ಅಹಮದಾಬಾದ್: ಗುಜರಾತ್ನ ತಾಪಿ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ವಿಚಿತ್ರ ಘಟನೆ ನಡೆದಿದೆ. ಮೇಕೆಯೊಂದು ಮಾನವ ಮುಖವನ್ನೇ ಹೋಲುವ ಮರಿಗೆ ಜನ್ಮ ನೀಡಿದ್ದು, ಅದರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಈ ಘಟನೆ ತಾಪಿ ಜಿಲ್ಲೆಯ ಸೆಲ್ಟಿಪದ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಅಜಯ್ಭಾಯ್ ವಾಸವ ಎಂಬ ರೈತನ ಮನೆಯಲ್ಲಿ ಮೇಕೆ ವಿಚಿತ್ರ ಮರಿಗೆ ಜನ್ಮ ನೀಡಿದೆ. ಮರಿಯ ಮುಖ ಬಹುತೇಕ ಮಾನವನ ಮುಖವನ್ನೇ ಹೋಲುತ್ತಿದೆ. ಗಡ್ಡದ ಕೂದಲು ಮಾನವನ ಮಾದರಿಯಲ್ಲಿದೆ.
ಅಚ್ಚರಿಯೆಂದರೆ, ಕಾಲುಗಳು ಮತ್ತು ಕಿವಿಗಳನ್ನು ಹೊರತುಪಡಿಸಿದರೆ ಉಳಿದ ದೇಹ ಸಂಪೂರ್ಣ ಮಾನವ ಮಾದರಿಯಲ್ಲಿದೆ. ಹಣೆ, ಕಣ್ಣುಗಳು, ಮುಖ ಸೇರಿ ಬಹುತೇಕ ಭಾಗ ಥೇಟ್ ಮಾನವನಂತಿದೆ. ಇನ್ನು ವಿಚಿತ್ರವೆಂದರೆ ಮರಿಗೆ ಬಾಲವೇ ಇಲ್ಲ.
ಇದೀಗ ವಿಚಿತ್ರ ಮೇಕೆ ಮರಿ ನೋಡಿದ ಜನರಲ್ಲಿ ಅಚ್ಚರಿಯ ಜತೆಗೆ ಆಘಾತವೂ ಆಗಿದೆ. ಇದು ತಮ್ಮ ಪೂರ್ವಜರು ರೂಪ ಇರಬೇಕೆಂದು ಸ್ಥಳೀಯ ಜನರು ನಂಬಿದ್ದು, ವಿಚಿತ್ರ ಮೇಕೆ ಮರಿಯನ್ನು ನೋಡಲು ಗುಂಪು-ಗುಂಪಾಗಿ ಬರುತ್ತಿದ್ದಾರೆ. ಸಹಜವಾಗಿಯೇ ಹುಟ್ಟಿದ ಹತ್ತೇ ನಿಮಿಷಗಳಲ್ಲಿ ವಿಚಿತ್ರ ಮರಿ ಅಸುನೀಗಿದೆ. ಆದರೂ ಸಾಕಷ್ಟು ಮಂದಿ ಮೇಕೆ ಮರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. (ಏಜೆನ್ಸೀಸ್)