King Cobra : ಕಾಳಿಂಗ ಸರ್ಪವನ್ನು ನೋಡಿದರೆ ಸಾಕು ಒಂದು ಕ್ಷಣ ಮೈಯೆಲ್ಲ ನಡುಗುತ್ತದೆ. ಭಯಕ್ಕೆ ಇನ್ನೊಂದು ಹೆಸರೇ ಕಾಳಿಂಗ ಸರ್ಪ. ತನ್ನ ಉದ್ದವಾದ ದೇಹ ಮತ್ತು ಸ್ಥಿರವಾದ ನೋಟದಿಂದಲೇ ಎಲ್ಲರನ್ನು ಭಯ ಬೀಳಿಸುತ್ತದೆ. ಎಡೆಯನ್ನು ಬಿಚ್ಚಿ 19 ಅಡಿ ಎತ್ತರದವರೆಗೂ ಭವ್ಯವಾಗಿ ನಿಲ್ಲುವ ಈ ಜಾತಿಯ ಹಾವು ತನ್ನ ಗಾಂಭೀರ್ಯತೆಯಿಂದಲೇ ಹಾವುಗಳ ರಾಜ ಎಂಬ ಬಿರುದನ್ನು ಪಡೆದುಕೊಂಡಿದೆ. ಈ ಕಾಳಿಂಗ ಸರ್ಪ ತೀವ್ರ ಸ್ವರೂಪದ ವಿಷ ಹೊಂದಿರುವ ಹಾವುಗಳಾಗಿದ್ದು, ಬಲು ಅಪಾಯಕಾರಿಯಾಗಿವೆ.
ಕಾಳಿಂಗ ಸರ್ಪಗಳು ಕರ್ನಾಟಕದ ಕಾಡುಗಳಲ್ಲಿ ಸಾಮಾನ್ಯವಾಗಿ ಕಂಡುಬರುತ್ತವೆ. ಇನ್ನು ಹೊಸ ವರ್ಷ ಆರಂಭವಾಗಲಿದೆ. ಜನವರಿಯಿಂದ ಏಪ್ರಿಲ್ವರೆಗೂ ಹಾವುಗಳ ಮಿಲನ ಸಮಯ. ಹೀಗಾಗಿ ಸಂಗಾತಿಗಳನ್ನು ಹುಡುಕಿ ಈ ಸಮಯದಲ್ಲಿ ಅಲೆದಾಡುತ್ತವೆ. ಹೆಣ್ಣು ಹಾವುಗಳು ಬಿಡುಗಡೆ ಮಾಡುವ ಕೆಲವು ಹಾರ್ಮೋನ್‌ಗಳಿಗೆ ಗಂಡು ಹಾವುಗಳು ಆಕರ್ಷಿತವಾಗುತ್ತವೆ ಮತ್ತು ಅವುಗಳನ್ನು ಹುಡುಕಿಕೊಂಡು ಬರುತ್ತವೆ.
ಅಂದಹಾಗೆ ಕಾಳಿಂಗ ಸರ್ಪಗಳು ವಾಸನೆಯನ್ನು ಕಿಲೋಮೀಟರ್ ದೂರದಿಂದಲೂ ಗ್ರಹಿಸಬಲ್ಲದು. ಒಂದು ಅರಣ್ಯ ಪ್ರದೇಶದಿಂದ ಮತ್ತೊಂದು ಅರಣ್ಯ ಪ್ರದೇಶಕ್ಕೆ ಪ್ರಯಾಣಿಸುವಾಗ ಕೆಲವೊಮ್ಮೆ ಜನವಸತಿ ಪ್ರದೇಶಗಳಿಗೆ ನುಗ್ಗಿಬಿಡುತ್ತವೆ. ಅದರ ಹೊರತಾಗಿ, ಕಾಳಿಂಗ ಸರ್ಪ ಜನವಸತಿ ಪ್ರದೇಶಗಳಿಗೆ ಬರುವುದಿಲ್ಲ.
ಒಮ್ಮೆ ಕಾಳಿಂಗ ಸರ್ಪ ಒಂದು ಸ್ಥಳಕ್ಕೆ ಬಂದರೆ, ಪ್ರಕೃತಿಯೇ ಕೆಲವು ಚಿಹ್ನೆಗಳನ್ನು ನೀಡುತ್ತದೆ. ಕಾಗೆಗಳು ಗುಂಪು ಗುಂಪಾಗಿ ಕೂಗುವುದು, ನಾಯಿಗಳು ಬೊಗಳುವುದು, ಇವೆಲ್ಲವೂ ಸಂಕೇತಗಳಾಗಿವೆ. ಅರಣ್ಯ ಸಿಬ್ಬಂದಿ ಇದನ್ನು ಸಾಮಾನ್ಯವಾಗಿ ಅರ್ಥಮಾಡಿಕೊಳ್ಳಬಹುದು.
ಅಂದಹಾಗೆ ಹಾವುಗಳು ಮನುಷ್ಯರಿಂದ ದೂರ ವಾಸಿಸುವ ಜೀವಿಗಳಾಗಿವೆ. ಆದರೆ, ಮಿಲನದ ಸೀಸನ್ನಲ್ಲಿ ಹಗಲು ಮತ್ತು ರಾತ್ರಿಯ ಸಮಯದಲ್ಲಿ ಸಂಗಾತಿಗಾಗಿ ತಿರುಗುತ್ತವೆ. ಈ ರೀತಿಯಲ್ಲಿ ಸಂಚರಿಸುವ ಅತ್ಯಂತ ಸಾಮಾನ್ಯವಾಗಿ ಕಂಡುಬರುವ ಹಾವಿನ ಜಾತಿಯೆಂದರೆ ಹೆಬ್ಬಾವು, ನಾಗರಹಾವು ಮತ್ತು ವೈಪರ್. ಹೀಗಾಗಿ ಹಾವುಗಳು ಮಿಲನದ ಸಮಯ ಹತ್ತಿರ ಬರುತ್ತಿರುವುದರಿಂದ ನಿಮ್ಮ ಹತ್ತಿರದ ಸ್ಥಳಗಳಿಗೆ ನುಸುಳಬಹುದು. ಹೀಗಾಗಿ ಎಚ್ಚರ ವಹಿಸಿ. (ಏಜೆನ್ಸೀಸ್)