ನ್ಯೂಸ್

ಯಾವ ದೇಶ ಮೊದಲಿಗೆ ಪಡೆಯುತ್ತೆ ಕರೊನಾ ಲಸಿಕೆ? ಭಾರತಕ್ಕೂ ಖುಲಾಯಿಸುತ್ತೆ ಅದೃಷ್ಟ

ನವದೆಹಲಿ: ಕರೊನಾ ವೈರಸ್​ ನಿವಾರಣೆಗೆ ಲಸಿಕೆಯನ್ನು ಕಂಡು ಹಿಡಿಯಲು ಜಗತ್ತಿನಾದ್ಯಂತ 100ಕ್ಕೂ ಅಧಿಕ ಕಂಪನಿಗಳು ಸಂಶೋಧನಾ ಕಾರ್ಯದಲ್ಲಿ ತೊಡಗಿವೆ. ಇರಲ್ಲಿ ಸದ್ಯ 12ಕ್ಕೂ ಅಧಿಕ ಕಂಪನಿಗಳು ಮಾನವರ ಮೇಲೆ ಪ್ರಯೋಗ ನಡೆಸಿವೆ.

ಈಗಾಗಲೇ ಕೆಲ ಕಂಪನಿಗಳು ಜುಲೈನಲ್ಲಿ ಅಂತಿಮ ಹಂತದ ಪರೀಕ್ಷೆ ಆರಂಭಿಸಲಿವೆ. ಇದು ಯಶಸ್ವಿಯಾದಲ್ಲಿ ಸೆಪ್ಟಂಬರ್​ ಅಥವಾ ವರ್ಷಾಂತ್ಯಕ್ಕೆ ಲಸಿಕೆ ಬಳಕೆಗೆ ಮುಕ್ತವಾಗಲಿದೆ. ಈಗಾಗಲೇ ತುರ್ತು ಬಳಕೆಗೆಂದೇ ಲಕ್ಷಾಂತರ ಡೋಸ್​ ತಯಾರಿಸಲಾಗಿದ್ದು, ರೋಗಿಗಳಿಗೆ ನೀಡುವುದೊಂದೇ ಬಾಕಿ.

ಸದ್ಯ ಪೈಪೋಟಿ ನಡೆದಿರುವುದು ಯಾವ ದೇಶ ಮೊದಲು ಕೋವಿಡ್​ ಲಸಿಕೆಯನ್ನು ತನ್ನ ಜನರಿಗೆ ನೀಡಲಿದೆ ಎಂಬುದು. ಅಮೆರಿಕ ಹಾಗೂ ಇಂಗ್ಲೆಂಡ್​ ಈಗಾಗಲೇ ಕೋವಿಡ್​ ಲಸಿಕೆ ತಯಾರಿಸುತ್ತಿರುವ ಕಂಪನಿಗಳಲ್ಲಿ ಭಾರಿ ಮೊತ್ತದ ಹಣ ತೊಡಗಿಸಿವೆ. ಜತೆಗೆ, ಚೀನಾ ಕೂಡ ಇವೆರಡು ರಾಷ್ಟ್ರಗಳಿಗೆ ಪೈಪೋಟಿ ನೀಡುತ್ತಿದೆ.

ಬ್ರಿಟನ್​ ಮತ್ತು ಅಮೆರಿಕ ದೇಶಗಳು ಆಕ್ಸ್​ಫರ್ಡ್​ ವಿವಿ ಹಾಗೂ ಆಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿಪಡಿಸುತ್ತಿರುವ ಕೋವಿಡ್​ ಲಸಿಕೆಗಾಗಿ ಭಾರಿ ಮೊತ್ತದ ಹಣವನ್ನು ವಿನಿಯೋಗಿಸಿವೆ. ಇದು ಯಶಸ್ವಿಯಾದಲ್ಲಿ ಬ್ರಿಟನ್​ ಮೊದಲಿಗೆ ಈ ಲಸಿಕೆಯನ್ನು ಪಡೆಯಲಿದೆ. ನಂತರ ಅಮೆರಿಕದವರಿಗೆ ಲಭ್ಯವಾಗಲಿದೆ.

ಇಲ್ಲಿ ಆಸಕ್ತಿಕರ ವಿಚಾರವೆಂದರೆ, ಪುಣೆಯ ಸಿಎಂ ಇನ್​ಸ್ಟಿಟ್ಯೂಟ್​ ಆಫ್​ ಇಂಡಿಯಾ 100 ಕೋಟಿ ಡೋಸ್​ ಲಸಿಕೆ ಉತ್ಪಾದನೆಗೆ ಈಗಾಗಲೇ ಒಪ್ಪಂದ ಮಾಡಿಕೊಂಡಿದೆ. ಮೊದಲ ವರ್ಷ 60 ಲಕ್ಷ ಡೋಸ್​ ಉತ್ಪಾದಿಸಿದರೆ, ಅದರಲ್ಲಿ ಅಂದಾಜು 20 ಲಕ್ಷ ಡೋಸ್​ ಭಾರತದ ಬಳಕೆಗಾಗಿ ದೊರೆಯಲಿದೆ.

ಇದಲ್ಲದೇ, ಅಮೆರಿಕದ ಮಾಡೆರ್ನಾ ಕಂಪನಿ ಕೂಡ ಲಸಿಕೆ ಸಂಶೋಧನೆಯಲ್ಲಿ ಮುಂಚೂಣಿಯಲ್ಲಿದೆ. ಈ ಕಾರಣಕ್ಕಾಗಿ ಮೊದಲಿಗೆ ಲಸಿಕೆ ಪಡೆಯುವ ವಿಶ್ವಾಸ ಈ ದೇಶದ್ದಾಗಿದೆ. ಲಸಿಕೆ ಉತ್ಪಾದನೆಗೆ ಅಂತಾರಾಷ್ಟ್ರೀಯ ಒಕ್ಕೂಟವಾಗಿರುವ 'ಜಿಎವಿಐ- ಗ್ಲೋಬಲ್​ ಅಲೈನ್ಸ್​ ಫಾರ್​ ವಾಕ್ಸಿನ್​ ಇನ್ವೆಷನ್​' ಕೂಡ ಬಡ ರಾಷ್ಟ್ರಗಳಿಗಾಗಿ ಲಸಿಕೆ ಖರೀದಿಸಲಿದೆ.

ಇದಲ್ಲದೇ, ವಿಶ್ವ ಆರೋಗ್ಯ ಸಂಸ್ಥೆ ಕೂಡ ಲಸಿಕೆ ಎಲ್ಲ ದೇಶಗಳಿಗೂ ಲಭ್ಯವಾಗುವಂತೆ ಮಾಡಲು ಸೂತ್ರವೊಂದನ್ನು ರೂಪಿಸಲು ಮುಂದಾಗಿದೆ. ಇದರಲ್ಲಿ ಶ್ರೇಣಿಕೃತ ವ್ಯವಸ್ಥೆಯೊಂದನ್ನು ಅನುಷ್ಠಾನಕ್ಕೆ ತರಲಿದೆ.