More

    ಶಿರಾ ಉಪಚುನಾವಣೆ ಪಕ್ಕಾ: ಕೋರ್ಟ್ ಮುಂದೆ ರಾಜರಾಜೇಶ್ವರಿ ನಗರ, ಮಸ್ಕಿ ಪ್ರಕರಣ

    ಬೆಂಗಳೂರು: ಬಿಹಾರ ಚುನಾವಣೆ ಜತೆಗೆ ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಬೇಕಿದೆಯಾದರೂ, ಶಿರಾಕ್ಕೆ ಮಾತ್ರ ಉಪ ಚುನಾವಣೆ ನಡೆಸಲು ಚುನಾವಣಾ ಆಯೋಗ ಸಿದ್ಧವಾಗಿದೆ. ರಾಜರಾಜೇಶ್ವರಿ ನಗರ ಮತ್ತು ಮಸ್ಕಿ ಕ್ಷೇತ್ರಗಳಿಗೆ ಸಂಬಂಧಿಸಿ ಪ್ರಕರಣಗಳು ನ್ಯಾಯಾಲಯದ ಮುಂದೆ ಇನ್ನೂ ಇತ್ಯರ್ಥವಾಗಿಲ್ಲದ ಕಾರಣ ಎರಡೂ ಕ್ಷೇತ್ರಗಳ ಉಪಚುನಾವಣೆ ಯಾವಾಗ? ಎಂಬ ಅನಿಶ್ಚಿತತೆ ಇದೆ.

    ಜೆಡಿಎಸ್ ಶಾಸಕ ಸತ್ಯ ನಾರಾಯಣ ನಿಧನ ದಿಂದಾಗಿ ಶಿರಾ ವಿಧಾನಸಭಾ ಕ್ಷೇತ್ರಕ್ಕೆ ಚುನಾವಣೆ ನಡೆಯ ಬೇಕಿದೆ. ರಾಜ್ಯದ ಮುಖ್ಯ ಚುನಾವಣಾಧಿಕಾರಿ ಸಹ ಚುನಾವಣಾ ಆಯೋಗಕ್ಕೆ ಸಿದ್ಧತೆ ಬಗ್ಗೆ ಮಾಹಿತಿ ನೀಡಿದ್ದಾರೆ. ರಾಜರಾಜೇಶ್ವರಿ ನಗರ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯಲ್ಲಿ ಮತದಾರರ ನಕಲಿ ಗುರುತಿನ ಚೀಟಿ ಪತ್ತೆಯಾಗಿದ್ದು, ಚುನಾವಣಾ ಅಕ್ರಮ ನಡೆದಿದೆ ಎಂದು ಬಿಜೆಪಿ ಅಭ್ಯರ್ಥಿಯಾಗಿದ್ದ ತುಳಸಿ ಮುನಿರಾಜು ಸಲ್ಲಿಸಿರುವ ಅರ್ಜಿ ವಿಚಾರಣೆ ಇನ್ನೂ ಹೈಕೋರ್ಟ್​ನಲ್ಲಿ ನಡೆಯುತ್ತಿದೆ. ಇದೇ ಪ್ರಕರಣದಲ್ಲಿ ಎರಡನೇ ಅತಿ ಹೆಚ್ಚು ಮತ ಪಡೆದಿರುವ ತಮ್ಮ ಆಯ್ಕೆಯನ್ನು ಘೊಷಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸುಪ್ರೀಂಕೋರ್ಟ್​ನಲ್ಲಿ ವಿಚಾರಣಾ ಹಂತದಲ್ಲಿದೆ. ಹಾಗಾಗಿ ಈ ಪ್ರಕರಣಗಳ ವಿಚಾರಣೆ ಪೂರ್ಣಗೊಂಡು ತೀರ್ಪು ಬರಬೇಕಿದೆ.

    ಮಸ್ಕಿ ಕ್ಷೇತ್ರದಲ್ಲಿ ಪ್ರತಾಪಗೌಡ ಪಾಟೀಲ್ ಆಯ್ಕೆ ಪ್ರಶ್ನಿಸಿ ಬಿಜೆಪಿ ಅಭ್ಯರ್ಥಿಯಾಗಿದ್ದ ಬಸವನಗೌಡ ತುರವೀಹಾಳ ತಮ್ಮ ಅರ್ಜಿ ವಾಪಸ್ ಪಡೆಯಲು ಕೋರ್ಟ್​ಗೆ ಮನವಿ ಸಲ್ಲಿಸಿದ್ದಾರೆ. ಆದರೆ, ರಾಘವೇಂದ್ರ ಎಂಬುವರು ಇದಕ್ಕೆ ಆಕ್ಷೇಪಣೆ ಸಲ್ಲಿಸಿದ್ದಾರೆ. ನ್ಯಾಯಾ ಧೀಶರು ರಜೆ ಇದ್ದ ಕಾರಣ ಎರಡು ದಿನಗಳ ಹಿಂದೆ ಇದ್ದ ವಿಚಾರಣೆ ಮುಂದಕ್ಕೆ ಹೋಗಿದೆ. ಹಾಗಾಗಿ ಈ ಎರಡೂ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನ್ಯಾಯಾಲಯದಿಂದ ತೀರ್ಪು ಬರುವವರೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಘೊಷಣೆ ಮಾಡುವುದಿಲ್ಲ. ಹಾಗಾಗಿ ಸದ್ಯಕ್ಕೆ ಶಿರಾ ಕ್ಷೇತ್ರಕ್ಕೆ ಮಾತ್ರ ಉಪ ಚುನಾವಣೆ ದಿನಾಂಕ ಘೊಷಣೆಯಾಗಬಹುದು ಎಂದು ಮೂಲಗಳು ತಿಳಿಸಿವೆ.

    ಬಿಹಾರದ ಜತೆ ಉಪ ಚುನಾವಣೆ: ನವೆಂಬರ್ ಅಂತ್ಯದ ವೇಳೆಗೆ ಬಿಹಾರ ವಿಧಾನಸಭೆ ಸೇರಿ ವಿವಿಧ ರಾಜ್ಯಗಳಲ್ಲಿ ಬಾಕಿ ಇರುವ 65 ವಿಧಾನಸಭಾ ಕ್ಷೇತ್ರ ಹಾಗೂ 1 ಲೋಕಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಸಲು ಆಯೋಗ ಸಭೆ ನಡೆಸಿದೆ. ಯಾವಾಗ ಬೇಕಾದರೂ ದಿನಾಂಕ ಘೊಷಣೆಯಾಗಬಹುದು.

    ಶಿರಾ ಉಪ ಚುನಾವಣೆಗೆ ಸಂಬಂಧಿಸಿ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಇವಿಎಂ, ಚುನಾವಣಾಧಿಕಾರಿಗಳು, ಮತಗಟ್ಟೆ ಸಿಬ್ಬಂದಿ ಮತ್ತು ಅವರಿಗೆ ತರಬೇತಿ, ಕರೊನಾ ಸಂದರ್ಭದಲ್ಲಿ ಚುನಾವಣೆ ನಡೆಸಲು ಬೇಕಾದ ಪೂರ್ವ ಸಿದ್ಧತೆ ಪೂರ್ಣಗೊಂಡಿದ್ದು, ಈ ಬಗ್ಗೆ ಕೇಂದ್ರ ಚುನಾವಣಾ ಆಯೋಗಕ್ಕೆ ಮಾಹಿತಿ ಸಲ್ಲಿಸಲಾಗಿದೆ.

    | ಸಂಜೀವ್ ಕುಮಾರ್ ರಾಜ್ಯ ಮುಖ್ಯ ಚುನಾವಣಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts