ನ್ಯೂಸ್

ಯಂತ್ರಕ್ಕೆ ಸೀರೆ ಸಿಲುಕಿ ಪ್ರಾಣ ಕಳ್ಕೊಂಡ ಮಹಿಳೆ; ಗೋವಿನಜೋಳ ರಾಶಿ ಮಷಿನ್​ಗೆ ಸಿಕ್ಕಿ ದೇಹ ಛಿದ್ರ..

ಬಾಗಲಕೋಟೆ: ಕೃಷಿ ಸಂಬಂಧಿತ ಚಟುವಟಿಕೆಗಳ ಸಂದರ್ಭ ಸಣ್ಣ ಎಡವಟ್ಟಿನಿಂದಾಗಿ ಅಂಥ ಕೆಲಸಗಾರರು ಪ್ರಾಣ ಕಳೆದುಕೊಂಡ ಪ್ರಕರಣಗಳು ಸಾಕಷ್ಟು ಸಂಭವಿಸಿವೆ. ಇಂದು ಅಂಥದ್ದೇ ಇನ್ನೊಂದು ಪ್ರಕರಣ ಸಂಭವಿಸಿದ್ದು, ಕೃಷಿ ಚಟುವಟಿಕೆ ವೇಳೆ ಮಹಿಳೆಯೊಬ್ಬರು ಸಾವಿಗೀಡಾಗಿದ್ದಾರೆ.

ಬಾಗಲಕೋಟೆ ತಾಲೂಕಿನ ಶಿರೂರು ಗ್ರಾಮದಲ್ಲಿ ಈ ಪ್ರಕರಣ ನಡೆದಿದೆ. ಈ ದುರಂತದಲ್ಲಿ ರೇಣುಕಾ ಮಾದರ (45) ಎಂಬಾಕೆ ಸಾವಿಗೀಡಾಗಿದ್ದಾರೆ. ಈಕೆ ಕೂಲಿ ಕೆಲಸಕ್ಕಾಗಿ ಬೇರೆ ಕಡೆಯಿಂದ ಬಂದಿದ್ದರು.

ಕೆಲಸದ ವೇಳೆ ಇವರು ಗೋವಿನಜೋಳ ರಾಶಿ ಯಂತ್ರಕ್ಕೆ ಹಾಕುವಾಗ ಸೀರೆ ಸಿಲುಕಿಕೊಂಡಿದ್ದರಿಂದ ಸಂಭವಿಸಿದ ದುರಂತದಲ್ಲಿ ಮೃತಪಟ್ಟಿದ್ದಾರೆ. ಸೀರೆ ಸಿಕ್ಕಿಹಾಕಿಕೊಂಡಿದ್ದರಿಂದ ದೇಹವೂ ಯಂತ್ರಕ್ಕೆ ಸಿಲುಕಿ, ಛಿದ್ರಗೊಂಡಿದೆ. ಸ್ಥಳಕ್ಕೆ ಬಾಗಲಕೋಟೆ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.