More

    ಡಿ.2ರಿಂದ ಮಲ್ಲೇಶ್ವರದಲ್ಲಿ ಕಡಲೆಕಾಯಿ ಪರಿಷೆ

    ಬೆಂಗಳೂರು: ಪ್ರತಿವರ್ಷದಂತೆ ಈ ಬಾರಿಯೂ ಕಾರ್ತಿಕ ಮಾಸದ ಪ್ರಯುಕ್ತ ನಗರದ ಕಾಡುಮಲ್ಲೇಶ್ವರ ದೇವಾಲಯದಲ್ಲಿ ಕಡಲೆಕಾಯಿ ಪರಿಷೆ ಆಚರಣೆಗೆ ಸಿದ್ಧತೆ ಆರಂಭವಾಗಿದ್ದು, ಡಿ. 2ರಿಂದ 4ರವರೆಗೆ ಆಯೋಜಿಸಲಾಗಿದೆ.

    7ನೇ ವರ್ಷದ ಪರಿಷೆ ಹಾಗೂ ದೇವಾಲಯದ ಬಯಲು ರಂಗ ಮಂಟಪದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ಕಾಡುಮಲ್ಲೇಶ್ವರ ಗೆಳಯರ ಬಳಗ ಮತ್ತು ಮುಜಾರಾಯಿ ಇಲಾಖೆ ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆಯಲಿರುವ ಪರಿಷೆಯನ್ನು ಶನಿವಾರ (ಡಿ. 2) ಬೆಳಗ್ಗೆ 11 ಗಂಟೆಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಚಾಲನೆ ನೀಡಲಿದ್ದಾರೆ. ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ, ಮೇಲ್ಮನೆ ಸದಸ್ಯ ಬಿ.ಕೆ. ಹರಿಪ್ರಸಾದ್, ಶಾಸಕ ಡಾ. ಸಿ.ಎನ್. ಅಶ್ವತ್ಥನಾರಾಯಣ ಮತ್ತಿತರರು ಭಾಗವಹಿಸಲಿದ್ದಾರೆ ಎಂದು ಬಳಗದ ಅಧ್ಯಕ್ಷ ಬಿ.ಕೆ. ಶಿವರಾಂ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ಈ ಬಾರಿಯ ಪರಿಷೆಯ ಕೇಂದ್ರಬಿಂದು- ನಂದಿ. 800 ಕೆ.ಜಿ. ಕಡಲೆಕಾಯಿಯಿಂದ ಅಲಂಕರಿಸುವ 20 ಅಡಿ ಎತ್ತರ ಹಾಗೂ 20 ಅಡಿ ಉದ್ದದ ನಂದಿ ತಲೆಯೆತ್ತಲಿದೆ. ಪರಿಷೆ ಅಂಗವಾಗಿ ಕಾಡುಮಲ್ಲೇಶ್ವರ ಸ್ವಾಮಿಗೆ ಕಡಲೆಕಾಯಿ ಅಭಿಷೇಕ ಹಾಗೂ ಅಲಂಕಾರ ನಡೆಯಲಿದೆ. ಭಕ್ತರಿಗೆ ಕಡಲೆಕಾಯಿಯನ್ನು ಪ್ರಸಾದವಾಗಿ ನೀಡಲಿದ್ದು, 8 ಲಕ್ಷ ಜನರು ಆಗಮಿಸುವ ನಿರೀಕ್ಷೆ ಇದೆ. ಪರಿಸರಸ್ನೇಹಿ ಪರಿಷೆ ಆಚರಿಸಲಾಗುತ್ತಿದ್ದು, ‘ಪರಿಸರ ಉಳಿಸಿ ಬೆಳೆಸಿ’ ಎಂಬ ೋಷವಾಕ್ಯದೊಂದಿಗೆ ‘ಚೈತನ್ಯೋತ್ಸವ’ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

    ಪ್ಲಾಸ್ಟಿಕ್‌ಮುಕ್ತ ಪರಿಷೆ: ಪರಿಷೆಗೆ ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲದೆ ತಮಿಳುನಾಡು, ಆಂಧ್ರ ಪ್ರದೇಶ, ತೆಲಂಗಾಣ ಮತ್ತಿತರ ರಾಜ್ಯಗಳಿಂದಲೂ ನೂರಾರು ರೈತರು ಕಡಲೆಕಾಯಿ ಮಾರಾಟಕ್ಕೆ ಆಗಮಿಸಲಿದ್ದಾರೆ. 200 ಮಳಿಗೆಗಳ ವ್ಯವಸ್ಥೆ ಮಾಡಲಾಗುವುದು. ಪರಿಸರ ಜಾಗೃತಿ ಮೂಡಿಸುವ ಮೂಲಕ ಈ ಬಾರಿ ಸಂಪೂರ್ಣ ಪ್ಲಾಸ್ಟಿಕ್ ಮುಕ್ತ ಪರಿಷೆ ಆಚರಿಸಲಿದ್ದೇವೆ ಎಂದು ತಿಳಿಸಿದರು.

    ಸಾಂಸ್ಕೃತಿಕ ಕಾರ್ಯಕ್ರಮ: ಡಿ.2ರಂದು ಸಂಜೆ ಸಂಜೆ ಜಿತ್ವಾವನ ಮಹಿಳಾ ಯಕ್ಷಗಾನ ಮಂಡಳಿಯ ಶೈಲಜಾ ಜೋಶಿ ಮತ್ತು ತಂಡದವರಿಂದ ಯಕ್ಷಗಾನ ಪ್ರದರ್ಶನ. ಡಿ.3ರಂದು ಬೆಳಗ್ಗೆ 11.30ಕ್ಕೆ ಪಂಚಮ ಸಂಗೀತ ತಂಡದ ಎಲ್. ಶಿವಕುಮಾರ್ ಮತ್ತು ತಂಡದವರಿಂದ ಸುಗಮ ಸಂಗೀತ. ಸಂಜೆ ಮಧು ಮನೋಹರ್ ಮತ್ತು ಕಾರ್ತಿಕ್ ಪಾಂಡವಪುರ ತಂಡದವರಿಂದ ಡಾ.ರಾಜ್ ಸವಿನೆನಪಿನಲ್ಲಿ ಮಧುರ ನೆನಪಿನ ಗಾನ ಕಾರ್ಯಕ್ರಮದಲ್ಲಿ ನವಯುವ ಹೋಟೆಲ್ ಮಾಲೀಕ ಮೋಹನ್ ರಾವ್ ಭಾಗವಹಿಸಲಿದ್ದಾರೆ. ಸಂಜೆ 6.30ಕ್ಕೆ ಭವಾನಿ ಗಾನ ವೃಂದದವರಿಂದ ವಿದುಷಿ ಶೈಲಜ ಶ್ರೀನಾಥ್ ಮತ್ತು ತಂಡದವರಿಂದ ಶಿವ ವೀಣಾ ಗಾನ ಸಂಗಮ ಇರಲಿದೆ. ಶ್ರೀ ವಿದ್ಯಾಮಂದಿರ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್. ಬಾಬು ಭಾಗವಹಿಸಲಿದ್ದಾರೆ.

    ಕಾಂಗ್ರೆಸ್ ಮುಖಂಡ ಅನೂಪ್ ಅಯ್ಯಂಗಾರ್, ಸಮಾಜಸೇವಕ ಚಂದ್ರಶೇಖರ್ ನಾಯ್ಡು, ಹಿಮಾಂಶು ಶಾಲೆಯ ಪ್ರಾಂಶುಪಾಲ ಚಂದ್ರಮೌಳಿ, ಅರ್ಚಕರಾದ ಗಂಗಾಧರ್ ದೀಕ್ಷಿತ್, ಶಶಿಧರ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts