ಮಧ್ಯಪ್ರದೇಶ: ಮನೆಗೆ ಬಂದ ಗಂಡನಿಗೆ ತಂಪಾದ ಜ್ಯೂಸ್ ನೀಡಿದ ಮಹಿಳೆ, ಅದಕ್ಕೆ ವಿಷ ಬೆರಸಿ ಪತಿಯನ್ನು ಹತ್ಯೆಗೈಯಲು ಮುಂದಾದ ವಿಚಿತ್ರ ಘಟನೆಯೊಂದು ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ವರದಿಯಾಗಿದೆ.
ಈ ಹಿಂದೆ ಎರಡು ಮದುವೆಯಾಗಿದ್ದ ಕೋಮಲ್ ಎಂಬ ಮಹಿಳೆ, ಮೋಹಿತ್ ಶರ್ಮಾ ಎಂಬುವವರನ್ನು ಮದುವೆಯಾಗುವ ಮುಖೇನ ಮೂರನೇ ಬಾರಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ವಿವಾಹವಾಗಿ ಕೇವಲ ಐದು ತಿಂಗಳ ಕಳೆದಿದ್ದಷ್ಟೇ ಅಷ್ಟರೊಳಗೆ ಪತಿಗೆ ಕುಡಿಯಲು ಕೊಟ್ಟ ಜ್ಯೂಸ್ಗೆ ವಿಷ ಬೆರಸಿ ಆತನನ್ನು ಹತ್ಯೆಗೈಯಲು ಸಂಚು ಹೂಡಿದ್ದಾಳೆ.
ಈ ವರ್ಷದ ಜೂನ್‌ನಲ್ಲಿ ಮದುವೆಯಾಗಿದ್ದ ಕೋಮಲ್ ಮತ್ತು ಮೋಹಿತ್ ಶರ್ಮಾ ನಡುವೆ ಯಾವುದೇ ಜಗಳವಿಲ್ಲದೆ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು ಎಂದು ಹೇಳಲಾಗಿದೆ. ನವೆಂಬರ್ 15 ರಂದು ಕೋಮಲ್ ತನ್ನ ಪತಿ ಮೋಹಿತ್‌ಗೆ ತಂಪು ಪಾನೀಯವನ್ನು ನೀಡಿದ್ದು, ಜ್ಯೂಸ್ನೊಳಗೆ ವಿಷ ಬೆರಸಿ ಗಂಡನಿಗೆ ಕೊಟ್ಟಿದ್ದಾರೆ. ಅನುಮಾನಿಸದ ಪತಿ ವಿಷಪೂರಿತ ಪಾನೀಯ ಸೇವಿಸಿ, ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು.
ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದ ಮೋಹಿತ್, ಕೆಲವು ದಿನಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡರು. ಡಿಸ್ಚಾರ್ಜ್ ಆದ ಬಳಿಕ ಮೋಹಿತ್ ಪೊಲೀಸ್ ಠಾಣೆಗೆ ತೆರಳಿ ಪತ್ನಿ ವಿರುದ್ಧ ದೂರು ದಾಖಲಿಸಿದ್ದಾರೆ. ಪತಿಯನ್ನು ಕೊಲ್ಲುವ ಆಕೆಯ ಹಿಂದಿನ ಪ್ರತ್ಯೇಕ ಕಾರಣ ಏನು ಎಂಬುದು ಸದ್ಯ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ,(ಏಜೆನ್ಸೀಸ್).