯಶ್​ ಎಷ್ಟು ಕಷ್ಟಪಟ್ಟಿದ್ದರು ಎಂಬುದಕ್ಕೆ ತಮಿಳು ನಟ ಜೈ ಆಕಾಶ್​ ಆಡಿರುವ ಒಂದು ಮಾತು ತಾಜಾ ಉದಾಹರಣೆಯಾಗಿದೆ. ಜೈ ಆಕಾಶ್​ ಆಡಿರುವ ಮಾತು ಇದೀಗ ಎಲ್ಲೆಡೆ ವೈರಲ್​ ಆಗುತ್ತಿದೆ.

ತಮಿಳು ಮಾಧ್ಯಮಗಳು ಮುಂದೆ ಜೈ ಆಕಾಶ್​ ಅವರು ಮಾತನಾಡುವಾಗ ಯಶ್​ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಕೆಜಿಎಫ್​ನಲ್ಲಿ ನಟಿಸಿರುವ ಯಶ್​ ಬಗ್ಗೆ ಅನೇಕ ಜನರಿಗೆ ಇಂದು ತಿಳಿದಿದೆ. ಯಶ್​ ಅವರು ಮೊದಲು ನಟಿಸಿದ್ದು ನಾನು ಹೀರೋ ಆಗಿ ನಟಿಸಿದ ಸಿನಿಮಾದಲ್ಲಿ. ನನ್ನ ತಮ್ಮನ ಪಾತ್ರವನ್ನು ಮಾಡಿದ್ದರು. ಅವರನ್ನು ಆಯ್ಕೆ ಮಾಡಿದ್ದೇ ನಾನು. ನಾನು ಮತ್ತೆ ಧಾರವಾಹಿಯನ್ನು ಮಾಡಲಾರೆ ಇಲ್ಲಿ ಯಾರು ಅವಕಾಶಗಳನ್ನು ಕೊಡುವುದಿಲ್ಲ ಅಂತಾರೆ ಎಂದು ಕಣ್ಣೀರು ಹಾಕಿದ್ದ. ಅವನನ್ನು ಸಮಾಧಾನ ಮಾಡಿ, ಊಟ ಮಾಡಿಸಿ ಅವನ್ನು ಸಿನಿಮಾಗೆ ಆಯ್ಕೆ ಸಹ ಮಾಡಿದೆ. ನಾನೇ ಆತನನ್ನು ಪಿಕಪ್​​ ಮತ್ತು ಡ್ರಾಪ್​ ಮಾಡುತ್ತಿದ್ದೆ. ಕೊನೆಗೆ ಆ ಸಿನಿಮಾ ಹಿಟ್​ ಆಯಿತು. ಬಳಿಕ ನಾನು ತೆಲುಗು ಮತ್ತು ತಮಿಳಿನಲ್ಲಿ ಬಿಜಿಯಾದೆ ಮತ್ತು ಯಶ್​ ಕನ್ನಡದಲ್ಲಿ ಅವಕಾಶಗಳು ಸಿಕ್ಕಿ ಅವರೊಬ್ಬ ಸ್ಟಾರ್​ ಆದರು ಎಂದು ಹೇಳಿದ್ದಾರೆ.

ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಂದಹಾಗೆ ಆಕಾಶ್​ ಮತ್ತು ಯಶ್​ ಜತೆಯಾಗಿ ನಟಿಸಿದ ಸಿನಿಮಾ ಯಾವುದೆಂದರೆ ಅದು ಜಂಬದ ಹುಡುಗಿ ಸಿನಿಮಾ. ಈ ಚಿತ್ರವನ್ನು ಪ್ರಿಯಾ ಹಾಸನ್​ ನಿರ್ದೇಶನ ಮಾಡಿದರು. ಜೈ ಆಕಾಶ್​ ಅವರಿಗೆ ಇದು ಮೊದಲ ಕನ್ನಡ ಸಿನಿಮಾ ಆಗಿತ್ತು. ಇದೇ ಸಿನಿಮಾದಲ್ಲಿ ಯಶ್​ ನಟನೆ ಮಾಡಿದ್ದಾರೆ. ಇದು ಯಶ್​ ಅವರ ಮೊದಲ ಸಿನಿಮಾ. ಆಕಾಶ್​ ಅವರು ಜಂಬದ ಹುಡುಗಿ ಸಿನಿಮಾ ಸೇರಿದಂತೆ ಹೀಗೂ ಉಂಟೆ, ಜಯಯೇ ಕನ್ನಡ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ತಮಿಳು ಮತ್ತು ತೆಲುಗಿನಲ್ಲಿ ಹೆಚ್ಚಿನ ಸಿನಿಮಾಗಳನ್ನು ಮಾಡಿದ್ದಾರೆ. ಸದ್ಯ ಅವರು ನೀಡಿರುವ ಹೇಳಿಕೆ ಇದೀಗ ವೈರಲ್​ ಆಗುತ್ತಿದ್ದು, ಯಶ್​ ಅವರ ಆರಂಭದಲ್ಲಿ ಎಷ್ಟು ಕಷ್ಟಪಟ್ಟಿದ್ದರು ಎನ್ನುವುದಕ್ಕೆ ಇದು ತಾಜಾ ಉದಾಹರಣೆಯಾಗಿದೆ.

ಇಂದು ಯಶ್​ ಸಿನಿಮಾ ಕ್ಷೇತ್ರದಲ್ಲಿ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಸಿನಿಮಾಗಳಲ್ಲದೆ, ಜಾಹಿರಾತುಗಳಲ್ಲಿಯು ಯಶ್​ ತೊಡಗಿಸಿಕೊಂಡಿದ್ದಾರೆ. ಅಲ್ಲದೆ, ಸಿನಿಮಾ ಸೇವೆಗಾಗಿ ಫಿಲ್ಮಫೇರ್​ ಅವಾರ್ಡ್​, ಸೈಮಾ, ಐಫಾ ಉತ್ಸವ ಹಾಗೂ ದಾದಾ ಸಾಹೇಬ್​ ದಕ್ಷಿಣ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗೆ ಯಶ್​ ಭಾಜನರಾಗಿದ್ದಾರೆ. ಇದನ್ನು ಹೊರತುಪಡಿಸಿದರೆ, ವಿವಾದವು ಯಶ್​ ಅವರಿಗೆ ಹೊರಾತಾಗಿಲ್ಲ ಬಾಡಿಗೆ ಮನೆ ವಿವಾದ, ಐಟಿ ರೈಡ್​ ಸೇರಿದಂತೆ ಕೆಲ ಕಹಿಘಟನೆಗಳನ್ನು ಯಶ್​ ಅನುಭವಿಸಿದ್ದು, ಒಟ್ಟಾರೆ ಇಂದು ನ್ಯಾಷನಲ್​ ಸ್ಟಾರ್​ ಆಗಿ ಹೊರಹೊಮ್ಮಿದ್ದಾರೆ. (ಏಜೆನ್ಸೀಸ್​)