ಅಸ್ವಸ್ಥ ಮಹಿಳೆ ಸ್ಟ್ರೆಚರ್​ನಲ್ಲಿರುವುದು. 
ನ್ಯೂಸ್

ಎಷ್ಟು ಕೋರಿಕೊಂಡರೂ ಆಸ್ಪತ್ರೆಗೆ ದಾಖಲಿಸಿಕೊಳ್ಳಲಿಲ್ಲ; ವೈದ್ಯರು-ಸಿಬ್ಬಂದಿ ನಿರ್ಲಕ್ಷ್ಯಕ್ಕೆ ಬಲಿಯಾದ ಮಹಿಳೆ

ಬೆಂಗಳೂರು: ಮಳೆಯಿಂದಾಗಿ ನೀರು ತುಂಬಿಕೊಂಡಿದ್ದ ಅಂಡರ್​ಪಾಸ್​ನಲ್ಲಿ ಕಾರು ಸಿಕ್ಕಿಕೊಂಡು ತೊಂದರೆಗೀಡಾಗಿ ಅಸ್ವಸ್ಥಗೊಂಡಿದ್ದವರೊಬ್ಬರನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳಲು ವೈದ್ಯರು ಮತ್ತು ಸಿಬ್ಬಂದಿ ಹಿಂದೇಟು ಹಾಕಿದ್ದರಿಂದ ಅವರು ಆಸ್ಪತ್ರೆಯಲ್ಲೇ ಅನ್ಯಾಯವಾಗಿ ಸಾವಿಗೀಡಾಗಿದ್ದಾರೆ. ಸಾವಿಗೀಡಾದ ಮಹಿಳೆ ಇನ್​ಫೊಸಿಸ್ ಉದ್ಯೋಗಿ, ಹೈದರಾಬಾದ್ ಮೂಲದ ಭಾನುರೇಖಾ (22) ಎಂದು ತಿಳಿದುಬಂದಿದೆ.

ಬೆಂಗಳೂರು ಪ್ರವಾಸಕ್ಕೆಂದು ಆಂಧ್ರಪ್ರದೇಶದಿಂದ ಕ್ಯಾಬ್​ನಲ್ಲಿ ಕುಟುಂಬವೊಂದು ಬಂದಿದ್ದು, ಅವರಿದ್ದ ವಾಹನ ಕೆ.ಆರ್​.ಸರ್ಕಲ್ ಬಳಿಯ ಅಂಡರ್​ಪಾಸ್​ನಲ್ಲಿ ಸಿಲುಕಿತ್ತು. ಆಗ ಕ್ಯಾಬ್​ನಲ್ಲಿದ್ದವರು ನೀರಿನಲ್ಲಿ ಮುಳುಗುವ ಭೀತಿಯಿಂದ ಜೋರಾಗಿ ಕಿರುಚಿದ್ದಾರೆ. ಆಗ ಸಾರ್ವಜನಿಕರು ಹಾಗೂ ತಕ್ಷಣಕ್ಕೆ ಧಾವಿಸಿದ್ದ ಅಗ್ನಿಶಾಮಕ ಸಿಬ್ಬಂದಿಯವರು ಒಬ್ಬೊಬ್ಬರನ್ನೇ ಮೇಲೆತ್ತಿ ರಕ್ಷಣೆ ಮಾಡಿದ್ದಾರೆ.

ಆ ಪೈಕಿ ಅಸ್ವಸ್ಥರಾಗಿದ್ದ ಒಬ್ಬರನ್ನು ಆಟೋದಲ್ಲಿ ಸೇಂಟ್ ಮಾರ್ಥಾಸ್ ಆಸ್ಪತ್ರೆಗೆ ಕರೆತಂದರೂ ಅಲ್ಲಿದ್ದ ಸಿಬ್ಬಂದಿ ಮತ್ತು ವೈದ್ಯರು ದಾಖಲಿಸಿಕೊಂಡು ಚಿಕಿತ್ಸೆ ನೀಡಲು ಹಿಂದೇಟು ಹಾಕಿದ್ದರು. ಬಳಿಕ ರೊಚ್ಚಿಗೆದ್ದ ಸಾರ್ವಜನಿಕರೇ ಮಹಿಳೆಯನ್ನು ಸ್ಟ್ರೆಚರ್​​ನಲ್ಲಿ ಮಲಗಿಸಿಕೊಂಡು ಒಳಕ್ಕೆ ಕರೆದೊಯ್ದು ಆಗ್ರಹಪೂರ್ವಕವಾಗಿ ಪರೀಕ್ಷೆ ಮಾಡಿಸಿದ್ದಾರೆ. ಅಷ್ಟರಲ್ಲಾಗಲೇ ಆಕೆ ಸಾವಿಗೀಡಾಗಿದ್ದಾಳೆಂದು ಪಲ್ಸ್ ನೋಡಿದ ವೈದ್ಯರು ಸ್ಪಷ್ಟಪಡಿಸಿದ್ದಾರೆ. ಸುಮಾರು ಒಂದು ಗಂಟೆ ಕಾಲ ಆಸ್ಪತ್ರೆ ಮುಂದೆ ಗೋಗರೆದರೂ ಚಿಕಿತ್ಸೆ ನೀಡಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಆಸ್ಪತ್ರೆಗೆ ಪೊಲೀಸರು ಆಗಮಿಸಿದ್ದಾರೆ.