ನ್ಯೂಸ್

ಆಹಾರ ಶ್ರೇಯಾಂಕದಲ್ಲಿ ಐದನೇ ಸ್ಥಾನ ಪಡೆದ ಮಾವಿನಕಾಯಿ ಚಟ್ನಿ; ರುಚಿಕರ ಮಾತ್ರವಲ್ಲ ಆರೋಗ್ಯಕರವೂ ಹೌದು..

ಹಣ್ಣುಗಳ ರಾಜ ಎಂದು ಕರೆಯುವ ಮಾವಿನಹಣ್ಣನ್ನು ತಿನ್ನಲು ಯಾರಿಗೆ ಇಷ್ಟವಿಲ್ಲ ಹೇಳಿ. ಮಾವಿನ ಹಣ್ಣನ್ನು ಸರಳವಾಗಿ ತಿನ್ನುವುದಲ್ಲದೆ ಅದರಿಂದ ಅನೇಕ ವಿಧವಿಧದ ಪಾಕವಿಧಾನಗಳನ್ನು ಮಾಡಬಹುದು. ಅದರಲ್ಲಿ ಮಾವಿನ ಆಮ್ರಾಸ್, ಹಸಿ ಮಾವಿನ ಚಟ್ನಿ, ಮಾವಿನ ಹಣ್ಣಿನ ಶೇಕ್ ಪ್ರಸಿದ್ಧವಾಗಿವೆ. ಅಲ್ಲದೆ ಆಹಾರ ಶ್ರೇಯಾಂಕದ ಸೈಟ್ ಟೇಸ್ಟ್ ಅಟ್ಲಾಸ್​​ನಲ್ಲಿ ಭಾರತದ ಎರಡು ಮಾವಿನ ಖಾದ್ಯಗಳು ಮೊದಲ ಹತ್ತರಲ್ಲಿ ಸ್ಥಾನ ಪಡೆದುಕೊಂಡಿದೆ. ಪ್ರಪಂಚದಾದ್ಯಂತದ ಈ ನೆಚ್ಚಿನ ಮಾವಿನ ಖಾದ್ಯಗಳ ಪಟ್ಟಿಯಲ್ಲಿ ನಮ್ಮ ನೆಚ್ಚಿನ ಮಾವಿನ ಹಣ್ಣಿನ ರಸವು ಮೊದಲ ಸ್ಥಾನವನ್ನು ಪಡೆದುಕೊಂಡಿದೆ. ಅಲ್ಲದೆ ಮಸಾಲೆಯುಕ್ತ ಮಾವಿನಕಾಯಿ ಚಟ್ನಿ ಕೂಡ ಐದನೇ ಸ್ಥಾನವನ್ನು ಗಳಿಸಿದೆ. ಈ ಹಸಿ ಮಾವಿನಕಾಯಿ ಚಟ್ನಿಯನ್ನು ಯಾರು ತಿನ್ನಲು ಇಷ್ಟಪಡುವುದಿಲ್ಲ? ಈ ಮಾವಿನಕಾಯಿ ಚಟ್ನಿ ರುಚಿಯಾಗಿರುವುದು ಮಾತ್ರವಲ್ಲ.. ಆರೋಗ್ಯಕರವೂ ಹೌದು. ವಿಟಮಿನ್ ಸಿ ಮತ್ತು ಫೈಬರ್​​ ಇದರಲ್ಲಿ ಕಂಡುಬರುವುದರಿಂದ ಇದು ಚರ್ಮದ ಜತೆಗೆ ಜೀರ್ಣಕ್ರಿಯೆಯ ಆರೋಗ್ಯವನ್ನು ಸುಧಾರಿಸುತ್ತದೆ. ಇದು ವಿಶೇಷವಾಗಿ ಬೇಸಿಗೆಯಲ್ಲಿ ಜೀರ್ಣಕಾರಿ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ. ಮಸಾಲೆಯುಕ್ತ ಮಾವಿನಕಾಯಿ ಚಟ್ನಿ ಮಾಡುವ ತುಂಬಾ ಸುಲಭ ವಿಧಾನ ಹೀಗಿದೆ..

  • ಒಂದರಿಂದ ಎರಡು ಮಾವಿನಕಾಯಿ
  • ಶುಂಠಿ ಅರ್ಧ ಇಂಚು
  • ಒಂದು ಟೀಚಮಚ ಜೀರಿಗೆ
  • ರುಚಿಗೆ ತಕ್ಕಂತೆ ಉಪ್ಪು
  • 2-3 ಹಸಿರು ಮೆಣಸಿನಕಾಯಿಗಳು
  • 5-7 ಕರಿಬೇವಿನ ಎಲೆಗಳು
  • ಅರ್ಧ ಟೀಚಮಚ ಸಕ್ಕರೆ

ಮಾವಿನಕಾಯಿ ಚಟ್ನಿ ಮಾಡುವುದು ಹೀಗೆ:

  • ಮಾವಿನಕಾಯಿ ಚಟ್ನಿ ಮಾಡಲು ಮೊದಲು ಮಾವಿನಕಾಯಿಯ ಸಿಪ್ಪೆ ತೆಗೆದು ಸಣ್ಣ ತುಂಡುಗಳಾಗಿ ಕತ್ತರಿಸಿ.
  • ನಂತರ ಕತ್ತರಿಸಿದ ಮಾವಿನಕಾಯಿಯ ತುಂಡುಗಳನ್ನು ಮಿಕ್ಸರ್​​ ಜಾರ್​ಗೆ ಹಾಕಿ, ಜತೆಗೆ ಉಪ್ಪು, ಮೆಣಸಿನಕಾಯಿ, ಕರಿಬೇವಿನ ಸೊಪ್ಪು, ಶುಂಠಿ, ಜೀರಿಗೆ ಮತ್ತು ಸಕ್ಕರೆ ಸೇರಿಸಿ ರುಬ್ಬಿಕೊಳ್ಳಿ.
  • ನುಣ್ಣಗೆ ರುಬ್ಬಿದ ನಂತರ ಬಟ್ಟಲಿನಲ್ಲಿ ತೆಗೆದುಕೊಂಡು ತಿನ್ನಲು ಬಡಿಸಿ.