ನ್ಯೂಸ್

ತನ್ನ ಮೊಮ್ಮಗಳಿಗೆ ತಾನೇ ಜನ್ಮ ನೀಡಿದ 51 ವರ್ಷದ ಮಹಿಳೆ: ವಿರಳ ಘಟನೆ ಹಿಂದಿದೆ ಮನಕಲಕುವ ಕತೆ!

ನ್ಯೂಯಾರ್ಕ್​: ಗರ್ಭಧರಿಸಲು ಮಗಳಿಂದ ಸಾಧ್ಯವಾಗದಿದ್ದಾಗ ಆಕೆಯ ಆಸೆ ಈಡೇರಿಸಲು 51 ವರ್ಷದ ಮಹಿಳೆಯೊಬ್ಬಳು ಪರ್ಯಾಯ ವ್ಯವಸ್ಥೆಯಾಗಿ ತನ್ನ ಮೊಮ್ಮಗನಿಗೆ ತಾನೇ ಜನ್ಮ ನೀಡಿರುವ ವಿರಳಾತಿವಿರಳ ಘಟನೆ ಅಮೆರಿಕದಲ್ಲಿ ನಡೆದಿದೆ.

ಚಿಕಾಗೋದ ಇಲಿನಾಯ್ಸ್ ನಗರ ನಿವಾಸಿ ಬ್ರೆನ್ನಾ ಲಾಕ್ವುಡ್ (29) ಗರ್ಭಿಣಿ ಆಗಲು ಸಾಕಷ್ಟು ಪ್ರಯತ್ನ ನಡೆಸಿದರೂ ಪದೇಪದೆ ಗರ್ಭಪಾತಕ್ಕೆ ಒಳಗಾಗುತ್ತಿದ್ದರು. ಪತಿ ಆ್ಯರೂನ್​ನೊಂದಿಗೆ ಪ್ರನಾಳೀಯ ಫಲೀಕರಣ (ಐವಿಎಫ್) ಸೇರಿದಂತೆ ಮಗುವಿಗಾಗಿ ಬ್ರೆನಾ ನಾಲ್ಕು ವರ್ಷ ನಾನಾ ಪ್ರಯತ್ನಗಳನ್ನು ಮಾಡಿದರೂ ಯಾವುದೂ ಫಲಿಸಲಿಲ್ಲ.

ಇದರ ನಡುವೆ ಆಸ್ಪತ್ರೆಗೆ ತೆರಳಿದ ಬ್ರೆನ್ನಾಗೆ ಇನ್ನೆಂದು ಗರ್ಭ ಧರಿಸಲು ಸಾಧ್ಯವಾಗುವುದಿಲ್ಲ ಎಂಬ ವೈದ್ಯರ ಮಾತು ಕೇಳಿ ಆಘಾತವಾಗುತ್ತದೆ. ಕೊನೆಯದಾಗಿ ಇರುವುದು ಬಾಡಿಗೆ ತಾಯ್ತನ ದಾರಿ ಮಾತ್ರ ಎಂದು ವೈದ್ಯರು ಹೇಳುತ್ತಾರೆ. ಆದರೆ, ನಮ್ಮ ಕುಟುಂಬದ ಬಹುದೊಡ್ಡ ಕನಸು ಕನಸಾಗಿಯೇ ಉಳಿದುಬಿಟ್ಟಿತ್ತಲ್ಲ ಎಂಬ ಚಿಂತೆಯಲ್ಲಿ ಬ್ರೆನ್ನಾ ಮುಳುಗಿರುವಾಗ ಆಕೆಯ ನೆರವಿಗೆ ತಾಯಿ ಜೂಲಿ ಧಾವಿಸುತ್ತಾರೆ.

ಮಗಳ ಸಂಕಟ ನೋಡಿದ ಜೂಲಿ, ಬಾಡಿಗೆ ತಾಯ್ತನದ ಮೂಲಕ ಮಗು ಹೆತ್ತುಕೊಡಲು ಒಪ್ಪಿಕೊಳ್ಳುತ್ತಾಳೆ. ಸಾಕಷ್ಟು ಆರೋಗ್ಯಯುತವಾಗಿರುವ ಜೂಲಿ, ಈಗಾಗಲೇ 19 ಮ್ಯಾರಥಾನ್​ಗಳನ್ನು ಓಡಿದ್ದು, ಮಗಳ ಆಸೆಯಂತೆಯೇ ನವೆಂಬರ್​ 2ರಂದು ಮೊಮ್ಮಗಳಾದ ಬ್ರಿಯಾರ್ ಜೂಲಿಯೆಟ್ ಲಾಕ್ವುಡ್​​ಗೆ ಜನ್ಮ ನೀಡಿದ್ದಾರೆ.

ಈ ವಿಚಾರವನ್ನು ಬ್ರೆನ್ನಾ ತಮ್ಮ ಇನ್​​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದು, ಹೆಣ್ಣು ಮಗು ನಮ್ಮ ಹೃದಯಕ್ಕೆ ಸಾಕಷ್ಟು ಸಂತಸ ತುಂಬಿದ್ದಾಳೆಂದು ಬರೆದುಕೊಂಡಿದ್ದಾರೆ. ನನ್ನ ತಾಯಿ ನಿಜಕ್ಕೂ ರಾಕ್​ಸ್ಟಾರ್​. ಹೆರಿಗೆ ತುಂಬಾ ಕಷ್ಟವಾದರೂ ಹೆದರದೆ ನನಗಾಗಿ ಮಗುವಿಗೆ ಜನ್ಮ ನೀಡಿದ್ದಾಳೆ. ತನ್ನ ತ್ಯಾಗದಿಂದ ನಮ್ಮನ್ನು ಜಗತ್ತಿನ ಸ್ವರ್ಗದೆಡೆಗೆ ಕೊಂಡೊಯ್ದಿದ್ದಾರೆ. ನನ್ನ ಮಗಳನ್ನು ನನ್ನ ತೋಳುಗಳಲ್ಲಿ ಹಿಡಿದಿಟ್ಟುಕೊಂಡಾಗ ನನ್ನ ಹೃದಯ ಒಮ್ಮೆಲೆ ಸಿಡಿಯುತ್ತಿರುತ್ತದೆ ಎಂದು ಭಾವುಕವಾಗಿ ಬರೆದುಕೊಂಡಿದ್ದಾರೆ.

ನಾನು ಮಗುವನ್ನು ನೋಡುವಾಗ ಅದಕ್ಕಾಗಿ ಏನು ಬೇಕಾದರೂ ನಾನು ಮಾಡುತ್ತೇನೆ ಎಂಬ ಭಾವನೆ ನನ್ನಲ್ಲಿ ಮೂಡುತ್ತದೆ. ಅಲ್ಲದೆ, ನನ್ನ ತಾಯಿ ನನಗಾಗಿ ಏನು ಮಾಡಿದ್ದಾರೆ ಎಂಬುದು ಮಗು ನೋಡಿದಾಗಲೆಲ್ಲ ಪ್ರತಿಬಿಂಬಿಸುತ್ತದೆ ಎಂದು ಬ್ರೆನ್ನಾ ತನ್ನ ಕನಸು ನನಸಾದ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. (ಏಜೆನ್ಸೀಸ್​) ಇದನ್ನೂ ಓದಿ: ಜಾಹೀರಾತು ನೋಡಿ ಕಾಲ್​ಗರ್ಲ್​ಗೆ ಕರೆ ಮಾಡಿದ: ಮನೆಗೆ ಬಂದ ಯುವತಿಯಿಂದ ಕಾದಿತ್ತು ಶಾಕ್!​​