

ವಾಷಿಂಗ್ಟನ್ : ಮೇಡ್ ಇನ್ ಚೀನಾ ಕರೊನಾ ಲಸಿಕೆಗಳನ್ನು ಬಳಸಿರುವ ಮಂಗೋಲಿಯ, ಸೀಯ್ಶೆಲ್ಸ್ ಮತ್ತು ಬಹ್ರೈನ್ನಂಥ ದೇಶಗಳಲ್ಲಿ ಇತ್ತೀಚಿನ ದಿನಗಳಲ್ಲಿ ಕರೊನಾ ಸೋಂಕಿನಲ್ಲಿ ಏರಿಕೆ ಕಂಡುಬರುತ್ತಿದೆ. ಇದು ಚೀನಾದ ಲಸಿಕೆಗಳು ಕರೊನಾ ವೈರಸ್ನ ಹೊಸ ರೂಪಾಂತರಗಳ ವಿರುದ್ಧ ಸಾಕಷ್ಟು ಪ್ರಭಾವಶಾಲಿಯಾಗಿಲ್ಲ ಎಂಬುದನ್ನು ಸೂಚಿಸುತ್ತದೆ ಎಂದು ಅಮೆರಿಕದ ನ್ಯೂ ಯಾರ್ಕ್ ಟೈಮ್ಸ್ ಪತ್ರಿಕೆ ವರದಿ ಮಾಡಿದೆ.
ಸೀಯ್ಶೆಲ್ಸ್, ಚಿಲಿ, ಬಹ್ರೈನ್ ಮತ್ತು ಮಂಗೋಲಿಯದಲ್ಲಿ ಸುಲಭವಾಗಿ ಲಭ್ಯವಾದ ಚೀನೀ ಕರೊನಾ ಲಸಿಕೆಗಳನ್ನು ಬಳಸಿ ಶೇ.50 ರಿಂದ 68 ರಷ್ಟು ಜನಸಂಖ್ಯೆಗೆ ಲಸಿಕಾಕರಣ ಪೂರೈಸಲಾಗಿದೆ. ಆದರೆ, ಕಳೆದ ವಾರ ಕರೊನಾ ಹರಡುವಿಕೆಯಿಂದ ತತ್ತರಿಸಿರುವ ಟಾಪ್ 10 ದೇಶಗಳ ಪಟ್ಟಿಯಲ್ಲಿ ಈ ದೇಶಗಳು ಕಾಣಿಸಿಕೊಂಡಿವೆ ಎನ್ನಲಾಗಿದೆ.
ಚೀನಾದ ಸಿನೊಫಾರ್ಮ್ ಕರೊನಾ ಲಸಿಕೆಯನ್ನು ಬಳಸುತ್ತಾ ನಂ.1 ವ್ಯಾಕ್ಸಿನೇಷನ್ ರೇಟ್ ಹೊಂದಿರುವ ಸೀಯ್ಶೆಲ್ಸ್ನಲ್ಲಿ ಸೋಂಕಿನ ಪ್ರಮಾಣವು ಒಂದು ಮಿಲಿಯನ್ಗೆ 716 ಪ್ರಕರಣಗಳಾಗಿವೆ. ಅದೇ, ಫೈಜರ್ನ ಲಸಿಕೆ ಬಳುಸಿಕೊಂಡು ವ್ಯಾಕ್ಸಿನೇಷನ್ ದರದಲ್ಲಿ ಎರಡನೇ ಸ್ಥಾನದಲ್ಲಿರುವ ಇಸ್ರೇಲ್ನಲ್ಲಿ ಒಂದು ಮಿಲಿಯನ್ಗೆ 4.95 ಹೊಸ ಕರೊನಾ ಪ್ರಕರಣಗಳು ಮಾತ್ರ ವರದಿಯಾಗಿವೆ ಎನ್ನಲಾಗಿದೆ.
"ಲಸಿಕೆಗಳು ಸಾಕಷ್ಟು ಒಳ್ಳೆಯವಾಗಿದ್ದರೆ, ಈ ರೀತಿಯ ಪ್ಯಾಟರ್ನ್ ಕಾಣಿಸಬಾರದಿತ್ತು. ಚೀನೀಯರು ಇದಕ್ಕೆ ಪರಿಹಾರ ಒದಗಿಸುವ ಜವಾಬ್ದಾರಿ ಹೊಂದಿದ್ದಾರೆ" ಎಂದು ಯೂನಿವರ್ಸಿಟಿ ಆಫ್ ಹಾಂಗ್ಕಾಂಗ್ನ ವೈರಾಲಾಜಿಸ್ಟ್ ಜಿನ್ ದೊನ್ಗ್ಯಾನ್ ಹೇಳಿದ್ದಾರೆ. ಹೆಚ್ಚು ಲಸಿಕಾಕರಣವಾಗಿರುವ ದೇಶಗಳಲ್ಲಿ ಹೊಸ ಕರೊನಾ ಅಲೆಗಳು ಏಕೆ ಉಂಟಾಗುತ್ತಿವೆ ಎಂಬ ಬಗೆಗೆ ಹೆಚ್ಚು ಸ್ಪಷ್ಟತೆಯಿಲ್ಲದ ಈ ಸಮಯದಲ್ಲಿ, ಕೆಲವು ವಿಜ್ನಾನಿಗಳು ಸಾಮಾಜಿಕ ನಿಯಂತ್ರಣಗಳನ್ನು ಸಡಿಲೀಕರಿಸಿರುವುದು ಮತ್ತು ಜನರ ನಿರ್ಲಕ್ಷ್ಯಯುತ ನಡವಳಿಕೆಗಳು ಇದಕ್ಕೆ ಕಾರಣವಿರಬಹುದು ಎಂದಿದ್ದಾರೆ. (ಏಜೆನ್ಸೀಸ್)