ಇತ್ಯಾದಿಗಳನ್ನು ಕೈಗೊಂಡರೂ ಈವರೆಗೆ ಯಾರೂ ನಾನು ಭಗವದ್ದರ್ಶನ ಪಡೆದೆ ಎಂದು ಹೇಳಿದ್ದಿಲ್ಲ. ಇದಕ್ಕೆ ಮೂಲ ಕಾರಣ ಹುಡುಕಿದರೆ ನಮಗೆ ಅರಿವಾಗುವ ಒಂದು ಸತ್ಯವೆಂದರೆ ಯಾರಿಗೂ ಭಗವದ್ದರ್ಶನದ ವ್ಯಾಕುಲತೆ ಇಲ್ಲ ಎನ್ನುವುದೇ ಆಗಿದೆ. ಯಾರಿಗೂ ಕನಕ, ಪುರಂದರ, ಅನ್ನಮಾಚಾರ್ಯ, ಭದ್ರಾಚಲ ರಾಮದಾಸ, ಭಕ್ತೆ ಮೀರಾ, ಸೂರ ದಾಸ ಇತ್ಯಾದಿ ಭಕ್ತಾಗ್ರಣ್ಯರಲ್ಲಿದ್ದ ಆ ಭಗವದ್ ವ್ಯಾಕುಲತೆಯ ಪರಿಚಯವೇ ಇಲ್ಲ. ಈ ವಿಚಾರಗಳನ್ನು ಕೂಲಂಕಷವಾಗಿ ಅರಿಯಲು, ಪ್ರಯತ್ನಿಸಿದಾಗ ನಮಗೆ ತೋರುವುದು ಕೇವಲ ಆಸೆ, ಆಕಾಂಕ್ಷೆಗಳನ್ನು ಈಡೇರಿಸುವಂತಾಗಲಿ ಎಂದು ಭೇಟಿ ನೀಡುವರೇ ಹೆಚ್ಚು ಎನ್ನುವುದು.
ಭಗವಾನ್ ಶ್ರೀರಾಮಕೃಷ್ಣ ಪರಮಹಂಸರ ಪ್ರಕಾರ ಮನುಷ್ಯನ ಏಕೈಕ ಗುರಿ ಭಗವಂತನ ಸಾಕ್ಷಾತ್ಕಾರವೇ ವಿನಹ ಪ್ರಾಪಂಚಿಕ ಸುಖ, ಸಂತೋಷವಲ್ಲ. ಹಾಗಾದರೆ ಭಗವದ್ ಚಿಂತನೆ, ನಾಮಸ್ಮರಣೆಯನ್ನು ಪೂರ್ಣ ನಿಷ್ಠೆ, ಶ್ರದ್ಧೆ, ಭಕ್ತಿಯಿಂದ ಆಚರಿಸುವವರು ಯಾರು? ರಾಮಕೃಷ್ಣರು ಒಂದು ಉದಾಹರಣೆ ಯನ್ನು ಭಕ್ತರಿಗೆ ತಿಳಿಸುತ್ತಾರೆ: ರಾಮ ಲಕ್ಷ್ಮಣರು ಪಂಪಾ ಸರೋವರಕ್ಕೆ ಹೋಗಿದ್ದರು. ಅಲ್ಲಿ ಒಂದು ಪಕ್ಷಿ ಆತುರದಿಂದ ನೀರು ಕುಡಿಯಲೆಂದು ಆ ಸರೋವರದ ದಡದ ಹತ್ತಿರ ಮತ್ತೆ ಮತ್ತೆ ಹೋಗುತ್ತಾ ನೀರನ್ನು ಕುಡಿಯದೆ ಹಿಂದಿರುಗುತ್ತಿತ್ತು. ಇದನ್ನು ಲಕ್ಷ್ಮಣ ನೋಡಿದ. ಯಾಕೆ ಹಾಗೆಂದು ರಾಮನನ್ನು ಕೇಳಿದ. ಶ್ರೀರಾಮ ಹೇಳಿದ: ‘ತಮ್ಮ, ಇದು ಪರಮಭಕ್ತ ಪಕ್ಷಿ ಅಹರ್ನಿಷಿ. ಇದು ರಾಮನಾಮವನ್ನು ಜಪಿಸುತ್ತಿದೆ. ನೀರಡಿಕೆಯಿಂದ ಇದರ ಗಂಟಲು ಒಣಗಿಹೋಗುತ್ತಿದೆ. ಆದರೂ ಅದಕ್ಕೆ ನೀರು ಕುಡಿಯಲು ಆಗುತ್ತಿಲ್ಲ. ನೀರು ಕುಡಿಯಲು ಹೋದರೆ ಆ ಸಮಯದಲ್ಲಿ ರಾಮ ಜಪ ನಿಂತು ಹೋಗುವುದಲ್ಲ, ಎಂಬುದು ಅದರ ಚಿಂತೆ’
ಈ ಉದಾಹರಣೆ ಅತ್ಯಂತ ಅರ್ಥಗರ್ಭಿತವಾಗಿದೆ. ಈ ಆಧುನಿಕ ಯುಗದಲ್ಲಿ ಅತ್ಯಂತ ಶ್ರದ್ಧೆ ಹಾಗೂ ನಿಷ್ಠೆಯಿಂದ ಜಪಿಸುವುದೂ ಅತ್ಯಂತ ಕಠಿಣತಮವಾದ ಸಾಧನೆ ಯಾಗಿದೆ. ಭಗವದ್ದರ್ಶನಕ್ಕೆ ಸದಾ ಹಾತೊರೆಯುತ್ತಿರಬೇಕಾದ ಸಂತರು, ಮಹಾತ್ಮರು, ಸಾಧಕರು ದೊರಕುವುದೇ ದುಸ್ತರ. ಕೇವಲ ಯಾಂತ್ರಿಕವಾಗಿ ಹಾಗೂ ಇತ್ತೀಚಿನ ಕಾಲದಲ್ಲಿ ಆಧುನಿಕತೆಯ ಹಿನ್ನೆಲೆಯಲ್ಲಿ ನಾನಾ ರೀತಿಯ ತರಬೇತಿ ಶಿಬಿರಗಳು ಎಂದು ಪ್ರದರ್ಶನಕ್ಕಾಗಿ ನಿತ್ಯ ಜಾಹಿರಾತುಗಳನ್ನು ಕಾಣುತ್ತಿರುತ್ತವೆ. ಆದರೆ ಸಾಧನೆಯ ಅತ್ಯಂತ ಕಠಿಣತಮ ಸಂದರ್ಭವೆಂದರೆ ಭಗವದ್ದರ್ಶನ, ಭಗವತ್ ಕೃಪೆಗಾಗಿ ಸರ್ವಸ್ವವನ್ನು ಮರೆತು ಕೇವಲ ಭಗವದ್ ದರ್ಶನಕ್ಕೆ ಅಹರ್ನಿಷಿ ಪ್ರಯತ್ನಿಸುವುದೇ ನಿಜವಾದ ಅರ್ಥದಲ್ಲಿ ಸಾಧನೆ.
ರಾಮಕೃಷ್ಣರು ಹೇಳುವ ಮಾತಿದು: ವ್ಯಾಕುಲತೆ ಬೇಕು, ಯಾವ ರೀತಿಯಾಗಿ ಮಗು ತಾಯನ್ನು ಕಾಣದೆ ದಿಗ್ಭ›ಮೆಗೊಂಡು ಆಕೆಗಾಗಿ ಹಾತೊರೆಯುತ್ತದೆಯೋ, ಅಳುತ್ತದೆಯೋ, ಅದೇ ರೀತಿಯಾಗಿ ವ್ಯಾಕುಲನಾಗಿ ಭಗವದ್ದರ್ಶನಕ್ಕೆ ಪೂರ್ಣ ಪ್ರಯತ್ನಪಟ್ಟಲ್ಲಿ ಮಾತ್ರ ಭಗವದ್ದರ್ಶನ ದೊರೆಯುತ್ತದೆ. ಈ ಅಂಶವನ್ನು ಮುಂದುವರಿಸುತ್ತಾ ಪರಮಹಂಸರು ಮತ್ತೊಂದು ಉದಾಹರಣೆ ನೀಡುತ್ತಾರೆ. ಇದರ ಮೂಲಕ ರಾಮಕೃಷ್ಣರು ಸಾಧಕರ ಮನಸ್ಸನ್ನು ಭಗವದ್ದರ್ಶನಕ್ಕೆ ಅಣಿಮಾಡುವಂತಿದೆ.
ಪರಮಹಂಸರು ಹೇಳಿದ್ದು ಹೀಗೆ: ಒಬ್ಬ ಶಿಷ್ಯ ಗುರುವನ್ನು ಕೇಳಿದ, ಭಗವಂತನನ್ನು ಪಡೆಯುವುದು ಹೇಗೆ? ಅದಕ್ಕೆ ಗುರು ತಿಳಿಸಿದರು, ಬಾ ನನ್ನೊಡನೆ, ನಿನಗೆ ತೋರಿಸಿಕೊಡುತ್ತೇನೆ, ಹೀಗೆಂದು ಹೇಳಿ ಗುರು ಆತನನ್ನು ತನ್ನ ಸಂಗಡ ಕರೆದುಕೊಂಡು ಒಂದು ಕೆರೆಯ ಹತ್ತಿರಕ್ಕೆ ಹೋದರು. ಇಬ್ಬರೂ ನೀರಿಗೆ ಇಳಿದರು. ಬಳಿಕ ಗುರು ಇದ್ದಕ್ಕಿದ್ದ ಹಾಗೆ ಶಿಷ್ಯನನ್ನು ನೀರಿನೊಳಕ್ಕೆ ಮುಳುಗಿಸಿ ಅದುಮಿ ಹಿಡಿದ. ಒಂದು ಸ್ವಲ್ಪ ಕ್ಷಣಗಳ ನಂತರ ಆತನನ್ನು ಬಿಟ್ಟ. ಶಿಷ್ಯ ನೀರಿನಿಂದ ಮೇಲಕ್ಕೆ ದಡಬಡಿಸಿ ಎದ್ದು ನಿಂತ. ಆಗ ಗುರು ಕೇಳಿದ, ನೀರಿನೊಳಗಿದ್ದಾಗ ನಿನಗೇನನ್ನಿಸುತ್ತಿತ್ತು? ಶಿಷ್ಯ ಹೇಳಿದ: ಪ್ರಾಣ ಹೋಗುವುದರಲ್ಲಿತ್ತು; ಒಂದು ಕ್ಷಣ ಉಸಿರಿಗಾಗಿ ಪ್ರಾಣ, ಸುಮ್ಮನೆ ಚಡಪಡಿಸುತ್ತಿತ್ತು. ಆಗ ಗುರು ಹೇಳಿದ, ಯಾವಾಗ ನಿನ್ನ ಪ್ರಾಣ ಈ ರೀತಿಯಾಗಿ ಭಗವಂತನಿಗಾಗಿ ವ್ಯಾಕುಲ ಪಡುವುದೋ ಆಗ ನೀನು ಹೆಚ್ಚು ಕಾಲ ಆತನ ದರ್ಶನಕ್ಕೆ ಕಾಯಬೇಕಿಲ್ಲ.