ನ್ಯೂಸ್

ಫ್ರೆಂಡ್​ ಮನೆಯಲ್ಲೇ ಯುವತಿ ಎಗರಿಸಿದ ಹಣದ ಮೊತ್ತ ಕೇಳಿದ್ರೆ ನೀವು ಬೆಚ್ಚಿಬೀಳ್ತಿರಾ...!

ನವದೆಹಲಿ: ಫ್ರೆಂಡ್​​ ಮನೆಯಲ್ಲೇ ಎರಡು ಕಂತುಗಳಲ್ಲಿ 57 ಲಕ್ಷ ರೂ. ಕಳ್ಳತನ ಮಾಡಿದ ಆರೋಪದಲ್ಲಿ 37 ವರ್ಷದ ಮಹಿಳೆಯನ್ನು ಕೇಂದ್ರ ದೆಹಲಿಯ ಹೌಜ್​ ಕಾಜಿ ಏರಿಯಾದಲ್ಲಿ ಬಂಧಿಸಿರುವುದಾಗಿ ದೆಹಲಿ ಪೊಲೀಸರು ಶನಿವಾರ ತಿಳಿಸಿದ್ದಾರೆ.

ದೋಚಿದ ಹಣವನ್ನು ಇಬ್ಬರು ಸಹೋದರರೊಂದಿಗೆ ಮಹಿಳೆ ಹಂಚಿಕೊಂಡಿದ್ದು, ಅವರನ್ನೂ ಸಹ ಬಂಧಿಸಲಾಗಿದೆ. ಮಹಿಳಾ ಆರೋಪಿಯನ್ನು ಪ್ರತಾಪ್​ ನಗರ ನಿವಾಸಿ ಪೂಜಾ ಎಂದು ಗುರುತಿಸಲಾಗಿದೆ. ಆಕೆಯ ಸಹೋದರರಾದ ವರುಣ್ (29) ಮತ್ತು ಅಮಿತ್​ ದಬರ್​ (40) ಸೀತಾರಾಮ್​ ಬಜಾರ್​ ನಿವಾಸಿಗಳಾಗಿದ್ದಾರೆ.

ಕೇಂದ್ರ ದೆಹಲಿಯ ಸೀತಾರಾಮ್​ ಬಜಾರ್​ ನಿವಾಸಿ 65 ವರ್ಷದ ಪುಷ್ಪ ಅವರು ಹೌಜ್​ ಕಾಜಿ ಪೊಲೀಸ್​ ಠಾಣೆಯಲ್ಲಿ ಜೂನ್​ 29ರಂದು ದೂರು ನೀಡಿದ್ದರು. 2015ರಲ್ಲಿ ಜಂಟಿ ಮಾಲೀಕತ್ವದಲ್ಲಿ ನಾನು ಮತ್ತು ನನ್ನ ಸಂಬಂಧಿ ಒಂದು ಜಮೀನನ್ನು 1.5 ಕೋಟಿ ರೂ.ಗೆ ಮಾರಾಟ ಮಾಡಿದ್ದೆವು. ಅದರಲ್ಲಿ ಬಂದ ನನ್ನ 80 ಲಕ್ಷ ರೂ. ಪಾಲನ್ನು ಮನೆಯ ಕಂಟೈನರ್​ನಲ್ಲಿ ಇಟ್ಟಿದೆ. ಹಣ ಹೇಗೆ ಕಳುವಾಯಿತು ಎಂಬುದರ ಬಗ್ಗೆ ಗೊತ್ತಿಲ್ಲ. ಆದರೆ, ಮಗಳ ಫ್ರೆಂಡ್ಸ್​ ಮೇಲೆ ಅನುಮಾನವಿದೆ ಎಂದು ದೂರಿನಲ್ಲಿ ಮಹಿಳೆ ಉಲ್ಲೇಖಿಸಿದ್ದಾರೆ.

ದೂರಿನ ಹಿನ್ನೆಲೆಯಲ್ಲಿ ಪೂಜಾಳನ್ನು ಕರೆಸಿ ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಆಗಾಗ ಅವರ ಮನೆಗೆ ಭೇಟಿ ನೀಡಿ ಮನೆ ಸಂಬಂಧ ಕೆಲ ಕೆಲಸಗಳಲ್ಲಿ ಸಹಾಯ ಮಾಡುತ್ತಿದ್ದೆ. ಕಂಟೈನರ್​ನಲ್ಲಿ ಇಡಲಾಗಿದ್ದ ಹಣವನ್ನು ಕೆಲವು ವರ್ಷಗಳ ಹಿಂದೆ ಗಮನಿಸಿದ್ದೆ. ಅದರಲ್ಲಿ ಮೊದಲ ಭಾಗವಾಗಿ 2017ರಲ್ಲಿ 27 ಲಕ್ಷ ರೂ. ಕದ್ದು ಅದರಲ್ಲಿ 22 ಲಕ್ಷ ರೂ. ಅನ್ನು ಮನೆ ಕೊಳ್ಳಲು ನನ್ನ ಸಹೋದರರಿಗೆ ನೀಡಿದ್ದೆ ಎಂದು ಬಹಿರಂಗಪಡಿಸಿದ್ದಾಳೆ.

ಇಷ್ಟಕ್ಕೆ ಸುಮ್ಮನಾಗದ ಪೂಜಾ, ಜೂನ್​ 8ರಂದು ಮತ್ತೆ ಪುಷ್ಪ ಮನೆಗೆ ಮತ್ತೆ 30 ಲಕ್ಷ ರೂ. ಅನ್ನು ಕದ್ದಿದ್ದಾಳೆ. ಮೂವರು ಆರೋಪಿಗಳಿಂದ ಸದ್ಯ 29.43 ಲಕ್ಷ ರೂ. ಅನ್ನು ವಶಪಡಿಸಿಕೊಳ್ಳಲಾಗಿದೆ. 22 ಲಕ್ಷ ರೂ. ಮೌಲ್ಯದ ಫ್ಲ್ಯಾಟ್​ ಮತ್ತು 3 ಲಕ್ಷ ರೂ. ಮೌಲ್ಯದ ಆಭರಣಗಳನ್ನು ಆರೋಪಿಗಳಿಂದ ವಶಕ್ಕೆ ಪಡೆಯಲಾಗಿದೆ. (ಏಜೆನ್ಸೀಸ್​)