ಬೆಂಗಳೂರು: ಅಂತಾರಾಷ್ಟ್ರೀಯ ಮಹಿಳಾ ದಿನದ ಅಂಗವಾಗಿ ವಿಜಯವಾಣಿ ಮತ್ತು ದಿಗ್ವಿಜಯ 24*7 ನ್ಯೂಸ್ ಚಾನಲ್ ವತಿಯಿಂದ ಬುಧವಾರ (ಮಾ.8) ಮಹಿಳಾ ವಾಕಥಾನ್- 2023, ಸಾಧಕಿಯರಿಗೆ ವರ್ಷದ ಮಹಿಳೆ ಪ್ರಶಸ್ತಿ ಪ್ರದಾನ ಸಮಾರಂಭ, ನಾರಿಶಕ್ತಿ ಸಂಭ್ರಮ ಶೀರ್ಷಿಕೆಯಡಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಹಾಗೂ ಪತ್ರಿಕೋದ್ಯಮ ವಿಭಾಗದ ಸಹಯೋಗದಲ್ಲಿ ಸೆಂಟ್ರಲ್ ಕಾಲೇಜು ಆವರಣದಲ್ಲಿರುವ ಜ್ಞಾನಜ್ಯೋತಿ ಆಡಿಟೋರಿ ಯಂನಲ್ಲಿ ಕಾರ್ಯ ಕ್ರಮ ಸಭಾ ಕಾರ್ಯಕ್ರಮಗಳು ನಡೆಯಲಿವೆ. ಅದಕ್ಕೆ ಮುನ್ನ ವಿಧಾನಸೌಧದ ಮುಂಭಾಗದಿಂದ ಜ್ಞಾನಜ್ಯೋತಿ ಸಭಾಂಗಣದವರೆಗೆ ನಡೆಯಲಿ ರುವ ‘ಸಮಾನತೆಗಾಗಿ ನಡಿಗೆ’ ಮಹಿಳಾ ವಾಕಥಾನ್ಗೆ ಬೆಳಗ್ಗೆ 6.30ಕ್ಕೆ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಚಾಲನೆ ನೀಡಲಿದ್ದಾರೆ. ನಟ ನೆನಪಿರಲಿ ಪ್ರೇಮ್ ನಟಿ ಅದಿತಿ ಪ್ರಭುದೇವ, ಬೆಂಗಳೂರು ನಗರ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ.ನರಸಿಂಹ ಮೂರ್ತಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ವೇಷಭೂಷಣ ಸ್ಪರ್ಧೆ: ವೀರನಾರಿಯರ ವೇಷಭೂಷಣ ಸ್ಪರ್ಧೆ ಆಯೋಜಿಸಲಾಗಿದೆ. ವಯಸ್ಸಿನ ಮಿತಿ ಇಲ್ಲದೆ ಎಲ್ಲರೂ ಭಾಗವಹಿಸಬಹುದು. ವಿಜೇತರಾದವರಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನಕ್ಕೆ ನಗದು ಬಹುಮಾನ ಮತ್ತು ಐವರಿಗೆ ಸಮಾಧಾನಕರ ಬಹುಮಾನ ನೀಡಲಾಗುತ್ತದೆ.
ಬುಲೆಟ್ ರೈಡ್ ಆಕರ್ಷಣೆ: ವಾಕಥಾನ್ನಲ್ಲಿ ಮಹಿಳೆಯರ ಬುಲೆಟ್ ರೈಡ್ ಇರಲಿದೆ. ಹೀಲ್ಸ್ ಆನ್ ವ್ಹೀಲ್ಸ್ ಹಾಗೂ ಶೀ ಫಾರ್ ಸೊಸೈಟಿಯ ಮಹಿಳಾ ಸದಸ್ಯರು ವಾಕಥಾನ್ನಲ್ಲಿ ಬುಲೆಟ್ ಓಡಿಸುವ ಮೂಲಕ ಆಕರ್ಷಿಸಲಿದ್ದಾರೆ.
ಮಹಿಳಾ ಗೋಷ್ಠಿ: ಮಧ್ಯಾಹ್ನ 1 ಗಂಟೆಗೆ ‘ಆಧುನಿಕ ಮಹಿಳೆ ಸಾಧನೆ, ಸಂವೇದನೆ’ ವಿಷಯ ಕುರಿತ ಮಹಿಳಾ ಗೋಷ್ಠಿಯಲ್ಲಿ ಹಿರಿಯ ಐಎಎಸ್ ಅಧಿಕಾರಿ ಶಾಲಿನಿ ರಜನೀಶ್, ನಟಿ ಸಪ್ತಮಿ ಗೌಡ, ಉದ್ಯಮಿ ಸ್ನೇಹಾ ರಾಕೇಶ್ ಇರಲಿದ್ದಾರೆ.
ಸಾಂಸ್ಕೃತಿಕ ವೈವಿಧ್ಯ: ಜ್ಞಾನಜ್ಯೋತಿ ಸಭಾಂಗಣದಲ್ಲಿ ನಡೆಯಲಿರುವ ‘ನಾರಿ ಶಕ್ತಿ ಸಂಭ್ರಮ’ ಕಾರ್ಯಕ್ರಮದಲ್ಲಿ ಬೆಳಗ್ಗೆ 9 ಗಂಟೆಗೆ ಗಾನಶ್ರೀ ತಂಡದಿಂದ ಸುಗಮ ಸಂಗೀತ, ಜಾನಪದ ಸಂಗೀತಗೋಷ್ಠಿ ನಡೆಯಲಿದೆ. ಬಳಿಕ ವೀರಗಾಸೆ ಕುಣಿತ, ಕಂಸಾಳೆ, ಡೊಳ್ಳು ವಾದನ, ಯಕ್ಷಕಲಾ ಅಕಾಡೆಮಿ ವತಿಯಿಂದ ಮಹಿಳಾ ಯಕ್ಷಗಾನ, ಇಂದುಶ್ರೀ ರವೀಂದ್ರ ಅವರಿಂದ ಧ್ವನಿಮಾಯೆ ಮನರಂಜನೆ ಹಾಗೂ ‘ವೀರನಾರಿಯರ ವೇಷಭೂಷಣ ಸ್ಪರ್ಧೆ’ ಸೇರಿ ಇತರೆ ಕಾರ್ಯಕ್ರಮ ಆಯೋಜಿಸಲಾಗಿದೆ.