ನ್ಯೂಸ್

ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ ಸತ್ಯ; ಗಾಳಿಯಿಂದಲೂ ಸೋಂಕು; ಮಾಸ್ಕ್​ ಇಲ್ಲದಿದ್ದರೆ ಖಂಡಿತ ಆಪತ್ತು

ನವದೆಹಲಿ: ಗಾಳಿಯಿಂದಲೂ ಕರೊನಾ ಸೋಂಕು ಹರಡುತ್ತದೆ ಎಂದು 32 ದೇಶಗಳ 239 ತಜ್ಞ ವೈದ್ಯರು ನೀಡಿದ್ದ ಸಾಕ್ಷ್ಯಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದೆ.

ನೊವಲ್​ ಕರೊನಾ ವೈರಸ್​ ಗಾಳಿಯಲ್ಲಿರುವ ಕಣಗಳ ಮೂಲಕ ವ್ಯಕ್ತಿಯಲ್ಲಿ ಕೋವಿಡ್​ ಉಂಟು ಮಾಡಬಲ್ಲುದು ಎಂದು ಹಲವು ಸಾಕ್ಷ್ಯಾಧಾರಗಳನ್ನು ಒಳಗೊಂಡ ವರದಿಯನ್ನು ಒಪ್ಪಿಸಲಾಗಿತ್ತು. ಇದನ್ನು ಬುಧವಾರ ವಿಶ್ವ ಆರೋಗ್ಯ ಸಂಸ್ಥೆ ಅನುಮೋದಿಸಿದೆ.

ಗಾಳಿ ಹಾಗೂ ಗಾಳಿಯಲ್ಲಿರುವ ಕಣಗಳ ಮೂಲಕವೂ ಕರೊನಾ ಸೋಂಕು ಹರಡುವ ಸಾಧ್ಯತೆ ಇದೆ ಅಥವಾ ಇದು ಕೂಡ ಒಂದು ಕಾರಣ ಎಂದು ಗೊತ್ತಾಗಿರುವುದಾಗಿ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಮುಖ್ಯಸ್ಥೆ ಮರಿಯಾ ವ್ಯಾನ್​ ಕರ್ಖೊವೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ವ್ಯಕ್ತಿ ಕೆಮ್ಮಿದಾಗ ಅಥವಾ ಸೀನಿದಾಗ ಕರೊನಾ ವೈರಸ್​ ಕಣಗಳು ನೆಲಕ್ಕೆ ಅಥವಾ ಇತರ ಮೇಲ್ಮೈಗಳಿಗೆ ಅಂಟಿಕೊಳ್ಳುತ್ತದೆ ಎಂದು ಈ ಮೊದಲು ವಿಶ್ವ ಆರೋಗ್ಯ ಸಂಸ್ಥೆ ಹೇಳಿತ್ತು. ಗಾಳಿ ಮೂಲಕ ಹರಡುವ ಸಾಧ್ಯತೆಯನ್ನು ಒಪ್ಪಿಕೊಂಡಿರಲಿಲ್ಲ.

ಇದನ್ನು ಒಪ್ಪಿಕೊಳ್ಳಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು ಎನ್ನುತ್ತಾರೆ ವರದಿಗೆ ಸಹಿ ಹಾಕಿದ್ದ ಕೊಲರಾಡೊ ವಿವಿ ತಜ್ಞರಾದ ಜೋಸ್​ ಜಿಮಿನೇಜ್. ಅದಕ್ಕೀಗ ಮನ್ನಣೆ ದೊರಕಿದ್ದು, ಹೊಸ ಆವಿಷ್ಕಾರದ ಹಿನ್ನೆಲೆಯಲ್ಲಿ ಕರೊನಾ ಬಗ್ಗೆ ಹೊರಡಿಸಲಾಗಿರುವ ಮಾರ್ಗಸೂಚಿಯನ್ನು ಪರಿಷ್ಕೃತಗೊಳಿಸಬೇಕೆಂದು ತಜ್ಞರು ಆಗ್ರಹಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಮಾಸ್ಕ್​ ಧರಿಸದೆ ಇರುವುದು, ವ್ಯಕ್ತಿಗತ ಅಂತರ ಕಾಯ್ದುಕೊಳ್ಳದೆ ಇರುವುದು ಕರೊನಾಗೆ ಆಹ್ವಾನ ನೀಡಿದಂತೆ ಎಂಬುದಂತೂ ಖಚಿತ.