ನ್ಯೂಸ್

ಯುವಕನ ಮುಖಕ್ಕೆ ಆ್ಯಸಿಡ್ ಎರಚಿದಳು 20ರ ಯುವತಿ !

ಕರ್ನೂಲ್​: ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆ ನಂದ್ಯಾಲ್ ಮಂಡಲದಲ್ಲಿ 20 ವರ್ಷದ ಯುವತಿಯೊಬ್ಬಳು ಯುವಕನೊಬ್ಬನ ಮುಖಕ್ಕೆ ಆ್ಯಸಿಡ್ ಎರಚಿದ ಘಟನೆ ನಡೆದಿದೆ. ಗುರುವಾರ ರಾತ್ರಿ ಒಂಭತ್ತು ಗಂಟೆ ಸುಮಾರಿಗೆ ಈ ಆ್ಯಸಿಡ್ ದಾಳಿ ನಡೆದಿದ್ದು, ದೂರು ದಾಖಲಾಗಿದೆ ಎಂದು ನಂದ್ಯಾಲ್ ತಾಲೂಕು ಪೊಲೀಸ್ ಠಾಣೆಯ ಸರ್ಕಲ್ ಇನ್​ಸ್ಪೆಕ್ಟರ್ ದಿವಾಕರ ರೆಡ್ಡಿ ತಿಳಿಸಿದ್ದಾರೆ.

ನಂದ್ಯಾಲ್ ಮಂಡಲದ ಪೆದ್ದ ಕೊಟ್ಟಲ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಆ ಯುವತಿ ಮತ್ತು ಯುವಕ ಮೂರು ವರ್ಷಗಳಿಂದ ಪ್ರೇಮಿಸುತ್ತಿದ್ದರು. ಮದುವೆಯಾಗುವುದಾಗಿಯೂ ಮಾತುಕೊಟ್ಟಿದ್ದ. ಆದ್ರೆ, ಕೆಲವು ದಿನಗಳ ಹಿಂದೆ ಆ ಯುವಕ ಬೇರೊಬ್ಬ ಯುವತಿಯನ್ನು ಮದುವೆಯಾಗಿದ್ದ. ಮನೆಯಲ್ಲಿ ಪಾಲಕರ ಒತ್ತಾಯಕ್ಕೆ ಮಣಿದು ಮದುವೆಯಾಗಿದ್ದ.

ಯುವತಿ ಕೊಟ್ಟ ಹೇಳಿಕೆ ಹೀಗಿದೆ- ಯುವಕ ಜತೆ ಪ್ರೇಮದ ಸುಳಿಗೆ ಬಿದ್ದ ಬಳಿಕ ಕಾಲೇಜಿಗೆ ಹೋಗುವುದನ್ನು ನಿಲ್ಲಿಸಿದ್ದೆ. ಮೂರು ವರ್ಷ ವೇಸ್ಟಾಗಿ ಹೋಯಿತು. ನಂಬಿಸಿ ಮೋಸ ಮಾಡಿದ. ಅದಕ್ಕೆ ನಾನು ಆತನ ಮುಖಕ್ಕೆ ಆ್ಯಸಿಡ್ ಎರಚಿದೆ.

ಯುವಕ ಹೇಳಿಕೆ ಹೀಗಿದೆ - ನಾವಿಬ್ಬರು ಪ್ರೀತಿಸುತ್ತಿದ್ದೆವು. ಆದರೆ, ನಮ್ಮ ಮನೆಯಲ್ಲಿ ಬೇರೆ ಹುಡುಗಿಯನ್ನು ನೋಡಿ ನಿಶ್ಚಿತಾರ್ಥಮಾಡಿ ಮದುವೆ ಮಾಡಿಸಿದರು. ನಾನು ಈ ವಿಚಾರವನ್ನು ಪ್ರೇಯಸಿಗೆ ತಿಳಿಸಿದ್ದೆ. ಬಳಿಕ ಪರಸ್ಪರ ಮಾತನಾಡಿ ಪ್ರೇಮ ಸಂಬಂಧವನ್ನು ಕಳಚಿಕೊಂಡಿದ್ದೆವು. ಇದರಿಂದ ಆಕ್ರೋಶಿತಳಾಗಿದ್ದ ಆಕೆ ನನ್ನ ಕೈ ಮೇಲೆ ಕಳೆದ ವಾರ ಆ್ಯಸಿಡ್ ಹಾಕಿದ್ದಳು. ನಂತರ ಈಗ ಮುಖದ ಮೇಲೂ ಸುರಿದಿದ್ದಾಳೆ.

ಗಾಯಾಳು ಯುವಕನನ್ನು ನಂದ್ಯಾಲದ ಸರ್ಕಾರಿ ಜನರಲ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯುತ್ತಿದ್ದಾನೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. (ಏಜೆನ್ಸೀಸ್)