ನ್ಯೂಸ್

ನಟಿ ಪೂಜಾ ಹೆಗ್ಡೆಗೆ ಸಿಗ್ತಿಲ್ಲ ಹೊಸ ಆಫರ್​! ಸಂಭಾವನೆ ವಿಚಾರದಲ್ಲಿ ರಾಜಿಯಾಗುವ ಮಾತೇ ಇಲ್ಲ?

ಹೈದರಾಬಾದ್​: 'ಅಲಾ ವೈಕುಂಠಪುರಮುಲೋ', 'ಡಿಜೆ ದುವ್ವಾಡ ಜಗನ್ನಾಥಂ', 'ಹೌಸ್​ಫುಲ್ 4' ಸೇರಿದಂತೆ ಹಲವು ಸಿನಿಮಾಗಳ ಮುಖೇನ ಬ್ಯಾಕ್​ ಟು ಬ್ಯಾಕ್​ ಹಿಟ್​ ಕೊಟ್ಟ ಸೌತ್​ ಬ್ಯೂಟಿ, ನಟಿ ಪೂಜಾ ಹೆಗ್ಡೆ ಸದ್ಯ ಚಿತ್ರರಂಗದಿಂದ ಯಾಕೋ ದೂರ ಉಳಿದಂತೆ ಕಾಣುತ್ತಿದ್ದಾರೆ. ಅಲ್ಲು ಅರ್ಜುನ್, ದಳಪತಿ ವಿಜಯ್ ಮುಂತಾದವರ ಜತೆ ಅಭಿನಯಿಸಿ ಅಪಾರ ಸಂಖ್ಯೆಯ ಸಿನಿಪ್ರೇಕ್ಷಕರ ಮನಗೆದ್ದು, ಸೈ ಎನಿಸಿಕೊಂಡ ಪೂಜಾ, ಅದ್ಯಾಕೋ ಗೊತ್ತಿಲ್ಲ ಕಳೆದ ಹಲವು ತಿಂಗಳುಗಳಿಂದ ಒಂದೇ ಒಂದು ಹೊಸ ಚಿತ್ರಕ್ಕೂ ಸಹಿ ಹಾಕಿಲ್ಲ ಎಂಬ ಸಂಗತಿ ಸದ್ಯ ಅವರ ಅಭಿಮಾನಿಗಳಲ್ಲಿ ಭಾರೀ ಬೇಸರವನ್ನು ತಂದೊಡ್ಡಿದೆ.

ಪ್ರಭಾಸ್​ ಜತೆಗೆ 'ರಾಧೆ ಶ್ಯಾಮ್'​ನಲ್ಲಿ ಕಾಣಿಸಿಕೊಂಡ ಬಳಿಕ ಪೂಜಾಗೆ ಮುಂಬರುವ ಸಿನಿಮಾಗಳಲ್ಲಿ ಅವಕಾಶ ಸಿಕ್ಕರು ಕೂಡ ತಾವೇ ನಾಯಕಿಯಾಗಿ ಮುಂದುವರೆಯುವ ಅದೃಷ್ಟ ಕಂಡುಬರುತ್ತಿಲ್ಲ. ಇದಕ್ಕೆ ಸೂಕ್ತ ನಿದರ್ಶನ ಎಂದರೆ ಇತ್ತೀಚೆಗಷ್ಟೇ ತೆರೆಕಂಡಿರುವ ಮಹೇಶ್​ ಬಾಬು ನಟನೆಯ 'ಗುಂಟೂರು ಕಾರಂ' ಚಿತ್ರದಲ್ಲಿ ಪ್ರಿನ್ಸ್​ಗೆ ಹೀರೋಯಿನ್ ಆಗಿ ಮೊದಲು ಆಯ್ಕೆಯಾಗಿದ್ದು ಪೂಜಾ. ಆದ್ರೆ, ಈ ವಿಚಾರ ಅಧಿಕೃತವಾಗಿ ಘೋಷಣೆಯಾದ ಬಳಿಕ ನಾಯಕಿ ಪಾತ್ರದಲ್ಲಿ ಬದಲಾವಣೆಯಾಗಿದೆ ಎಂದು ಚಿತ್ರತಂಡ ಘೋಷಿಸಿತು.

'ಗುಂಟೂರು ಕಾರಂ' ತಂಡದಿಂದ ಪೂಜಾ ಹೆಗ್ಡೆ ಹೊರಬಂದಿದ್ದಾರೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಇದಕ್ಕೆ ಕಾರಣವೇನು ಎಂಬುದನ್ನು ಹುಡುಕಿದಾಗ ತಿಳಿದದ್ದು, ನಟಿಯ ಸಂಭಾವನೆ ವಿಚಾರ! ಅಸಲಿಗೆ ಚಿತ್ರದ ತಯಾರಕರು ಮತ್ತು ಪೂಜಾ ಮಧ್ಯೆ ಪೇಮೆಂಟ್ ವಿಷಯದಲ್ಲಿ ಒಂದಷ್ಟು ಗೊಂದಲ ಉಂಟಾಯಿತು. ತಾವು ಕೇಳಿದ ಸಂಭಾವನೆ ತಮಗೆ ಸಿಗಲಿಲ್ಲ ಎಂದು ನಟಿ ಹೊರನಡೆದರು ಎಂಬ ಸುದ್ದಿ ಸಾಮಾಜಿಕ ಜಾಲತಾಣ ಸೇರಿದಂತೆ ಮಾಧ್ಯಮಗಳಲ್ಲಿ ಹರಿದಾಡಿತು.

ಟಾಲಿವುಡ್​ನಲ್ಲಿ ಬಹು ಬೇಡಿಕೆಯ ನಟಿಯರ ಪೈಕಿ ಅಗ್ರಸ್ಥಾನ ಗಿಟ್ಟಿಸಿಕೊಂಡಿದ್ದ ಪೂಜಾ, ಕಳೆದ ಸಿನಿಮಾಗಳಲ್ಲಿ ನಟಿಸಲು 3.50ರಿಂದ 4 ಕೋಟಿ ರೂ.ಗಳವರೆಗೆ ಸಂಭಾವನೆ ಪಡೆದುಕೊಂಡಿದ್ದರು. ಅದರ ಬೆನ್ನಲೇ ಆ ಸಿನಿಮಾಗಳು ಬಾಕ್ಸ್​ ಆಫೀಸ್​ನಲ್ಲಿ ಅಬ್ಬರಿಸಿತು. ಆದ್ರೆ, ತದನಂತರ ಒಲಿದು ಬಂದ ಅಫರ್​ಗಳಲ್ಲಿ ನಟಿ ಬಯಸಿದ ಸಂಭಾವನೆ ಸಿಗುತ್ತಿಲ್ಲ ಹಾಗೂ ಅವರಿಟ್ಟಿರುವ ಬೇಡಿಕೆಗೆ ನಿರ್ಮಾಪಕರು ಒಪ್ಪುತ್ತಿಲ್ಲ ಎಂದು ವರದಿ ಹೇಳಿದೆ.

ಕಳೆದ 18 ತಿಂಗಳಿಂದ ಪೂಜಾ ಹೆಗ್ಡೆಗೆ ಯಾವುದೇ ಹೊಸ ಸಿನಿಮಾ ಆಫರ್ ಬಂದಿಲ್ಲ ಎಂದು ಹೇಳಲಾಗಿದ್ದು, ಮುಂಬರುವ ಸಿನಿಮಾಗಳಲ್ಲಿ ಅಭಿನಯಿಸಲು 3.5 ಕೋಟಿ ರೂ. ಸಂಭಾವನೆಗೆ ಬೇಡಿಕೆ ಇಡುತ್ತಿದ್ದಾರೆ ಎಂದು ವರದಿಯಾಗಿದೆ,(ಏಜೆನ್ಸೀಸ್).