ನವದೆಹಲಿ: ಮೆಟ್ರೋ ರೈಲುಗಳು, ರೈಲ್ವೆ ನಿಲ್ದಾಣಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ ನಾಚಿಕೆ ಬಿಟ್ಟು ಡಾನ್ಸ್ ಮಾಡುವ ಟ್ರೆಂಡ್ ಇತ್ತೀಚೆಗೆ ಹೆಚ್ಚಾಗುತ್ತಿದೆ. ಆನ್ಲೈನ್ನಲ್ಲಿ ನೆಟ್ಟಿಗರ ಆಕ್ರೋಶ ಮತ್ತು ಅಧಿಕಾರಿಗಳ ಪುನರಾವರ್ತಿತ ಎಚ್ಚರಿಕೆಯ ನಡುವೆಯೂ ಕೆಲ ಕಂಟೆಂಟ್ ಕ್ರಿಯೆಟರ್ಗಳು ತಮ್ಮ ಹುಚ್ಚಾಟವನ್ನು ನಿಲ್ಲಿಸುವಂತೆ ಕಾಣುತ್ತಿಲ್ಲ. ಇದೀಗ ಮತ್ತೊಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅದರಲ್ಲಿ ಇಬ್ಬರು ಯುವತಿಯರು, ಪ್ರಯಾಣಿಕರು ತುಂಬಿರುವ ರೈಲಿನ ಒಳಗೆ ಭೋಜ್ಪುರಿ ಹಾಡಿಗೆ ಹುಚ್ಚೆದ್ದು ಕುಣಿದಿದ್ದಾರೆ.
ಬೂದು ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಜೀನ್ಸ್ ಧರಿಸಿ ಸೊಂಟ ಬಳಕಿಸಿರುವ ಯುವತಿಯನ್ನು ಜಯಾ ಜೆರ್ರಿ ಎಂದು ಗುರುತಿಸಲಾಗಿದೆ. ಈಕೆ ಪ್ರಖ್ಯಾತ ಡಾನ್ಸರ್ ಮತ್ತು ಕಂಟೆಂಟ್ ಕ್ರಿಯೆಟರ್ ಆಗಿದ್ದು, ಇನ್ಸ್ಟಾಗ್ರಾಂನಲ್ಲಿ 1.7 ಲಕ್ಷ ಫಾಲೋವರ್ಸ್ಗಳನ್ನು ಹೊಂದಿದ್ದಾರೆ. ಭೋಜ್ಪುರಿಯ ಕೇಸರಿ ಲಾಲ್ ಯಾದವ್ ಅವರ ಸಾಜ್ ಕೆ ಸವಾರ್ ಕೆ ಹಾಡಿಗೆ ರೈಲಿನ ಒಳಗೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದ್ದಾರೆ. ವಿಡಿಯೋ ಕೊನೆಯಲ್ಲಿ ಜಯಾ ಜತೆ ಆಕೆಯ ಸ್ನೇಹಿತೆಯು ಸಹ ಸೇರಿಕೊಂಡು ಹಾಡಿಗೆ ಹೂಕ್ ಸ್ಟೆಪ್ ಹಾಕುತ್ತಾರೆ. ಇದೇ ಸಂದರ್ಭದಲ್ಲಿ ಇಬ್ಬರು ರೈಲಿನ ಒಳಗೆ ಮಲಗಿರುವುದನ್ನು ಜಯಾ ಅವರ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿರುವ ವಿಡಿಯೋದಲ್ಲಿ ಕಾಣಬಹುದು.
ಭೋಜ್ಪುರಿ ಲವರ್ಸ್ ಇದು ಹೇಗಿದೆ ಎಂದು ನನಗೆ ತಿಳಿಸಿ ಎಂದು ವಿಡಿಯೋಗೆ ಜಯಾ ಅಡಿಬರಹ ನೀಡಿದ್ದಾರೆ. ವಿಡಿಯೋವನ್ನು ಹಂಚಿಕೊಂಡಾಗಿನಿಂದ ಈವರೆಗೂ 7 ಮಿಲಿಯನ್ಗೂ ಅಧಿಕ ವೀಕ್ಷಣೆ ಮತ್ತು 1.7 ಲಕ್ಷಕ್ಕೂ ಅಧಿಕ ಲೈಕ್ಗಳು ಬಂದಿವೆ. ಕಾಮೆಂಟ್ ಬಾಕ್ಸ್ನಲ್ಲಿ ಅಭಿಪ್ರಾಯಗಳ ಹೊಳೆಯೇ ಹರಿದಿದ್ದು, ಕೆಲವರು ಜಯಾ ಅವರ ಆತ್ಮವಿಶ್ವಾಸವನ್ನು ಮೆಚ್ಚಿಕೊಂಡರೆ, ಇನ್ನು ಕೆಲವರು ರೀಲ್ ಶೂಟ್ ಮಾಡಿದ ಸ್ಥಳವನ್ನು ಪ್ರಶ್ನೆ ಮಾಡಿದ್ದಾರೆ. ಇದೊಂದು ನ್ಯೂಸೆನ್ಸ್ ಆಗಿದ್ದು, ಆಕೆಯ ವಿರುದ್ಧ ಭಾರತೀಯ ರೈಲ್ವೆ ಇಲಾಖೆ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಗಮನಿಸಬೇಕಾದ ಸಂಗತಿ ಏನೆಂದರೆ, ಜಯಾ ಅವರು ಜನಪ್ರಿಯ ಡಾನ್ಸ್ ಗ್ರೂಪ್ ಬಾಂಬ್ ಫೈರ್ ಕ್ರ್ಯೂ ಭಾಗವಾಗಿದ್ದರು. ಈ ಗ್ರೂಪ್ ಇಂಡಿಯಾಸ್ ಗಾಟ್ ಟ್ಯಾಲೆಂಟ್‌ನ ಸೀಸನ್ 9ರಲ್ಲಿ ರನ್ನರ್-ಅಪ್ ಸ್ಥಾನವನ್ನು ಪಡೆದಿತ್ತು. ಜಯಾ ಅವರ ಇನ್ಸ್ಟಾಗ್ರಾಂ ಖಾತೆಯಲ್ಲಿ ಬರೀ ಡಾನ್ಸ್ ವಿಡಿಯೋಗಳೇ ತುಂಬಿದೆ. (ಏಜೆನ್ಸೀಸ್)