ನ್ಯೂಸ್

ಹಾಡಹಗಲೇ ಎಣ್ಣೆ ಪಾರ್ಟಿ; ಪೊಲೀಸ್ ಠಾಣೆ ಮುಂಭಾಗದಲ್ಲೇ ಮೋಜು ಮಸ್ತಿಯಲ್ಲಿ ಯುವಕ-ಯುವತಿಯರು!

ಬೆಂಗಳೂರು: ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಲ್ಲೆ, ಬೆದರಿಕೆ, ಸುಲಿಗೆ ಮುಂತಾದ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿವೆ. ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಳ್ಳುವವರಿಗೆ ಕಾನೂನು ಹಾಗೂ ಪೊಲೀಸರ ಭಯವೇ ಇಲ್ಲ. ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ರಾಜ್ಯದ ಪೊಲೀಸರು ಸೋತಿದ್ದಾರೆ ಎಂಬ ಆರೋಪಗಳು ಸಾರ್ವಜನಿಕ ವಲಯದಿಂದ ಇತ್ತೀಚೆಗೆ ಹೆಚ್ಚಾಗಿ ಕೇಳಿ ಬರುತ್ತಿದೆ.

ಇದೀಗ ಹಾಡಹಗಲೇ ಪೊಲೀಸರ ಭಯವಿಲ್ಲದೆ, ಯುವಕ ಯುವತಿಯ ಗುಂಪೊಂದು ವಿಧಾನ ಸೌಧ ಪೊಲೀಸ್ ಠಾಣೆಯ ಮುಂಭಾದಲ್ಲಿ ಬಿಯರ್ ಪಾರ್ಟಿ ಮಾಡುತ್ತಾ, ಮೋಜು ಮಸ್ತಿನಲ್ಲಿ ತೊಡಗಿಕೊಂಡಿರುವ ಆಘಾತಕಾರಿ ಘಟನೆಯೊಂದು ನಡೆದಿದೆ.

ಇಬ್ಬರು ಯುವತಿಯರು ಹಾಗೂ ನಾಲ್ವರು ಯುವಕರು ವಿಧಾನಸೌಧ ಪೊಲೀಸ್ ಠಾಣೆ ಮುಂಭಾಗದ ಪಾರ್ಕ್​ನಲ್ಲಿ ಹಾಡುಹಗಲೇ ಎಣ್ಣೆ ಪಾರ್ಟಿಯಲ್ಲಿ ತೊಡಗಿಸಿಕೊಂಡಿದ್ದರು. ಬಿಯರ್, ಸಿಗರೇಟು ಸೇದುತ್ತಾ ಮೋಜು ಮಸ್ತಿಯಲ್ಲಿ ಮಾಡುತ್ತಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಹೊಯ್ಸಳ ಪೊಲೀಸರು ಕೂಡಲೇ ಯುವಕ-ಯುವತಿಯರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದಿದ್ದಾರೆ.

ಹೊಸ ವರ್ಷ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗರ ಹಾಗೂ ನಗರದ ಹೊರವಲಯದಲ್ಲಿ ಹೊಸವರ್ಷಾಚರಣೆ ಮೇಲೆ ಹದ್ದಿನ ಕಣ್ಣಿಡಲಾಗಿದೆ. ಪ್ರತ್ಯೇಕವಾಗಿ ಪಾರ್ಟಿ ಆಯೋಜನೆ ಮಾಡುವ ಸ್ಥಳಗಳನ್ನು ಸತತ ಪರಿಶೀಲನೆ ಮಾಡಲಾಗುತ್ತಿದೆ. ಪಾರ್ಟಿಗಳಲ್ಲಿ ಮಾದಕ ವಸ್ತುಗಳು ಬಳಕೆಯಾಗದಂತೆ ಕಣ್ಗಾವಲಿಡಲಾಗಿದ್ದು, ಯಾವುದೇ ರೀತಿಯ ಮಾದಕ ವಸ್ತು ಸರಬರಾಜು ಆಗದಂತೆ ನಿಗಾ ವಹಿಸಲಾಗಿದೆ ಎಂದು ಕೇಂದ್ರ ವಲಯ ಐಜಿಪಿ ಎಂ.ಚಂದ್ರಶೇಖರ್ ಇತ್ತೀಚೆಗೆ ಹೇಳಿದ್ದರು.