ನ್ಯೂಸ್

ಮಗುವಿನೊಂದಿಗೆ 12ನೇ ಮಹಡಿಯಿಂದ ನೆಲಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

ಮುಂಬೈ : ಕರೊನಾದಿಂದ ಪತಿಯನ್ನು ಕಳೆದುಕೊಂಡಿದ್ದ ಮಹಿಳೆ ತನ್ನ ಏಳು ವರ್ಷದ ಮಗನೊಂದಿಗೆ 12ನೇ ಮಹಡಿಯ ಮನೆಯಿಂದ ನೆಲಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮುಂಬೈನಿಂದ ವರದಿಯಾಗಿದೆ. ಮೃತ ಮಹಿಳೆಯು ಸಾಯುವ ಮುನ್ನ ತಮ್ಮ ಕೆಳಗಡೆ ಮನೆಯವರು ಮಗು ಗಲಾಟೆ ಮಾಡುತ್ತದೆ ಎಂದು ದೂರು ನೀಡಿ ಕಿರುಕುಳ ಕೊಡುತ್ತಿದ್ದ ಬಗ್ಗೆ ಪತ್ರದಲ್ಲಿ ಬರೆದಿಟ್ಟಿದ್ದಾರೆ.

ರೇಷ್ಮಾ ಟ್ರೆಂಚಿಲ್(44) ಎಂಬಾಕೆ ಏಪ್ರಿಲ್​ ತಿಂಗಳಿಂದ ಚಾಂದಿವಲಿಯ ಅಪಾರ್ಟ್​​ಮೆಂಟ್​ ಕಟ್ಟಡದಲ್ಲಿನ ಫ್ಲ್ಯಾಟ್​ನಲ್ಲಿ ವಾಸಿಸುತ್ತಿದ್ದರು. ಆಕೆಯ ಗಂಡ ಸರತ್ ಮುಲುಕುತ್ಲ ಕರೊನಾ ಸೋಂಕು ತಗುಲಿದ್ದ ತಮ್ಮ ತಂದೆತಾಯಿಯನ್ನು ನೋಡಿಕೊಳ್ಳಲು ಹೋಗಿದ್ದು, ಅವರಿಗೂ ಸೋಂಕು ತಾಗಿ ಮೇ 23 ರಂದು ಮೃತಪಟ್ಟಿದ್ದರು.

ತನ್ನ ಗಂಡನನ್ನು ಕಳೆದುಕೊಂಡ ದುಃಖದಲ್ಲಿದ್ದ ಆಕೆ ಮಗುವಿನೊಂದಿಗೆ ವಾಸವಾಗಿದ್ದರು. ಕೆಳಗಿನ ಫ್ಲ್ಯಾಟ್​ನಲ್ಲಿ ವಾಸವಾಗಿದ್ದ ಆಯೂಬ್​ ಖಾನ್​ ದಂಪತಿ ಮತ್ತು ಅವರ ಪುತ್ರ ಶಾದಾಬ್​ ಎನ್ನುವವರು ಮಗು ತುಂಬಾ ಗದ್ದಲ ಮಾಡುತ್ತದೆ ಎಂದು ಸತತವಾಗಿ ದೂರು ನೀಡಿ ಹಿಂಸೆ ನೀಡುತ್ತಿದ್ದರು ಎನ್ನಲಾಗಿದೆ. ಕೇಸು ದಾಖಲಿಸಿರುವ ಮುಂಬೈ ಪೊಲೀಸರು, 33 ವರ್ಷದ ಶಾದಾಬ್​ನನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)