ನ್ಯೂಸ್

ರಾಜಮೌಳಿಯವರ ಶಾಪ ಮುರಿಯುತ್ತಾ ದೇವರ ಚಿತ್ರ?; ಏನಿದು ನಂಬಿಕೆ, ಇಲ್ಲಿದೆ ಕಂಪ್ಲೀಟ್​ ಡೀಟೇಲ್ಸ್​

Webdesk - Manjunatha B

ಹೈದರಾಬಾದ್​: ಕೊರಟಾಲ ಶಿವ ನಿರ್ದೇಶನ ಜೂ. ಎನ್​ಟಿಆರ್​-ಜಾಹ್ನವಿ ಕಪೂರ್​ ನಟನೆಯ ದೇವರ ಚಿತ್ರವು ಇದೇ ಸೆಪ್ಟೆಂಬರ್ 27ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿದ್ದು, ಈಗಾಗಲೇ ಸಿನಿಮಾ ಟ್ರೇಲರ್​ ಮೂಲಕ ಸಖತ್​ ಸೌಂಡ್​ ಮಾಡುತ್ತಿದೆ. ಚಿತ್ರದ ಟ್ರೇಲರ್​​ಗೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಎರಡು ಅವತರಣಿಕೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಿದ್ದು, ಈ ಚಿತ್ರವನ್ನು ಸಿನಿಪಂಡಿತರು ಮೆಗಾಸ್ಟಾರ್​ ಚಿರಂಜೀವಿ, ರಾಮ್​ಚರಣ್​ ನಟನೆಯ ಆಚಾರ್ಯ ಚಿತ್ರಕ್ಕೆ ಕಂಪೇರ್​ ಮಾಡಿ ಮಾತನಾಡಲು ಶುರು ಮಾಡಿದ್ದಾರೆ.

ಆರ್​ಆರ್​ಆರ್​ ಬಳಿಕ ಜೂ. ಎನ್​ಟಿಆರ್​ ನಟನೆಯ ಯಾವ ಚಿತ್ರವು ತೆರೆಕಂಡಿಲ್ಲ. ಸುಮಾರು ಎರಡೂವರೆ ವರ್ಷದ ಬಳಿಕ ಅವರ ಚಿತ್ರ ತೆರೆಕಾಣುತ್ತಿದ್ದು, ಈ ಚಿತ್ರ ಗೆಲ್ಲೋದು ಅನುಮಾನ ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ. ಈ ಮಧ್ಯೆ ಒಂದು ನಂಬಿಕೆ ಬಗ್ಗೆ ಅಭಿಮಾನಿಗಳು ಆತಂಕ ಹೊರಹಾಕಿದ್ದಾರೆ. ಇದಕ್ಕೆ ಮುಖ್ಯ ಕಾರಣ ರಾಜಮೌಳಿಯವರ ಶಾಪವೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಏಕೆಂದರೆ ರಾಜಮೌಳಿ ಜೊತೆ ಸಿನಿಮಾ ಮಾಡಿದ ಹೀರೋಗಳ ಮುಂದಿನ ಸಿನಿಮಾ ಫ್ಲಾಪ್ ಆಗುತ್ತದೆ ಎಂಬ ನಂಬಿಕೆ ಟಾಲಿವುಡ್​​ನಲ್ಲಿ ಇದೆ. ಇದು ಅನೇಕ ಬಾರಿ ಸಾಬೀತಾಗಿದೆ. ರಾಜಮೌಳಿ ನಿರ್ದೇಶನ ಆರ್​ಆರ್​ಆರ್​ ಚಿತ್ರದ ಬಳಿಕ ರಾಮ್​ಚರಣ್​ ನಟನೆಯ ಆಚಾರ್ಯ ಚಿತ್ರ ಬಾಕ್ಸ್​ಆಫೀಸ್​ನಲ್ಲಿ ಹೀನಾಯವಾಗಿ ಸೋಲುಂಡಿತ್ತು. ಸ್ವತಃ ಮೆಗಾ ಕುಟುಂಬದ ಅಭಿಮಾನಿಗಳೇ ಚಿತ್ರವನ್ನು ವೀಕ್ಷಿಸಲು ಹಿಂದೇಟು ಹಾಕಿದ್ದರು. ಇದೀಗ ದೇವರಾ ಚಿತ್ರಕ್ಕೂ ಅದೇ ಭೀತಿ ಎದುರಾಗಿದ್ದು, ಈ ವಿಚಾರ ಜೂ. ಎನ್​ಟಿಆರ್​ ಅಭಿಮಾನಿಗಳನ್ನು ಚಿಂತೆಗೆ ದೂಡಿದೆ.

ಜೂ. ಎನ್​ಟಿಆರ್​ಗೆ ಈ ಅನುಭವ ಆಗುತ್ತಿರುವುದು ಇದೇ ಮೊದಲೇನು ಅಲ್ಲ. ರಾಜಮೌಳಿ ನಿರ್ದೇಶನದ, ಜೂನಿಯರ್​ ಎನ್​​ಟಿಆರ್ ನಟನೆಯ ಸ್ಟುಡೆಂಟ್ ನಂಬರ್ 1 ಸಿನಿಮಾ ಗೆದ್ದ ಬಳಿಕ ರಿಲೀಸ್ ಆದ ಸುಬ್ಬು ಫ್ಲಾಪ್ ಆಯಿತು. ಸಿಂಹಾದ್ರಿ ಗೆಲುವಿನ ಬಳಿಕ ಅವರು ಆಂಧ್ರವಾಲ ಚಿತ್ರದ ಮೂಲಕ ಸೋಲು ಕಂಡರು. ಯಮದೊಂಗ ಗೆಲುವಿನ ಬಳಿಕ ಕಂತ್ರಿ ಚಿತ್ರದ ಮೂಲಕ ಸೋಲು ಕಂಡರು. ಈ ವಿಚಾರ ಈಗ ಅಭಿಮಾನಿಗಳನ್ನು ಕಾಡುತ್ತಿದ್ದು, ದೇವರಾ ಚಿತ್ರವು ಬ್ಲಾಕ್​ಬಸ್ಟರ್​ ಆಗೆಲೆಂದು ದೇವರಲ್ಲಿ ಪ್ರಾರ್ಥಿಸಿದ್ದಾರೆ.