ನ್ಯೂಸ್

ಐಪಿಒ ಗ್ರೇ ಮಾರ್ಕೆಟ್ ಪ್ರೀಮಿಯಂ ಎಂದರೇನು? ಗ್ರೇ ಮಾರುಕಟ್ಟೆಯಲ್ಲಿ ಷೇರು ವಹಿವಾಟು ಹೇಗೆ ನಡೆಯುತ್ತದೆ?

ಭಾರತೀಯ ಐಪಿಒ (ಇನಿಷಿಯಲ್​ ಪಬ್ಲಿಕ್​ ಆಫರ್​; ಆರಂಭಿಕ ಸಾರ್ವಜನಿಕ ಕೊಡುಗೆ- IPO) ಮಾರುಕಟ್ಟೆಯಲ್ಲಿ ಕಳೆದ ವಾರ ಬಿಡುವೇ ಇರಲಿಲ್ಲ. ಮೊದಲ ಬಾರಿಗೆ ಹೊಸ ಷೇರು ಬಿಡುಗಡೆ ಮಾಡುವ ಸಂದರ್ಭದಲ್ಲಿ ಸಾರ್ವಜನಿಕರಿಗೆ ಆ ಕಂಪನಿಗಳ ಷೇರುಗಳನ್ನು ನೀಡುವ ಪ್ರಕ್ರಿಯೆಯೇ ಒಪಿಒ ಆಗಿದೆ.

ಟಾಟಾ ಟೆಕ್ನಾಲಜೀಸ್, ಇರೆಡಾ, ಫ್ಲೇರ್ ರೈಟಿಂಗ್ ಇಂಡಸ್ಟ್ರೀಸ್, ಮತ್ತು ಗಂಧರ್ ಆಯಿಲ್ ರಿಫೈನರಿ ಸೇರಿ ಐದು ಕಂಪನಿಗಳ ಐಪಿಒಗಳು ಕಳೆದ ವಾರ ಮಾರುಕಟ್ಟೆಗೆ ಲಗ್ಗೆ ಇಟ್ಟವು. ಈ ಒಪಿಐಗಳಿಗೆ ಸಾಕಷ್ಟು ಬೇಡಿಕೆ ವ್ಯಕ್ತವಾಯಿತು. ಈ ಹಿನ್ನೆಲೆಯಲ್ಲಿ ಗ್ರೇ ಮಾರುಕಟ್ಟೆ ಪ್ರೀಮಿಯಂ (GMP) ವಹಿವಾಟು ಕೂಡ ವ್ಯಾಪಕವಾಗಿ ಸಾಗುತ್ತಿದೆ. ಹಾಗಿದ್ದರೆ ಗ್ರೇ ಮಾರ್ಕೇಟ್​ ಎಂದರೇನು? ಇಲ್ಲೇಕೆ ವಹಿವಾಟು ನಡೆಯುತ್ತದೆ? ಗ್ರೇ ಮಾರುಕಟ್ಟೆ ಪ್ರೀಮಿಯಂ ಎಂದರೇನು? ಎಂಬ ಕೂತುಹಲ, ಪ್ರಶ್ನೆಗಳು ಈ ಸಂದರ್ಭದಲ್ಲಿ ಹುಟ್ಟಿಕೊಳ್ಳುತ್ತವೆ.

ಗ್ರೇ ಮಾರುಕಟ್ಟೆ ಎಂದರೇನು?:

ಗ್ರೇ ಮಾರುಕಟ್ಟೆಯು ಅನಧಿಕೃತ ಮತ್ತು ಅನಿಯಂತ್ರಿತ ಮಾರುಕಟ್ಟೆಯಾಗಿದ್ದು, ಮುಖ್ಯ ಷೇರು ವಿನಿಮಯ (ಸ್ಟಾಕ್​ ಎಕ್ಸ್​ಚೇಂಜ್​) ಕೇಂದ್ರಗಳಲ್ಲಿ ಪಟ್ಟಿಮಾಡುವ ಮೊದಲೇ ಷೇರುಗಳನ್ನು ವ್ಯಾಪಾರ ಮಾಡಲಾಗುತ್ತದೆ.

ಇವು ಎಲೆಕ್ಟ್ರಾನಿಕ್​ ವಿನಿಮಯ ವಹಿವಾಟುಗಳಿಗಿಂತ ಭಿನ್ನವಾಗಿ ಇರುತ್ತವೆ. ಗ್ರೇ ಮಾರುಕಟ್ಟೆಯಲ್ಲಿನ ವಹಿವಾಟುಗಳು ವೈಯಕ್ತಿಕ ಮಟ್ಟದಲ್ಲಿ ನಡೆಯುತ್ತವೆ. ಈ ವಹಿವಾಟುಗಳು ನಿಯಮಗಳ ವ್ಯಾಪ್ತಿಯ ಹೊರಗೆ ಸಂಭವಿಸಿದರೂ, ಇವುಗಳನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುವುದಿಲ್ಲ.

ಗ್ರೇ ಮಾರುಕಟ್ಟೆ ಪ್ರೀಮಿಯಂ ಎಂದರೇನು?:

ಗ್ರೇ ಮಾರ್ಕೆಟ್ ಪ್ರೀಮಿಯಂ ಎನ್ನುವುದು ಹೆಚ್ಚಿನ ಬೆಲೆಗೆ ಷೇರು ಖರೀದಿಸುವುದಾಗಿದೆ. ಷೇರುಗಳನ್ನು ವಿನಿಮಯ ಕೇಂದ್ರದಲ್ಲಿ (ಭಾರತದಲ್ಲಿ ಬಿಎಸ್​ಇ ಮತ್ತು ನಿಫ್ಟಿ) ಪಟ್ಟಿ ಮಾಡುವ ಮುಂಚಿತವಾಗಿಯೇ ಐಪಿಒ ಬೆಲೆಗಿಂತ ಹೆಚ್ಚಿನ ದರ ನೀಡಿ ಹೂಡಿಕೆದಾರರು ಖರೀದಿಸುತ್ತಾರೆ. ಈ ಹೆಚ್ಚಿನ ಬೆಲೆಯೇ ಗ್ರೇ ಮಾರುಕಟ್ಟೆ ಪ್ರೀಮಿಯಂ ಆಗಿರುತ್ತದೆ.

ವ್ಯಾಪಾರಿಗಳ ನಡುವಿನ ಪರಸ್ಪರ ನಂಬಿಕೆಯ ಆಧಾರದ ಮೇಲೆ ಗ್ರೇ ಮಾರುಕಟ್ಟೆಯಲ್ಲಿ ಷೇರುಗಳನ್ನು ಅನೌಪಚಾರಿಕವಾಗಿ ವಹಿವಾಟು ಮಾಡಲಾಗುತ್ತದೆ. ಉದಾಹರಣೆಗೆ, ಐಪಿಒಗೆ ನೀಡಲಾಗುವ ಬೆಲೆಯು ಪ್ರತಿ ಷೇರಿಗೆ ರೂ 450 ಆಗಿದ್ದರೆ ಮತ್ತು ಬೂದು ಮಾರುಕಟ್ಟೆಯಲ್ಲಿ ಈ ಷೇರು ರೂ 470 ನಲ್ಲಿ ವಹಿವಾಟು ನಡೆಸುತ್ತಿದ್ದರೆ ಆ ಐಪಿಒದ ಗ್ರೇ ಮಾರ್ಕೆಟ್ ಪ್ರೀಮಿಯಂ (GMP) ರೂ 20 ಆಗಿರುತ್ತದೆ.

ಪ್ರೀಮಿಯಂ ಹೇಗೆ ಲೆಕ್ಕ ಹಾಕಲಾಗುತ್ತದೆ?:

ಜಿಎಂಪಿಯ ಲೆಕ್ಕಾಚಾರವು ಪ್ರಾಥಮಿಕವಾಗಿ ಐಪಿಒನಲ್ಲಿನ ಷೇರು ಬೇಡಿಕೆ ಮತ್ತು ಪೂರೈಕೆಯನ್ನು ಪ್ರತಿಬಿಂಬಿಸುತ್ತದೆ. ಐಪಿಒದಲ್ಲಿ ಷೇರುಗಳು ಸಾರ್ವಜನಿಕರಿಗೆ ಹಂಚಿಕೆಯಾಗುವ ಸಾಧ್ಯತೆಗಳು ಹೆಚ್ಚಾದರೆ ಜಿಎಂಪಿ ಬೆಲೆ ಕುಸಿಯುತ್ತದೆ. ಹಂಚಿಕೆಯ ಸಾಧ್ಯತೆಗಳು ಕಡಿಮೆ ಇದ್ದರೆ ಜಿಎಂಪಿ ಹೆಚ್ಚಾಗುತ್ತದೆ.

ಗ್ರೇ ಮಾರುಕಟ್ಟೆಯಲ್ಲಿ ಷೇರು ಖರೀದಿ, ಮಾರಾಟ ಹೇಗೆ?

ಐಪಿಒದಲ್ಲಿ ಷೇರುಗಳನ್ನು ಖರೀದಿಸಲು, ಖರೀದಿದಾರರು ಗ್ರೇ ಮಾರುಕಟ್ಟೆ ದಲ್ಲಾಳಿಗಳನ್ನು ಸಂಪರ್ಕಿಸುತ್ತಾರೆ. ನಿರ್ದಿಷ್ಟ ಬೆಲೆ ಅಥವಾ ಪ್ರೀಮಿಯಂನಲ್ಲಿ ಖರೀದಿಸಲು ಸೂಚಿಸುತ್ತಾರೆ. ಬ್ರೋಕರ್‌ಗಳು ನಂತರ ಐಪಿಒಗಾಗಿ ಅರ್ಜಿ ಸಲ್ಲಿಸಿದ ಸಂಭಾವ್ಯ ಮಾರಾಟಗಾರರನ್ನು ಸಂಪರ್ಕಿಸುತ್ತಾರೆ. ಮಾರಾಟಗಾರರು ಪಟ್ಟಿ ಮಾಡಲಾಗುವ ಬೆಲೆಯ ಬಗ್ಗೆ ಅನಿಶ್ಚಿತವಾಗಿದ್ದರೆ ಮತ್ತು ಅಪಾಯವನ್ನು ಹಿಡಿದಿಡಲು ಬಯಸದಿದ್ದರೆ ಮಾರಾಟ ಮಾಡಲು ಆಯ್ಕೆ ಮಾಡಬಹುದು. ಗ್ರೇ ಮಾರುಕಟ್ಟೆಯಲ್ಲಿ ಷೇರುಗಳ ಭೌತಿಕ ವರ್ಗಾವಣೆ ಸಂಭವಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ. ಒಮ್ಮೆ ಷೇರುಗಳನ್ನು ಮಾರಾಟಗಾರರಿಗೆ ಹಂಚಿದರೆ, ಅವುಗಳನ್ನು ದಲ್ಲಾಳಿಗಳ ಮೂಲಕ ಖರೀದಿದಾರರಿಗೆ ನಗದು ಪಡೆದುಕೊಂಡು ವರ್ಗಾಯಿಸಲಾಗುತ್ತದೆ.