ನ್ಯೂಸ್

ಜಾಮೀನು ನೀಡಬೇಕಾದರೆ ನನ್ನೊಂದಿಗೆ ಮಲಗು ಎಂದ ಎಸ್​ಐಗೆ ಮಹಿಳೆ ಮಾಡಿದ್ದೇನು?

ಶ್ರೀಕಾಕುಳಂ: ಆಂಧ್ರ ಪ್ರದೇಶದ ಪೊಲೀಸ್​ ಅಧಿಕಾರಿಯೊಬ್ಬರು ಮತ್ತೊಮ್ಮೆ ಟೀಕೆಗೆ ಗುರಿಯಾಗಿದ್ದಾರೆ. ಇತ್ತೀಚಿನ ಘಟನೆಯೊಂದರಲ್ಲಿ ಶ್ರೀಕಾಕುಳಂ ಜಿಲ್ಲೆಯ ಪಂಡೂರು ಪೊಲೀಸ್​ ಠಾಣೆಯ ಸಬ್​ ಇನ್ಸ್​ಪೆಕ್ಟರ್​ ಕೊಲ್ಲಿ ರಾಮಕೃಷ್ಣ ಸೆಕ್ಸ್​ಗೆ ಬೇಡಿಕೆ ಇಟ್ಟಿರುವುದಾಗಿ ಪಂಡೂರು ಮೂಲದ ಮಹಿಳೆಯೊಬ್ಬರು ಗಂಭೀರ ಆರೋಪ ಮಾಡಿದ್ದಾರೆ.

ಅಕ್ರಮ ಮದ್ಯ ಮಾರಾಟ ಪ್ರಕರಣದಲ್ಲಿ ಜಾಮೀನು ನೀಡಬೇಕಾದರೆ ನಿನ್ನ ಮೈಮಾಟ ನನಗೊಪ್ಪಿಸೂ ಎಂದು ಸಬ್​ ಇನ್ಸ್​ಪೆಕ್ಟರ್​ ಬೇಡಿಕೆ ಇಟ್ಟಿರುವುದು ಇದೀಗ ಬಹಳಷ್ಟು ಆಕ್ರೋಶಕ್ಕೆ ಗುರಿಯಾಗಿದೆ.

ಘಟನೆ ಹಿನ್ನೆಲೆ ಏನು?

ಅಕ್ರಮ ಮದ್ಯ ಮಾರಾಟ ಮಾಹಿತಿ ಮೇರೆಗೆ ಆಗಸ್ಟ್​ 22ರಂದು ಪಂಡೂರು ಠಾಣೆಯ ಪೊಲೀಸರು ಸಬ್​ ಇನ್ಸ್​ಪೆಕ್ಟರ್​ ಕೊಲ್ಲಿ ರಾಮಕೃಷ್ಣ ನೇತೃತ್ವದಲ್ಲಿ ಪಂಡೂರಿನ ತುಂಗಪೇಟ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸುತ್ತಾರೆ. ಈ ವೇಳೆ 48 ಮದ್ಯದ ಬಾಟಲ್​ಗಳನ್ನು ಪೊಲೀಸರು ವಶಪಡಿಸಿಕೊಳ್ಳುತ್ತಾರೆ.

ಹೀಗಿದ್ದರೂ ಎಸ್​ಐ ರಾಮಕೃಷ್ಣ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ತಂದೆ ಹಾಗೂ ಮಗಳ ವಿರುದ್ಧ ಪ್ರಕರಣವನ್ನು ದಾಖಲಿಸಿಕೊಂಡಿರುವುದಿಲ್ಲ. ಇದರ ನಡುವೆ ಭಾನುವಾರ ಮಹಿಳೆಗೆ ದೂರವಾಗಿ ಕರೆ ಮಾಡುವ ಎಸ್​ಐ, ಪ್ರಕರಣ ಸಂಬಂಧ ಚರ್ಚಿಸಬೇಕು ನಮ್ಮ ಮನೆಗೆ ಬಾ ಎಂದು ಹೇಳುತ್ತಾನೆ. ಅಲ್ಲದೆ, ಪ್ರಕರಣದಿಂದ ಹೊರಬರಬೇಕಾದರೆ ಸಹಾಯ ಮಾಡಲು ಪರೋಕ್ಷವಾಗಿ ಆಕೆಯ ಬಳಿ ಸೆಕ್ಸ್​ಗೆ ಬೇಡಿಕೆ ಇಡುತ್ತಾನೆ.

ಎಸ್​ಐ ದುರುದ್ದೇಶ ತಿಳಿದ ಮಹಿಳೆ ಅದಕ್ಕೆ ಒಪ್ಪುವುದಿಲ್ಲ. ಬದಲಾಗಿ ಎಸ್​ಐ ವರ್ತನೆಯಿಂದ ಬೇಸತ್ತು, ತನ್ನೊಂದಿಗೆ ಮೊಬೈಲ್​ನಲ್ಲಿ ಕೆಟ್ಟದಾಗಿ ಮಾತನಾಡಿದ ರೆಕಾರ್ಡಿಂಗ್ಸ್​ ಅನ್ನು ಸಾಕ್ಷಿಯಾಗಿ ನೀಡಿ ಪಂಡೂರು ಠಾಣೆಯಲ್ಲೇ ಮಹಿಳೆ ಸೋಮವಾರ ದೂರು ದಾಖಲಿಸುತ್ತಾಳೆ.

ಈ ಸಂಬಂಧ ತನಿಖೆ ನಡೆಸುತ್ತಿರುವುದಾಗಿ ಇನ್ಸ್​ಪೆಕ್ಟರ್​ ಮಲ್ಲೇಶ್ವರ ರಾವ್​ ತಿಳಿಸಿದ್ದು, ಎಸ್​ಐ ಕೊಲ್ಲಿ ರಾಮಕೃಷ್ಣನನ್ನು ಪೊಲೀಸ್​ ವರಿಷ್ಠಾಧಿಕಾರಿ ಅಮಿತ್​ ಬರ್ಧಾರ್​ ಅಮಾನತ್ತು ಮಾಡಿದ್ದಾರೆ. ಅಲ್ಲದೆ, ಸಮಗ್ರ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)