NEP: ಯಾವುದೇ ಕಾರಣಕ್ಕೂ 2020ರ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (NEP) ತಮಿಳುನಾಡು ಜಾರಿಗೆ ತರುವುದಿಲ್ಲ. ಕೇಂದ್ರ ಸರ್ಕಾರವು ರಾಜ್ಯಕ್ಕೆ 10,000 ಕೋಟಿ ರೂ. ಕೊಟ್ಟರೂ ಎನ್ಇಪಿ ಅಳವಡಿಸಲು ನಾವು ಸಿದ್ಧವಿಲ್ಲ. ಈ ವಿಷಯದಲ್ಲಿ ಕೇಂದ್ರದ "ಹಿಂದಿ ಹೇರಿಕೆ"ಯನ್ನು ತಮಿಳುನಾಡು ವಿರೋಧಿಸುತ್ತದೆ ಎಂದು ರಾಜ್ಯದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಹೇಳಿದ್ದಾರೆ.
ಇದರೊಂದಿಗೆ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರುವ ಇತರ ಅಂಶಗಳ ಕಾರಣದಿಂದಾಗಿಯೂ ನಾವು ಎನ್ಇಪಿ ಸ್ವೀಕರಿಸಲು ಸಿದ್ಧವಿಲ್ಲ ಎಂದರು. ತಮಿಳುನಾಡಿನ ಕಡಲೂರಿನಲ್ಲಿ ನಡೆದ ಪೋಷಕರ-ಶಿಕ್ಷಕರ ಸಂಘದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಸಿಎಂ ಸ್ಟಾಲಿನ್, "ನಾವು ಯಾವುದೇ ಭಾಷೆಯನ್ನು ವಿರೋಧಿಸುವುದಿಲ್ಲ. ಆದ್ರೆ, ಅದರ ಹೇರಿಕೆಯನ್ನು ವಿರೋಧಿಸುವಲ್ಲಿ ಬದ್ಧರಾಗಿರುತ್ತೇವೆ. ಹಿಂದಿ ಭಾಷೆಯನ್ನು ಹೇರುವ ಪ್ರಯತ್ನಕ್ಕಾಗಿ ಮಾತ್ರ ನಾವು ಎನ್ಇಪಿಯನ್ನು ವಿರೋಧಿಸುತ್ತಿಲ್ಲ. ಇತರ ಕಾರಣಗಳಿಂದಾಗಿಯೂ ವಿರೋಧ ಮಾಡುತ್ತಿದ್ದೇವೆ" ಎಂದರು.
ತಮಿಳುನಾಡಿನಲ್ಲಿ ಈ ನೀತಿಯ ಅನುಷ್ಠಾನದ ಬಗ್ಗೆ ಗದ್ದಲ ಹೆಚ್ಚಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದ ಎಂ.ಕೆ. ಸ್ಟಾಲಿನ್, "ತಮಿಳುನಾಡು ಎನ್ಇಪಿಯನ್ನು ಜಾರಿಗೆ ತರದಿದ್ದರೆ ಕೇಂದ್ರ ಪ್ರಾಯೋಜಿತ ಉಪಕ್ರಮವಾದ ಸಮಗ್ರ ಶಿಕ್ಷಾ ಅಭಿಯಾನದಡಿ ನೀಡುವ 2,000 ಕೋಟಿ ರೂ.ಗಳನ್ನು ತಡೆ ಹಿಡಿಯುವುದಾಗಿ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ನಮಗೆ ಬೆದರಿಕೆ ಹಾಕಿದ್ದಾರೆ" ಎಂದು ದೂರಿದ್ದಾರೆ.
ಇದನ್ನೂ ಓದಿ: ಚಾಂಪಿಯನ್ಸ್ ಟ್ರೋಫಿ ಇತಿಹಾಸದಲ್ಲಿ ಅತ್ಯಧಿಕ ಮೊತ್ತ ಕಲೆಹಾಕಿದ ತಂಡಗಳು ಯಾವುವು? ಇಲ್ಲಿದೆ ನೋಡಿ ವಿವರ | Champions Trophy
"ನಮ್ಮ ರಾಜ್ಯ ಎನ್ಇಪಿಯನ್ನು ಜಾರಿಗೊಳಿಸಿದರೆ ಮಾತ್ರ ತಮಿಳುನಾಡಿಗೆ 2,000 ಕೋಟಿ ರೂ.ಗಳು ಸಿಗುತ್ತವೆ ಎಂದು ಕೇಂದ್ರ ಹೇಳುತ್ತಿದೆ. ಇನ್ನೂ 10,000 ಕೋಟಿ ರೂ.ಗಳನ್ನು ನೀಡಿದರೂ ನಾವು ಎನ್ಇಪಿ ಒಪ್ಪುವುದಿಲ್ಲ. ಇದನ್ನು ಒಪ್ಪುವ ಮೂಲಕ ನಮ್ಮ ರಾಜ್ಯವನ್ನು 2,000 ವರ್ಷಗಳ ಹಿಂದಕ್ಕೆ ತಳ್ಳುವ ಪಾಪ ಕೃತ್ಯವನ್ನು ನಾನು ಮಾಡೋದಿಲ್ಲ" ಎಂದು ಸ್ಟಾಲಿನ್ ಗುಡುಗಿದ್ದಾರೆ,(ಏಜೆನ್ಸೀಸ್),.