ಎಲ್ಲರ ಬದುಕೂ ಈಗ ಕರೊನಾ ಸುತ್ತಲೇ ಗಿರಕಿ ಹೊಡೆಯುತ್ತಿದೆ. ಇದ್ದಲ್ಲೇ ಇದ್ದು ಎಲ್ಲರಿಗೂ ಬೋರಾಗಿದೆ. ಮೊಬೈಲು, ಟಿ.ವಿ. ನೋಡಿ ನೋಡಿ ಸಾಕಾಗಿದೆ. ಇಂಥ ಹೊತ್ತಿನಲ್ಲೇ ನಮ್ಮೆಲ್ಲರನ್ನೂ ನಗಿಸಲು ಮತ್ತೊಂದು ‘ನಗೆ ದಿನ’ ಬಂದಿದೆ. ಕನ್ನಡದ ಖ್ಯಾತ ಹಾಸ್ಯ‘ಪನ್’ಡಿತರಾದ ಎಚ್. ಡುಂಡಿರಾಜ್ ಅವರು ‘ವಿಜಯವಾಣಿ’ ಓದುಗರಿಗಾಗಿಯೇ ಹನಿಗವನಗಳನ್ನು ಹೊಸೆದು ಕೊಟ್ಟಿದ್ದಾರೆ. ಬನ್ನಿ ಸವಿಯೋಣ.
ಮಾರಿ-ಮಾರ
ಕರೊನಾ ಮಾರಿ ಅನ್ನುವುದಕ್ಕೆ
ಸ್ತ್ರೀವಾದಿಗಳ ಆಕ್ಷೇಪ
ಇದರ ಹಿಂದಿದೆ ಪುರುಷರ
ಪಿತೂರಿ ಎಂಬ ಆರೋಪ
ಹಾಗಾದರೆ ಮಾರ ಅನ್ನಲೆ?
ಚೆನ್ನಾಗಿಲ್ಲ ಅದರ ರೂಪ!
ಗೃಹಲಕ್ಷ್ಮಿ
ಹೆಂಡತಿ ಗೃಹಲಕ್ಷ್ಮಿ ಮನೆಯೊಳಗೇ ಇದ್ದರೆ
ಗಂಡನಿಗೆ ತುಂಬಾ ಒಳಿತಯ್ಯ
ಹೋಟೆಲ್, ಮಾಲ್, ಸಿನಿಮಾ, ಪಾರ್ಲರ್
ಖರ್ಚಲ್ಲಿ ಭಾರೀ ಉಳಿತಾಯ!