More

    ಹಣ, ಶಿಫಾರಸಿದ್ದರಷ್ಟೇ ಹಾಸಿಗೆ, ಜನರ ಕೈಗೆಟುಕುತ್ತಿಲ್ಲ ಸರ್ಕಾರಿ ಆಸ್ಪತ್ರೆ

    ಬೆಂಗಳೂರು: ಪ್ರಭಾವಿಗಳ ಶಿಫಾರಸಿದ್ದರಷ್ಟೇ ಬೆಡ್ ವ್ಯವಸ್ಥೆ, ಹಣ ಕೊಟ್ಟವರ ಚಿಕಿತ್ಸೆಗೆ ಮೊದಲ ಆದ್ಯತೆ, ಬಗೆಹರಿಯುತ್ತಿಲ್ಲ ವೆಂಟಿಲೇಟರ್ ಕೊರತೆ- ಆಕ್ಸಿಜನ್ ಸಮಸ್ಯೆ, ಕರೊನಾ ಸೋಂಕಿತರಿಗೆ ಪ್ರತಿನಿತ್ಯ ಕಳಪೆ ಆಹಾರ ತಿನ್ನುವ ಅನಿವಾರ್ಯತೆ… ಇವು ರಾಜ್ಯದ ಸರ್ಕಾರಿ ಆಸ್ಪತ್ರೆಗಳ ದುರವಸ್ಥೆಯ ನೈಜ ಚಿತ್ರಣ.

    ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ 2.77 ಲಕ್ಷಕ್ಕೆ ತಲುಪಿದ್ದು, ಇನ್ನೂ 84 ಸಾವಿರ ಸಕ್ರಿಯ ಪ್ರಕರಣಗಳಿವೆ. ಕರೊನಾ ನಿರ್ವಹಣೆ ಒತ್ತಡದಿಂದಾಗಿ ರಜೆ ಸಿಗದೆ ಬಸವಳಿದಿರುವುದಾಗಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಯಿಂದ ಪ್ರತಿಭಟನೆ ಕೂಗೆದ್ದಿರುವ ಸಂದರ್ಭದಲ್ಲೇ ಸರ್ಕಾರಿ ಆಸ್ಪತ್ರೆಗಳಲ್ಲಿ ಕರೊನಾ ಸೋಂಕಿತರ ಜತೆಗೆ ಇತರ ರೋಗಿಗಳಿಗೂ ಸರಿಯಾದ ಚಿಕಿತ್ಸೆ ಸಿಗುತ್ತಿಲ್ಲ ಎಂಬ ವಿಚಾರ ಬಯಲಾಗಿದೆ. ರಾಜ್ಯಾದ್ಯಂತ ವಿಜಯವಾಣಿ ನಡೆಸಿದ ರಿಯಾಲಿಟಿ ಚೆಕ್​ನಲ್ಲಿ ವೈದ್ಯ ಸಿಬ್ಬಂದಿ, ಹಾಗೂ ಇಲಾಖೆ ಅಧಿಕಾರಿಗಳ ಹುಳುಕುಗಳು ಹೊರಬಿದ್ದಿವೆ.

    ಆಸ್ಪತ್ರೆಗಳಲ್ಲಿ ಶುಚಿತ್ವ, ಸಿಬ್ಬಂದಿ ಕೊರತೆ ಎದ್ದು ಕಾಣುತ್ತಿದೆ. ರಾತ್ರಿ ವೇಳೆ ವೈದ್ಯಕೀಯ ಸಿಬ್ಬಂದಿ ಇಲ್ಲದೆ ಉಸಿರಾಟದ ತೊಂದರೆ ಹೆಚ್ಚಾಗಿ ರೋಗಿಗಳು ಹಾಸಿಗೆಯಲ್ಲೇ ಪ್ರಾಣ ಬಿಡುತ್ತಿದ್ದಾರೆ. ಬೆಂಗಳೂರು, ದಾವಣಗೆರೆ, ಕಲಬುರಗಿ ಹಾಗೂ ವಿಜಯಪುರ ಸೇರಿ ಕೆಲ ಜಿಲ್ಲೆಗಳಲ್ಲಿ ಐಸಿಯು ಮತ್ತು ವೆಂಟಿಲೇಟರ್ ಕೊರತೆ ಇದೆ. ಉಚಿತ ಚಿಕಿತ್ಸೆ ಲಭ್ಯತೆ ಬಗ್ಗೆ ಸರ್ಕಾರ ಡಂಗುರ ಸಾರುತ್ತಿದ್ದರೂ, ಲಂಚ ನೀಡದೆ ಚಿಕಿತ್ಸೆ ದೊರೆಯುವುದಿಲ್ಲವೆಂಬ ಆರೋಪ ಕೇಳಿಬಂದಿವೆ.

    ಕೋವಿಡ್ ನಿಗದಿತ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆಯನ್ನೇನೋ ನೀಡಲಾಗುತ್ತಿದೆ. ಆದರೆ, ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳಿಂದ ಶಿಫಾರಸುಗೊಂಡು ಆಸ್ಪತ್ರೆಗೆ ದಾಖಲಾದವರು ಮತ್ತು ಹಣ ನೀಡುವ ಸೋಂಕಿತರಿಗಷ್ಟೇ ಗುಣಮಟ್ಟದ ಚಿಕಿತ್ಸೆ ದೊರೆಯುತ್ತಿದೆ. ಇಂತಹ ಗುಣ ಮಟ್ಟದ ಚಿಕಿತ್ಸೆಗೆ 5 ಸಾವಿರ ರೂ.ನಿಂದ 10 ಸಾವಿರ ರೂ.ವರೆಗೆ ಹಣ ವಸೂಲಿ ಮಾಡುತ್ತಿರುವ ದೂರುಗಳಿವೆ. ಸಾಮಾನ್ಯ ರೋಗಿಗಳನ್ನು ಕೇಳುವವರೇ ಇಲ್ಲ. ಶುಶ್ರೂಷೆಯ ಮಾತಂತೂ ದೂರ. ಅಷ್ಟೇ ಏಕೆ? ಹಾಸಿಗೆ ಬದಲಾವಣೆ, ಸ್ಯಾನಿಟೈಸೇಷನ್ ಮಾಡುತ್ತಿಲ್ಲ. ಕರೊನಾ ಸೋಂಕಿತರಿಗೆ ಚಿಕಿತ್ಸೆ ನೀಡುವ ಮಂಡ್ಯದ ಮಿಮ್್ಸ ಆಸ್ಪತ್ರೆಯಲ್ಲಿ ನಾಯಿಗಳು ಹಾಗೂ ರಾಯಚೂರಿನ ಆಸ್ಪತ್ರೆಗಳಲ್ಲಿ ಹಂದಿಗಳು ಓಡಾಡಿದ ಘಟನೆಗಳೂ ವರದಿಯಾಗಿವೆ. ಸೋಂಕಿತರಿಗೆ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟ ಹಾಗೂ ಚಹಾ, ಹಾಲು, ಹಣ್ಣು, ಬಿಸ್ಕತ್ ನೀಡಬೇಕು. ಆದರೆ, ಕೊಡುತ್ತಿಲ್ಲ. ಜತೆಗೆ ಊಟ ಹೊಟ್ಟೆ ತುಂಬುವಷ್ಟು ಕೊಡುವುದಿಲ್ಲ. ರುಚಿಯಂತೂ ಇಲ್ಲವೇ ಇಲ್ಲ. ರಾಜ್ಯದ 20ಕ್ಕೂ ಹೆಚ್ಚು ಜಿಲ್ಲೆಗಳ ಆಸ್ಪತ್ರೆಗಳಲ್ಲಿ ಊಟ ಸರಿಯಾಗಿಲ್ಲ ಎಂಬ ಆರೋಪ ಕೇಳಿಬರುತ್ತಿದೆ. ಕೆಲವು ಜಿಲ್ಲೆಗಳಲ್ಲಿ ಊಟ ಪೂರೈಸಲು ಗುತ್ತಿಗೆ ನೀಡಲಾಗಿದ್ದು, ಸರಿಯಾದ ಸಮಯಕ್ಕೂ ಬರುತ್ತಿಲ್ಲ, ಸಮರ್ಪಕ ವಿತರಣೆಯೂ ಮಾಡುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ.

    ಖಾಸಗಿ ಆಸ್ಪತ್ರೆಗಳಲ್ಲೂ ಸುಲಿಗೆ

    ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ಹಾಸಿಗೆಗಳನ್ನು ಕೋವಿಡ್ ಸೋಂಕಿತರಿಗೆ ಚಿಕಿತ್ಸೆಗೆ ಮೀಸಲಿಡಲಾಗಿದೆ. ಇಲ್ಲಿ ಸರ್ಕಾರದ ನಿರ್ದೇಶನದನ್ವಯ ಚಿಕಿತ್ಸೆಗೆ ದಾಖಲಾಗುವ ಜನರಿಗೆ ಹೆಚ್ಚುವರಿ ಹಣ ವಸೂಲಿ ಮಾಡಲಾಗುತ್ತಿದೆ. ಸಾಮಾನ್ಯ ಐಸೋಲೇಷನ್ ಹಾಸಿಗೆ, ಐಸಿಯು ಹಾಗೂ ವೆಂಟಿಲೇಟರ್ ಹಾಸಿಗೆಗೆ ಸರ್ಕಾರ ದರ ನಿಗದಿ ಮಾಡಿದ್ದರೂ ಖಾಸಗಿ ಆಸ್ಪತ್ರೆಗಳು ಹೆಚ್ಚುವರಿ ಬಿಲ್ ವಸೂಲಿ ಮಾಡುತ್ತಿವೆ. ಕೆಲವು ಸೋಂಕಿತರನ್ನು ಆಸ್ಪತ್ರೆಗೆ ದಾಖಲಿಸುವ ಮುನ್ನವೇ ಮುಂಗಡ ಹಣ ಕಟ್ಟಿಸಿಕೊಂಡು ಚಿಕಿತ್ಸೆ ನೀಡಲಾಗುತ್ತಿದೆ ಎಂಬ ದೂರುಗಳಿವೆ.

    ಬೇರೆ ರೋಗಿಗಳಿಗೆ ಸಮಸ್ಯೆ

    ಕೋವಿಡ್ ಹೊರತುಪಡಿಸಿ ಮಧುಮೇಹ, ರಕ್ತದೊತ್ತಡ. ಕ್ಯಾನ್ಸರ್, ಅಸ್ತಮಾ, ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶ ತೊಂದರೆ, ಗರ್ಭಿಣಿಯರ ಹೆರಿಗೆ ಸೌಲಭ್ಯಕ್ಕೆ ತೊಂದರೆ ಆಗಿದೆ. ಇದರಿಂದಾಗಿ ಕರೊನಾ ಇಲ್ಲದ ಇತರ ರೋಗಿಗಳಿಗೆ ಎಲ್ಲೂ ಸೂಕ್ತ ಚಿಕಿತ್ಸೆ ಲಭ್ಯವಾಗುತ್ತಿಲ್ಲ. ಗಂಭೀರ ಸಮಸ್ಯೆಗಳಿಂದ ಬಳಲುತ್ತಿರುವವರು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಸಮಸ್ಯೆ ಬಗೆಹರಿಸಬೇಕಾದ ಅಧಿಕಾರಿಗಳ ನಿರ್ಲಕ್ಷ್ಯವೇ ಈ ಪರಿಸ್ಥಿತಿಗೆ ಕಾರಣ ಎಂಬ ಆರೋಪವಿದೆ.

    ದಕ್ಷರೂ ಇದ್ದಾರೆ

    ಬಹುತೇಕ ಆಸ್ಪತ್ರೆಗಳು ಅವ್ಯವಸ್ಥೆಗಳ ತಾಣವಾಗಿ ದ್ದರೂ ಕೆಲವೆಡೆ ದಕ್ಷ ಸಿಬ್ಬಂದಿ ಶ್ರಮದಿಂದಾಗಿ ಉತ್ತಮ ಚಿಕಿತ್ಸೆ ಸಿಗುತ್ತಿದೆ. ಸರಿಯಾದ ಸಮಯಕ್ಕೆ ಊಟ, ಔಷಧೋಪಚಾರ ನೀಡುವ ಆಸ್ಪತ್ರೆಗಳು ಸರ್ಕಾರಿ ಆಸ್ಪತ್ರೆಗಳ ಗೌರವ ಉಳಿಸುತ್ತಿವೆ.

    ನಮಗೆ ಕಂಡಿದ್ದೇನು?

    • ಹಲವೆಡೆ 5ರಿಂದ 10 ಸಾವಿರ ರೂ. ವಸೂಲಿ
    • ನೇಕ ಕಡೆ ಆಕ್ಸಿಜನ್ ಮತ್ತು ವೆಂಟಿಲೇಟರ್ ಬೆಡ್​ಗಳಿಗೆ ತೀವ್ರ ಕೊರತೆ
    • ವೆಂಟಿಲೇಟರ್ ವ್ಯವಸ್ಥೆ ಇದ್ದರೂ ಬಳಕೆಗೆ ತಜ್ಞ ವೈದ್ಯರೇ ಇಲ್ಲ
    • ಸೋಂಕಿತರಿಗೆ ಗುಣಮಟ್ಟದ ಊಟ ಸರಿಯಾದ ಸಮಯಕ್ಕೆ ನೀಡುತ್ತಿಲ್ಲ
    • ಮಾತ್ರೆ ಕೊಟ್ಟು ಹೋಗುವ ವೈದ್ಯಕೀಯ ಸಿಬ್ಬಂದಿ, ಮತ್ತೆ ತಿರುಗಿ ನೋಡುವುದಿಲ್ಲ
    • ಕೋವಿಡ್ ಸೋಂಕಿತರ ವಾರ್ಡ್​ಗಳಲ್ಲಿ ಸ್ವಚ್ಛತೆ ಕೊರತೆ, ನಾಯಿ, ಹಂದಿ ಓಡಾಟ
    • ಕೋವಿಡ್ ಆಸ್ಪತ್ರೆ ಮತ್ತು ಆರೈಕೆ ಕೇಂದ್ರದಲ್ಲಿ ಶೌಚಗೃಹ, ಸ್ನಾನಕ್ಕೂ ಸೌಲಭ್ಯ ಇಲ್ಲ
    • ಬಿಸಿನೀರು ಕಡ್ಡಾಯವಾಗಿ ಕೊಡಬೇಕೆಂದು ಆದೇಶಿಸಿದ್ದರೂ ಬಹುತೇಕ ಕಡೆ ಸಿಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts