ನ್ಯೂಸ್

ಬಾಲಿವುಡ್​ ನಟ ರಣದೀಪ್​ ಹೂಡಗೆ ಚಿತ್ರಲೇಖಕಿಯ ನೋಟೀಸ್​!

ಮುಂಬೈ: ಲೇಖಕಿಯೊಬ್ಬರು ತಮ್ಮ ಕಥೆಗಳನ್ನು ಸಿನಿಮಾ ಮಾಡುವ ಭರವಸೆಯನ್ನು ಈಡೇರಿಸಲಿಲ್ಲ ಎಂದು ಬಾಲಿವುಡ್​ ನಟ ರಣದೀಪ್​ ಹೂಡ ಮತ್ತಿತರರಿಗೆ ಲೀಗಲ್​ ನೋಟೀಸ್​ ನೀಡಿದ್ದಾರೆ. ಸೂರತ್​​ನಲ್ಲಿ ಚಲನಚಿತ್ರ ಕಥೆಗಾರ್ತಿ ಮತ್ತು ಕವಿ ಎನ್ನಲಾದ ಪ್ರಿಯಾಂಕಾ ಶರ್ಮ ಎಂಬುವರು ಈ ನೋಟೀಸ್​ ನೀಡಿದ್ದು, ಹೂಡ ಅವರಿಂದ 10 ಕೋಟಿ ರೂ. ಪರಿಹಾರದ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.

ತಮ್ಮ 1200 ಹಾಡುಗಳನ್ನು ಮತ್ತು 40 ಕಥೆಗಳನ್ನು ರಣದೀಪ್​ ಹೂಡ ಮತ್ತು ಅವರ ಕುಟುಂಬದ ಸದಸ್ಯರಿಗೆ, ರಣದೀಪ್​ರ ಮ್ಯಾನೇಜರ್​ ಪಾಂಚಾಲಿ ಚೌಧರಿಗೆ ಮತ್ತು ಮೇಕಪ್​ ಕಲಾವಿದೆ ರೇಣುಕಾ ಪಿಳ್ಳೈಗೆ ಈಮೇಲ್ ಮತ್ತು ವಾಟ್ಸಾಪ್​ ಮೂಲಕ ಕಳುಹಿಸಿರುವುದಾಗಿ ಆಕೆಯ ವಕೀಲರಾದ ರಜತ್​ ಕಲ್ಸನ್​ ನೋಟೀಸಿನಲ್ಲಿ ಹೇಳಿದ್ದಾರೆ. ಹೂಡ ತಮ್ಮ ಕಥೆಗಳನ್ನು ಸಿನಿಮಾ ಮಾಡಲು ಬಳಸುವುದಾಗಿ ಭರವಸೆ ನೀಡಿ ಈಡೇರಿಸಿಲ್ಲ. ನಂತರ ತಮ್ಮ ಬರಹಗಳನ್ನು ವಾಪಸ್​ ಕೇಳಿದರೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ಲೇಖಕಿ ಪ್ರಿಯಾಂಕಾ ಆರೋಪಿಸಿದ್ದಾರೆ ಎನ್ನಲಾಗಿದೆ.

ಈ ಬಗ್ಗೆ ಪ್ರಿಯಾಂಕಾ ಶರ್ಮ ಅವರು ಹರಿಯಾಣ ಡೈರೆಕ್ಟರ್​ ಜನರಲ್ ಆಫ್​ ಪೊಲೀಸ್​ನ ರೇಂಜ್ ಕಮಿಷನರ್​ಗೆ ದೂರು ನೀಡಿದ್ದಾರೆ ಎನ್ನಲಾಗಿದ್ದು, ಕಳೆದ 8 ವರ್ಷಗಳಿಂದ ತಮ್ಮನ್ನು ಈ ನಿಟ್ಟಿನಲ್ಲಿ ಶೋಷಿಸಿದ್ದಕ್ಕೆ ಪರಿಹಾರವಾಗಿ 10 ಕೋಟಿ ರೂಪಾಯಿ ನೀಡಬೇಕೆಂದು ನೋಟೀಸಿನಲ್ಲಿ ಹೇಳಿದ್ದಾರೆ ಎನ್ನಲಾಗಿದೆ. (ಏಜೆನ್ಸೀಸ್)