More

    ಹೆಂಡತಿಯರ ಸಂಖ್ಯೆಯ ಮೇಲೆ ಆಸ್ತಿ ವಿಭಾಗ ಆಗುತ್ತದೆಯೆ?

    ಹೆಂಡತಿಯರ ಸಂಖ್ಯೆಯ ಮೇಲೆ ಆಸ್ತಿ ವಿಭಾಗ ಆಗುತ್ತದೆಯೆ?ಮ್ಮ ತಂದೆಗೆ ಇಬ್ಬರು ಹೆಂಡತಿಯರು. ನಾವು ಗೌಡ ಜಾತಿಯವರು. ಮೊದಲ ಹೆಂಡತಿಗೆ ಮಕ್ಕಳು ಆಗಲಿಲ್ಲ ಎಂದು ನಮ್ಮ ತಾಯಿಯನ್ನು ಮದುವೆ ಆದರು. ಆದರೆ ನಮ್ಮ ತಾಯಿಯನ್ನು ಮದುವೆ ಆದ ಮೇಲೆ ಮೊದಲ ಹೆಂಡತಿಗೂ ಮಕ್ಕಳಾಯಿತು. ಮೊದಲ ಹೆಂಡತಿಗೆ ಆರು ಮಕ್ಕಳು . ಎರಡನೇ ಹೆಂಡತಿಗೆ ನಾವು ಇಬ್ಬರು ಗಂಡು ಮಕ್ಕಳು. ನಮ್ಮ ತಂದೆ ತೀರಿಕೊಂಡಿದ್ದಾರೆ. ಇಬ್ಬರು ಹೆಂಡತಿಯರೂ ಬದುಕಿದ್ದಾರೆ. ಮೊದಲ ಹೆಂಡತಿಯ ಮಕ್ಕಳೆಲ್ಲಾ ವಿದ್ಯಾವಂತರು ಮತ್ತು ಆಸ್ತಿವಂತರು. ಎರಡನೇ ಹೆಂಡತಿಯ ಮಕ್ಕಳಾದ ನಾನು ಮತ್ತು ನನ್ನ ತಮ್ಮ ಹೆಚ್ಚು ಓದಿಲ್ಲ. ಸಣ್ಣ ಮೆಕಾನಿಕ್ ಕೆಲಸ ಮಾಡುತ್ತಿದ್ದೇವೆ. ನಮ್ಮತಂದೆ ತೀರಿಕೊಂಡು ಎರಡು ವರ್ಷ ಆಯಿತು. ಆಸ್ತಿಗಳೆಲ್ಲ ಅವರ ಸ್ವಯಾರ್ಜಿತ ಆಸ್ತಿಗಳು. ನಾವು ನಮ್ಮ ತಂದೆ ಕಟ್ಟಿಸಿದ ಮನೆಯಲ್ಲಿ ಇದ್ದೇವೆ. ಹಾಗೇ ಎರಡು ಎಕರೆ ತೋಟ ಇದೆ. ಈಗ ನಮ್ಮ ತಂದೆಯ ಮೊದಲ ಹೆಂಡತಿಯ ಮಕ್ಕಳು ಈ ಮನೆ ಮತ್ತು ಆಸ್ತಿಯಲ್ಲಿ ಎಲ್ಲ ಮಕ್ಕಳಿಗೂ ಸಮಭಾಗ ಆಗಬೇಕು ಎನ್ನುತ್ತಿದ್ದಾರೆ. ನಮ್ಮ ತಂದೆಯ ಬೇರೆ ಆಸ್ತಿಗಳನ್ನು ಅವರು ಬದುಕಿರುವಾಗಲೇ ಒಬ್ಬೊಬ್ಬರೂ ಬೇರೆ ಬೇರೇ ರಿಜಿಸ್ಟರ್ ದಾನ ಪತ್ರ ಮಾಡಿಸಿಕೊಂಡಿದ್ದಾರೆ. ನಮಗೆ ಆ ಆಸ್ತಿಗಳಲ್ಲಿ ಭಾಗ ಕೊಡುವುದಿಲ್ಲ ಎನ್ನುತ್ತಿದ್ದಾರೆ. ಈಗ ನಾವು ಸ್ವಾಧೀನದಲ್ಲಿ ಇರುವ ಆಸ್ತಿಯನ್ನು ನಾವೇ ಉಳಿಸಿಕೊಳ್ಳಲು ಏನು ಮಾಡ ಬೇಕು? ಮೊದಲ ಹೆಂಡತಿಯ ಮಕ್ಕಳು ದಾನ ಪತ್ರ ಮಾಡಿಸಿಕೊಂಡಿರುವ ಆಸ್ತಿಯಲ್ಲಿ ನಮಗೆ ಅರ್ಧ ಭಾಗ ಬರಲು ನಾವು ಏನು ಮಾಡ ಬೇಕು ತಿಳಿಸಿ. ಇಬ್ಬರು ಹೆಂಡತಿಯರು ಇರುವುದರಿಂದ ನಮ್ಮ ತಂದೆಯ ಆಸ್ತಿ ಎರಡು ಭಾಗ ಆಗಬೇಕು ಎಂದರೆ ಅವರು ಒಪ್ಪುತ್ತಿಲ್ಲ.

    ಉತ್ತರ: ನಿಮ್ಮ ತಂದೆಯ ಸ್ವಯಾರ್ಜಿತ ಆಸ್ತಿಯನ್ನು ಅವರು ಬದುಕಿರುವಾಗಲೇ ನೋಂದಾಯಿತ ದಾನ ಪತ್ರದ ಮೂಲಕ ಯಾರಿಗಾದರೂ ದಾನ ಮಾಡಿದ್ದರೆ , ಆ ಆಸ್ತಿಯಲ್ಲಿ ನಿಮಗೆ ಹಕ್ಕು ಬರುವುದಿಲ್ಲ. ಯಾರಿಗೆ ದಾನ ಮಾಡಿದ್ದಾರೋ ಅವರಿಗೆ ಮಾತ್ರ ಹಕ್ಕು ಇರುತ್ತದೆ.

    ನಿಮ್ಮ ತಂದೆ ತೀರಿಕೊಂಡಾಗ ಅವರ ಹೆಸರಿನಲ್ಲಿ ಇದ್ದ ಎಲ್ಲ ಆಸ್ತಿಗಳೂ ನಿಮ್ಮ ತಂದೆಯ ಮೊದಲ ಹೆಂಡತಿಗೆ ಮತ್ತು ನಿಮ್ಮ ತಂದೆಯ ಎಂಟು ಮಕ್ಕಳಿಗೆ ಸೇರಿ ಒಟ್ಟು ಒಂಬತ್ತು ಭಾಗ ಆಗುತ್ತದೆ, ನಿಮ್ಮ ತಾಯಿಯನ್ನು , ಮೊದಲ ಹೆಂಡತಿ ಬದುಕಿರುವಾಗಲೇ ನಿಮ್ಮ ತಂದೆ ಮದುವೆ ಆಗಿರುವುದರಿಂದ ಆಕೆಗೆ ಭಾಗ ಬರುವುದಿಲ್ಲ.

    ಆಸ್ತಿಯ ವಿಭಾಗ ಮೃತ ಹಿಂದೂ ಪರುಷನ ಹೆಂಡತಿಯರ ಸಂಖ್ಯೆಯ ಮೇಲೆ ಆಗುವುದಿಲ್ಲ. ಹೀಗಾಗಿ ನಿಮ್ಮ ತಂದೆಯ ಮೊದಲ ಹೆಂಡತಿಯ ಮಕ್ಕಳಿಗೆ ಅರ್ಧ ಭಾಗ ಎರಡನೇ ಹೆಂಡತಿಯ ಮಕ್ಕಳಿಗೆ ಅರ್ಧ ಭಾಗ ಎಂದು ಆಸ್ತಿಯ ಹಂಚಿಕೆ ಆಗುವುದಿಲ್ಲ.

    ನೀವು ಸ್ವಾಧೀನದಲ್ಲಿ ಇದ್ದ ಮಾತ್ರಕ್ಕೆ ಆಸ್ತಿಯ ಮಾಲೀಕತ್ವ ನಿಮ್ಮದಾಗುವುದಿಲ್ಲ. ನಿಮ್ಮ ತಂದೆಯ ಎಲ್ಲ ವಾರಸುದಾರರಿಗೂ ಆ ಆಸ್ತಿಯಲ್ಲಿ ಸಮಭಾಗ ಇರುತ್ತದೆ. ಯಾರಾದರೂ ಮಧ್ಯಸ್ಥಿಕೆಗಾರರನ್ನು ಸಂಪರ್ಕಿಸಿ ಮಾತುಕತೆಯ ಮೂಲಕ ನೀವು ಈಗ ಸ್ವಾಧೀನದಲ್ಲಿ ಇರುವ ಆಸ್ತಿಯನ್ನು ನಿಮ್ಮ ತಂದೆಯ ಮೊದಲ ಹೆಂಡತಿ ಮತ್ತು ಮಕ್ಕಳು ನಿಮಗೇ ಬಿಡಲು ಸಾಧ್ಯವೇ ಎಂದು ಪ್ರಯತ್ನ ಮಾಡುವುದು ಒಳ್ಳೆಯದು.

    ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು [email protected] ಅಥವಾ [email protected] ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

    ದಾಂಪತ್ಯದಲ್ಲಿ ಸಮರಸ ಮೂಡುವುದು ಹೇಗೆ ಎಂಬ ಕುರಿತಾಗಿ ಎಸ್​.ಸುಶೀಲಾ ಚಿಂತಾಮಣಿಯವರು ತಿಳಿಸಿರುವ ವಿಡಿಯೋಗಾಗಿ ಇಲ್ಲಿ ಕ್ಲಿಕ್ಕಿಸಿ.

    https://youtu.be/fu4GVbqQSX4

    ದಾನ ಮಾಡಿಕೊಟ್ಟ ಆಸ್ತಿಯನ್ನು ಹಿಂದೆ ಪಡೆಯಬಹುದೇ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts