More

    ಜನರ ಬವಣೆ ತಪ್ಪಲಿ; ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗೆ ಪರದಾಟ..

    ಗ್ರಾಮೀಣ ಕರ್ನಾಟಕ ಮೂಲಸೌಕರ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಎದುರಿಸುತ್ತಿದೆ. ಅದರಲ್ಲೂ, ಬೇಸಿಗೆ ಶುರುವಾಗುತ್ತಿದ್ದಂತೆ ಕುಡಿಯುವ ನೀರಿಗಾಗಿ ಪರದಾಟ ತಪ್ಪಿದ್ದಲ್ಲ. ಇದೇನು ಹೊಸ ಸಮಸ್ಯೆಯಲ್ಲ, ದಿಢೀರನೆ ಎದುರಾಗುವಂಥದ್ದೂ ಅಲ್ಲ. ಬೇಸಿಗೆ ಆರಂಭವಾಗುವ ಮುನ್ನವೇ ಸ್ಥಳೀಯ ಜನಪ್ರತಿನಿಧಿಗಳು, ಅಧಿಕಾರಿಗಳು ಲಭ್ಯ ಇರುವ ಜಲಮೂಲಗಳು, ತೀವ್ರ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳು, ಅಲ್ಲಿ ನೀರನ್ನು ತಲುಪಿಸುವ ವಿಧಾನ, ಅದಕ್ಕೆ ಬೇಕಾಗುವ ಆರ್ಥಿಕ ಸಂಪನ್ಮೂಲಗಳು ಈ ಎಲ್ಲ ಸಂಗತಿಗಳ ಬಗ್ಗೆ ಅವಲೋಕನ ನಡೆಸಬೇಕು. ಅದರ ಆಧಾರದ ಮೇಲೆ ಕಾರ್ಯಯೋಜನೆ ರೂಪಿಸಿ, ಕೆಲಸ ಮಾಡಿದರೆ ಪರಿಹಾರದ ದಾರಿಯೂ ಸುಗಮ.

    ಏಪ್ರಿಲ್​ನಲ್ಲೇ ಪ್ರತಿ ಜಿಲ್ಲೆಯ ಕನಿಷ್ಠ 20ರಿಂದ 100 ಹಳ್ಳಿಗಳು ಜಲಸಂಕಟ ಎದುರಿಸುತ್ತಿರುವುದು, ಸಮಸ್ಯೆಯ ಭೀಕರತೆಗೆ ಸಾಕ್ಷಿ. ಈ ಸಂಖ್ಯೆ ಕೆಲವೇ ದಿನಗಳಲ್ಲಿ ದುಪ್ಪಟ್ಟಾಗುವ ಸಾಧ್ಯತೆ ಇದೆ. ಜಲಮೂಲಗಳೇ ಇಲ್ಲದ ಗ್ರಾಮಗಳ ಸ್ಥಿತಿಯಂತೂ ಶೋಚನೀಯ. ಹಳೇ ಮೈಸೂರು, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಜಲಸಂಕಷ್ಟ ಹೆಚ್ಚಿನ ಪ್ರಮಾಣದಲ್ಲಿದೆ. ಜಲಸೆಲೆಗಳು ಬತ್ತಿ ಹೋಗಿರುವುದರಿಂದ ಪರ್ಯಾಯ ಮೂಲಗಳೂ ಕಾಣದಂತಾಗಿವೆ. ಅಗತ್ಯ ಇರುವೆಡೆ ಟ್ಯಾಂಕರ್​ಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗಿದ್ದರೂ, ಸಮಸ್ಯೆಗೆ ಪರಿಣಾಮಕಾರಿ ಪರಿಹಾರ ದೊತೆತಿಲ್ಲ. ಈ ಎಲ್ಲ ಸಂಗತಿಗಳ ಮೇಲೆ ಬೆಳಕು ಚೆಲ್ಲಿ ವಿಜಯವಾಣಿ ‘ಹಳ್ಳಿಗಳಿಗೆ ನೀರಡಿಕೆ’ ಎಂಬ ಶೀರ್ಷಿಕೆಯಲ್ಲಿ ಏಪ್ರಿಲ್ 7ರಂದು ವಿಸõತ ವರದಿ ಪ್ರಕಟಿಸಿತ್ತು. ಜಲಸಂಕಷ್ಟದ ತೀವ್ರತೆಗೆ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರ ಕುಡಿಯುವ ನೀರಿಗಾಗಿ 100 ಕೋಟಿ ರೂಪಾಯಿ ಅನುದಾನವನ್ನು ಹೆಚ್ಚುವರಿಯಾಗಿ ಬಿಡುಗಡೆ ಮಾಡಲು ಮುಂದಾಗಿರುವುದು ಸಮಾಧಾನಕರ ಬೆಳವಣಿಗೆ. ಎರಡನೇ ಹಂತದಲ್ಲಿ ಇನ್ನಷ್ಟು ಹೆಚ್ಚುವರಿ ಅನುದಾನ ಒದಗಿಸುವುದಾಗಿ ಸರ್ಕಾರ ಆಶ್ವಾಸನೆಯಿತ್ತಿದೆ. ಈಗಿರುವ ಅನುದಾನ ಮೊದಲು ಬಳಸಿ, ಬೇಡಿಕೆಯನ್ನು ಕೂಡಲೇ ಪ್ರಸ್ತಾವನೆ ರೂಪದಲ್ಲಿ ಸಲ್ಲಿಸಲು ಜಿಲ್ಲಾ ಪಂಚಾಯತ್​ಗಳಿಗೆ ಸರ್ಕಾರ ಸೂಚಿಸಿದೆ.

    ಅನುದಾನ ಸೂಕ್ತ ಪ್ರಮಾಣದಲ್ಲಿ ಬಿಡುಗಡೆ ಆಗಬೇಕು ಮತ್ತು ಅದು ಪಾರದರ್ಶಕವಾಗಿ ವಿನಿಯೋಗಿಸಿ, ಗ್ರಾಮೀಣಿಗರ ಸಮಸ್ಯೆ ನಿವಾರಣೆಗೆ ಪ್ರಾಮಾಣಿಕ ಯತ್ನ ಮಾಡಬೇಕು. ಬರೀ ತಾತ್ಕಾಲಿಕ ಕ್ರಮಗಳಿಗೆ ಮುಂದಾಗದೆ, ಸಾಧ್ಯ ಇರುವೆಡೆಯಲ್ಲ ಶಾಶ್ವತ ಪರಿಹಾರ ಒದಗಿಸಬೇಕು. ಈ ನಿಟ್ಟಿನಲ್ಲಿ ಸ್ಥಳೀಯ ಜನಪ್ರತಿನಿಧಿಗಳ, ಅಧಿಕಾರಿಗಳ ಪಾತ್ರ ತುಂಬ ಮುಖ್ಯ. ಏಕೆಂದರೆ, ಅವರಿಗೆ ಸಮಸ್ಯೆಯ ತೀವ್ರತೆ ಮತ್ತು ಯಾವೆಲ್ಲ ಗ್ರಾಮ, ಭಾಗಗಳಲ್ಲಿ ಸಮರೋಪಾದಿ ಕಾರ್ಯದ ಅಗತ್ಯವಿದೆ ಎಂಬುದರ ಅರಿವಿರುತ್ತದೆ. ಹೀಗಾಗಿ ಪ್ರತಿ ಬೇಸಿಗೆ ಬಂದಾಗ ಹಳ್ಳಿಗಳು ನೀರಿಗಾಗಿ ಪರಿತಪಿಸುತ್ತಿರುವ ಬವಣೆಯನ್ನು ತಪ್ಪಿಸಬೇಕು. ಮುಂಬರುವ ಮುಂಗಾರಿನಲ್ಲಿ ಮಳೆನೀರನ್ನು ಸಂಗ್ರಹಿಸುವ, ಜಲಮೂಲಗಳಿಗೆ ಕಾಯಕಲ್ಪ ಒದಗಿಸುವ ಅಭಿಯಾನವೂ ರಾಷ್ಟ್ರದಾದ್ಯಂತ ನಡೆಯಲಿದೆ. ಈ ಬಗ್ಗೆ ಜನರಲ್ಲಿ ಅರಿವು ಮೂಡಿಸುವ, ಮಳೆನೀರನ್ನು ಸದುಪಯೋಗ ಪಡಿಸಿಕೊಳ್ಳುವ ಇಚ್ಛಾಶಕ್ತಿಯೂ ಪ್ರದರ್ಶಿತವಾಗಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts