ನ್ಯೂಸ್

ರಾಷ್ಟ್ರಪತಿ ಭವನಕ್ಕೆ ಕರೆದೊಯ್ಯುವೆ, ಪ್ರಧಾನಿ ನಿವಾಸದೆದುರು ಪ್ರತಿಭಟನೆಗೂ ಸಿದ್ಧ; ಬಗೆಹರಿಯದ ರಾಜಸ್ಥಾನ ಬಿಕ್ಕಟ್ಟು

ಜೈಪುರ: ರಾಜಸ್ಥಾನದಲ್ಲಿ ಕಾಂಗ್ರೆಸ್​ ಸರ್ಕಾರದ ಬಿಕ್ಕಟ್ಟು ದಿನೇದಿನೆ ಹೊಸ ಹೊಸ ತಿರುವುಗಳನ್ನು ಪಡೆಯುತ್ತಲೇ ಇದೆ.

ನಿನ್ನೆಯಷ್ಟೇ ಸಿಎಂ ಅಶೋಕ್​ ಗೆಹ್ಲೋಟ್​ 109 ಶಾಸಕರೊಂದಿಗೆ ರಾಜಭವನಕ್ಕೆ ತೆರಳಿ ಶಕ್ತಿ ಪ್ರದರ್ಶಿಸಿದ್ದರು. ಶಾಸಕರು ರಾಜಭವನದ ಹುಲ್ಲುಹಾಸಿನ ಮೇಲೆಯೇ ಧರಣಿ ನಡೆಸಿ ಅಧಿವೇಶನಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿದ್ದರು.

ಕಾನೂನು ಅನ್ವಯ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದ ರಾಜ್ಯಪಾಲರು ಇಂದು ಕೂಡ ಮೀನ-ಮೇಷ ಎಣಿಸುತ್ತಿದ್ದಾರೆ ಎಂದು ಕಾಂಗ್ರೆಸ್​ ಆರೋಪಿಸಿದೆ. ಇದರ ನಡುವೆ ಅಧಿವೇಶನ ಆರಂಭಕ್ಕೆ ಮತ್ತೊಮ್ಮೆ ಅನುಮತಿ ಕೋರಿ ಸಿಎಂ ಗೆಹ್ಲೋಟ್​ ಮತ್ತೊಮ್ಮೆ ರಾಜ್ಯಪಾಲರನ್ನು ಭೇಟಿಯಾಗಲಿದ್ದಾರೆ.

ರಾಷ್ಟ್ರಪತಿ ಭವನಕ್ಕೂ ಜನಪ್ರತಿನಿಧಿಗಳನ್ನು ಕರೆದೊಯ್ಯಲು ಸಿದ್ಧವಿರುವುದಾಗಿ ಸಿಎಂ ಅಶೋಕ್​ ಗಹ್ಲೋಟ್​ ಶಾಸಕರಿಗೆ ತಿಳಿಸಿದ್ದಾರೆ. ಬಿಜೆಪಿಯ ಷಡ್ಯಂತ್ರವನ್ನು ಸೋಲಿಸಲು ಪ್ರಧಾನಿ ನರೇಂದ್ರ ಮೋದಿ ನಿವಾಸದ ಎದುರು ಪ್ರತಿಭಟಿಸಲು ಸಜ್ಜಾಗಿರುವುದಾಗಿ ಗೆಹ್ಲೋಟ್​ ಸವಾಲೆಸೆದಿದ್ದಾರೆ.

ಮಧ್ಯಾಹ್ನ ನಡೆದ ಶಾಸಕಾಂಗ ಸಭೆಯಲ್ಲಿ ಸಿಎಂ ಈ ಮಾತನ್ನು ಹೇಳಿದ್ದಾಗಿ ಕಾಂಗ್ರೆಸ್​ ಮುಖಂಡರೊಬ್ಬರು ಸ್ಪಷ್ಟಪಡಿಸಿದ್ದಾರೆ. ರಾಜ್ಯಪಾಲ ಕಲ್ರಾಜ್​ ಮಿಶ್ರಾ ಅವರಿಗೆ ಮತ್ತೊಮ್ಮೆ ಮನವಿ ಸಲ್ಲಿಸಲು ತೆರಳುವ ಮುನ್ನ ಈ ಘೋಷಣೆ ಮಾಡಿದ್ದಾರೆ. ಹೀಗಾಗಿ ರಾಜ್ಯ ರಾಜಕೀಯ ಬೆಳವಣಿಗೆ ದೆಹಲಿ ಅಂಗಳಕ್ಕೆ ತೆರಳುತ್ತಾ ಎಂಬ ಕುತೂಹಲ ಮನೆ ಮಾಡಿದೆ.