ಹೈದರಾಬಾದ್: ಗಮನಾರ್ಹವಾದ ಘಟನೆಯೊಂದರಲ್ಲಿ 40 ವರ್ಷದ ಮಹಿಳೆಯೊಬ್ಬರು ಕಳ್ಳನೊಂದಿಗೆ ಹೋರಾಡಿ ಆತನನ್ನು ಧೈರ್ಯವಾಗಿ ಹಿಮ್ಮೆಟ್ಟಿಸಿರುವ ಘಟನೆ ತೆಲಂಗಾಣದ ರಾಜಣ್ಣ ಸಿರ್ಸಿಲಾ ಜಿಲ್ಲೆಯ ವೇಮುಲವಾಡ ಎಂಬ ಪ್ರದೇಶದಲ್ಲಿ ನಡೆದಿದೆ.
ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮಹಿಳೆಯ ಧೈರ್ಯಕ್ಕೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಇತ್ತ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಾಗಿ ಹುಡುಕಾಟ ಆರಂಭಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರು ತಮ್ಮ ಸಾಕು ನಾಯಿ ನಿರಂತರವಾಗಿ ಬೊಗಳುತ್ತಿರುವುದನ್ನು ಕಂಡು ಗಾಬರಿಯಿಂದ ಮನೆಯ ಸುತ್ತ ಪರಿಶೀಲಿಸಿಸುತ್ತಿರುವುದು ಕಂಡು ಬರುತ್ತದೆ. ಇತ್ತ ಮೂಲೆಯಲ್ಲಿ ಮುಸುಕುಧಾರಿ ವ್ಯಕ್ತಿಯೋರ್ವ ಕೈಯಲ್ಲಿ ಆಯುಧವನ್ನು ಹಿಡಿದು ಆಕೆಯ ಮೇಲೆ ದಾಳಿ ಮಾಡಲು ಸಜ್ಜಾಗಿ ನಿಂತಿರುವುದನ್ನು ತೋರಿಸುತ್ತದೆ.
ಈ ವೇಳೆ ಮಹಿಳೆ ಕಳ್ಳನನ್ನು ಗುರುತಿಸಿದ್ದು, ಆತ ಏಕಾಏಕಿ ಈಕೆಯ ಮೇಲೆ ದಾಳಿ ಮಾಡುತ್ತಾನೆ. ಕಳ್ಳನ ದಾಳಿಗೆ ಗಾಬರಿಯಾಗದ ಮಹಿಳೆ ಧೃತಿಗೆಡದೆ ಆತನನ್ನು ಸಮರ್ಥವಾಗಿ ಎದುರಿಸುತ್ತಾಳ. ಈ ವೇಳೆ ಮಹಿಳೆ ನೆರೆಹೊರೆಯವರು ಧಾವಿಸುತ್ತಾರೆ ಎಂದು ಜೋರಾಗಿ ಕಿರುಚಿಕೊಂಡಿದ್ದು, ಆತ ಆಕೆಯ ಬಾಯಿ ಮುಚ್ಚಲು ಯತ್ನಿಸುತ್ತಾನೆ. ಆಗ ಅಲ್ಲೇ ಇದ್ದ ಕರ್ಟನ್ ಎಳೆಯುವ ಮಹಿಳೆ ಅದನ್ನು ಆತನ ಮುಖದ ಮೇಲೆ ಹಾಕಿ ಹಿಡಿದಿಡಲು ಯತ್ನಿಸುತ್ತಾಳೆ.
ಮಹಿಳೆ ಮೇಲೆ ಮತ್ತೊಮ್ಮೆ ದಾಳಿಗೆ ಕಳ್ಳ ಯತ್ನಿಸಿದ್ದು, ಆಕೆ ತನ್ನ ಬಳಿ ಇದ್ದ ಕರ್ಟನ್ ರಾಡ್ನಿಂದ ಆತನನ್ನು ಹೊಡೆಯುತ್ತಾಳೆ. ಈ ವೇಳೆ ಕಳ್ಳ ಆಕೆ ಕತ್ತಿನಲ್ಲಿದ್ದ ಏಳು ಗ್ರಾಂ ಸರವನ್ನು ಕದ್ದು ಪರಾರಿಯಾಗುತ್ತಾನೆ. ಇಷ್ಟಕ್ಕೆ ಸುಮ್ಮನಾಗದ ಮಹಿಳೆ ಆತನನ್ನು ಕೆಲ ದೂರು ಅಟ್ಟಿಸಿಕೊಂಡು ಹೋಗುತ್ತಿರುವುದು ವೈರಲ್ ಆಗಿರುವ ವಿಡಿಯೋದಲ್ಲಿ ಕಂಡು ಬರುತ್ತದೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ವೇಮುಲವಾಡ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕರುಣಾಕರ ಘಟನೆಯೂ ಭಅನುವಾರ ಬೆಳಗಿನ ಜಾವ ನಡೆದಿದ್ದು, ಮಹಿಳೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದೇವೆ. ಆರೋಪಿ ಪತ್ತೆಗಾಗಿ ತಂಡ ಒಂದನ್ನು ರಚಿಸಲಾಗಿದ್ದು, ಅಧಿಕಾರಿಗಳು ಸಿಸಿಟವಿ ದೃಶ್ಯಾವಳಿಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ ಎಂದು ವೇಮುಲವಾಡ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಕರುಣಾಕರ ಮಾಹಿತಿ ನೀಡಿದ್ದಾರೆ.