ನ್ಯೂಸ್

ದೇಶದಲ್ಲಿ 8 ಹೊಸ ನಗರಗಳ ಸ್ಥಾಪನೆಗೆ ಮುಂದಾಗುತ್ತಾ ಕೇಂದ್ರ?

Webdesk - Athul Damale

ನವದೆಹಲಿ: ನಮ್ಮ ದೇಶ ಇದೀಗ ವಿಶ್ವದ ಅತೀ ಹೆಚ್ಚು ಜನಸಂಖ್ಯೆ ಇರುವ ದೇಶವಾಗಿ ಹೊರಹೊಮ್ಮಿದ್ದು ಜನರ ವಾಸಕ್ಕಾಗಿ ಜಾಗದ ಕೊರತೆ ಉಂಟಾಗುವ ಸಾಧ್ಯತೆ ಇದ್ದು ಜನ ದಟ್ಟಣೆಯನ್ನೂ ಕಡಿಮೆ ಮಾಡುವ ಸಲುವಾಗಿ ಕೇಂದ್ರ ಸರ್ಕಾರ ಎಂಟು ಹೊಸ ನಗರಗಳ ಅಭಿವೃದ್ಧಿಯ ವಿಚಾರನ್ನು ಪರಿಗಣಿಸಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಇಲಾಖೆಯ ಜಿ20 ಘಟಕದ ನಿರ್ದೇಶಕ ಎಂ.ಬಿ.ಸಿಂಗ್, 15ನೇ ಹಣಕಾಸು ಆಯೋಗ, ತನ್ನ ವರದಿಯೊಂದರಲ್ಲಿ ಹೊಸ ನಗರಗಳ ಅಭಿವೃದ್ಧಿಗೆ ಶಿಫಾರಸು ಮಾಡಿದೆ" ಎಂದು ಗುರುವಾರ ಮಾಹಿತಿ ನೀಡಿದ್ದಾರೆ.

ಹಣಕಾಸು ಆಯೋಗದ ಸಲಹೆಯ ಮೇರೆಗೆ ರಾಜ್ಯಗಳು 26 ಹೊಸ ನಗರಗಳನ್ನು ರಚಿಸಲು ಕೇಂದ್ರಕ್ಕೆ ಪ್ರಸ್ತಾವನೆಗಳನ್ನು ಕಳುಹಿದ್ದವು. ಈ ಪ್ರಸ್ತಾವನೆಗಳನ್ನು ಪರಿಶೀಲಿಸಿದ ನಂತರ ಎಂಟು ಹೊಸ ನಗರಗಳ ಅಭಿವೃದ್ಧಿಯನ್ನು ಅಂತಿಮಗೊಳಿಸಲಾಗಿದ್ದು ಅವುಗಳ ಸ್ಥಳಗಳು ಮತ್ತು ಅಭಿವೃದ್ಧಿ ಸಮಯವನ್ನು ಕೇಂದ್ರ ಸರ್ಕಾರವು ಪ್ರಕಟಿಸಲಿದೆ ಎಂದು ಎಂ.ಬಿ ಸಿಂಗ್ ಹೇಳಿದ್ದಾರೆ.

ಅಸ್ತಿತ್ವದಲ್ಲಿರುವ ನಗರಗಳು ಜನರ ಅಗತ್ಯಗಳನ್ನು ಒಂದೇ ಜಾಗದಲ್ಲಿ ಪೂರೈಸಲು ಸಾಧ್ಯವಾಗದ ಕಾರಣ ದೇಶದಲ್ಲಿ ಹೊಸ ನಗರಗಳನ್ನು ನಿರ್ಮಿಸುವ ಅಗತ್ಯವನ್ನು ಒತ್ತಿ ಹೇಳಿದ ಸಿಂಗ್, "ಅಸ್ತಿತ್ವದಲ್ಲಿರುವ ನಗರಗಳ ಹೊರವಲಯದಲ್ಲಿ ಮಾಡುತ್ತಿರುವ ಆಕಸ್ಮಿಕ ವಿಸ್ತರಣೆಯಿಂದಾಗಿ ಆ ನಗರಗಳ ಮೂಲಭೂತ ಸೌಕರ್ಯಗಳ ಮೇಲೆ ಪರಿಣಾಮ ಬೀರುತ್ತಿದೆ.

ಹೊಸ ನಗರಗಳ ಸ್ಥಾಪನೆಗೆ ಹಣಕಾಸು ಮಾರ್ಗಸೂಚಿಯನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಆದರೆ ದೇಶದ ನಾಗರಿಕರಿಗೆ ಹೊಸ ನಗರಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿರುವುದರಿಂದ ಕೇಂದ್ರ ಸರ್ಕಾರವು ಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಸಿಂಗ್ ಹೇಳಿದರು. (ಏಜೆನ್ಸೀಸ್)