ನ್ಯೂಸ್

ಕರೊನಾಗಿಂತ ಭೀಕರ ಎಕ್ಸ್: ಜಾಗತಿಕವಾಗಿ 5 ಕೋಟಿಗೂ ಹೆಚ್ಚು ಮರಣ ಸಾಧ್ಯತೆಯ ಎಚ್ಚರಿಕೆ

ಲಂಡನ್/ನವದೆಹಲಿ: ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್​ಒ) ಎಕ್ಸ್ ಎಂದು ಹೆಸರಿಸಿರುವ ವ್ಯಾಧಿಯು ಕರೊನಾಗಿಂತಲೂ ಮಾರಕವಾದ ಇನ್ನೊಂದು ಸಾಂಕ್ರಾಮಿಕತೆಗೆ ಕಾರಣವಾಗುವ ಸಾಧ್ಯತೆಯಿದೆ. ಇದು ಅಂದಾಜು 5 ಕೋಟಿ ಜನರನ್ನು ಬಲಿ ತೆಗೆದುಕೊಳ್ಳುವ ಅಪಾಯವಿದೆ ಎಂದು ಬ್ರಿಟನ್​ನ ಆರೋಗ್ಯ ತಜ್ಞರೊಬ್ಬರು ಎಚ್ಚರಿಸಿದ್ದಾರೆ. ಹೊಸ ವೈರಸ್ 1918-1919ರ ಸ್ಪ್ಯಾನಿಶ್ ಫ್ಲೂನಿಂದ ಉಂಟಾದ ಭೀಕರ ಪರಿಣಾಮದಂತೆಯೇ ಘೋರ ಅನಾಹುತಕ್ಕೆ ಕಾರಣವಾಗಬಹುದು ಎಂದು 2020ರ ಮೇನಿಂದ ಡಿಸೆಂಬರ್​ವರೆಗೆ ಬ್ರಿಟನ್​ನ ವ್ಯಾಕ್ಸಿನ್ ಕಾರ್ಯಪಡೆಯ ಮುಖ್ಯಸ್ಥರಾಗಿದ್ದ ಕೇಟ್ ಬಿಂಘಾಂ ಹೇಳಿದ್ದಾರೆ.

ಎಕ್ಸ್ ರೋಗವು ವೈರಸ್, ಬ್ಯಾಕ್ಟೀರಿಯಾ ಅಥವಾ ಫಂಗಸ್​ನಂತಹ ಯಾವುದೇ ಹೊಸ ವಾಹಕವಾಗಬಹುದು. ಈ ರೋಗಕ್ಕೆ ಸದ್ಯಕ್ಕೆ ಗೊತ್ತಿರುವಂಥ ಯಾವುದೇ ಚಿಕಿತ್ಸೆ ಇಲ್ಲ ಎಂದು ಡಬ್ಲ್ಯುಎಚ್​ಒ ಅಭಿಪ್ರಾಯಪಟ್ಟಿದೆ.

ಮರಣ ಮೃದಂಗ: 1918-1919ರ ಸ್ಪ್ಯಾನಿಶ್ ಫ್ಲೂ ಜ್ವರದ ಸಾಂಕ್ರಾಮಿಕತೆಯಿಂದ ಜಗತ್ತಿನಾದ್ಯಂತ 5 ಕೋಟಿ ಜನರು ಮೃತಪಟ್ಟಿದ್ದರು. ಈ ಸಂಖ್ಯೆ ಮೊದಲನೇ ವಿಶ್ವಯುದ್ಧದಲ್ಲಿ ಮಡಿದವರಿಗಿಂತ ದುಪ್ಪಟ್ಟಾಗಿತ್ತು. ಈಗಾಗಲೇ ಅಸ್ತಿತ್ವದಲ್ಲಿರುವ ವೈರಸ್​ಗಳ ಪೈಕಿ ಒಂದರಿಂದ ಇಷ್ಟೇ ಸಂಖ್ಯೆಯ ಸಾವು ಸಂಭವಿಸಬಹುದು ಎಂದು ಸಂದರ್ಶನವೊಂದರಲ್ಲಿ ಕೇಟ್ ಹೇಳಿದ್ದಾರೆ. ಎಕ್ಸ್ ರೋಗವನ್ನು ಎದುರಿಸಬೇಕಾದರೆ ಸಾಮೂಹಿಕ ಲಸಿಕಾ ಆಂದೋಲನಕ್ಕೆ ಜಗತ್ತು ಸಜ್ಜಾಗಬೇಕು. ದಾಖಲೆ ಸಮಯದಲ್ಲಿ ವ್ಯಾಕ್ಸಿನ್ ಡೋಸ್​ಗಳನ್ನು ಹಾಕಬೇಕಾಗುತ್ತದೆ ಎಂದು ಕೇಟ್ ಹೇಳಿದ್ದಾರೆ.

ಇದನ್ನೂ ಓದಿ: ಮೊಬೈಲ್​ ನೋಡುವುದರಿಂದ ಕಣ್ಣಿನ ನೋವು ಹೆಚ್ಚಾಗಿಯೇ? ಇಲ್ಲಿದೆ ನೋಡಿ ಉಪಯುಕ್ತವಾದ ಸಲಹೆ 10 ಲಕ್ಷ ಪ್ರಭೇದಗಳು: ವಿಜ್ಞಾನಿಗಳು 25 ವೈರಸ್ ಕುಟುಂಬಗಳನ್ನು ಗುರುತಿಸಿದ್ದಾರೆ. ಆದರೆ, ಒಂದರಿಂದ ಇನ್ನೊಂದಕ್ಕೆ ಹಾರುವ ಸಾಮರ್ಥ್ಯವುಳ್ಳ, ಪತ್ತೆಯಾಗದ 10 ಲಕ್ಷಕ್ಕೂ ಹೆಚ್ಚಿನ ವೈರಸ್ ಪ್ರಭೇದಗಳಿರಬಹುದು ಎಂದು ವೈರಾಣುತಜ್ಞೆಯೂ ಆಗಿರುವ ಕೇಟ್ ಹೇಳಿದ್ದಾರೆ. ಜಗತ್ತಿನಾದ್ಯಂತ ಎರಡು ಕೋಟಿ ಅಥವಾ ಅದಕ್ಕಿಂತಲೂ ಅಧಿಕ ಜನ ಬಲಿಯಾದರೂ ಕೋವಿಡ್-19 ಸಾಂಕ್ರಾಮಿಕತೆ ಬಾಧಿಸಿದ ನಾವು ಒಂದು ರೀತಿಯಲ್ಲಿ ಅದೃಷ್ಟವಂತರೇ ಸರಿ. ಏಕೆಂದರೆ ಕರೊನಾ ವೈರಸ್ ಪೀಡಿತ ಬಹುತೇಕ ಜನರು ಚೇತರಿಸಿಕೊಳ್ಳಲು ಸಾಧ್ಯವಾಗಿತ್ತು ಎಂದಿದ್ದಾರೆ.

ಈ ರೋಗಕ್ಕೆ ಸದ್ಯಕ್ಕೆ ಯಾವುದೇ ಚಿಕಿತ್ಸೆ ಇಲ್ಲ * ಎಕ್ಸ್ ಎದುರಿಸಲು ಜಗತ್ತು ಸಾಮೂ ಹಿಕ ಲಸಿಕಾ ಆಂದೋ ಲನಕ್ಕೆ ಸಜ್ಜಾಗಬೇಕು * ದಾಖಲೆ ಸಮಯದಲ್ಲಿ ವ್ಯಾಕ್ಸಿನ್ ಡೋಸ್ ಹಾಕಬೇಕು.

ರೂಪಾಂತರಕ್ಕೆ ಕಾರಣ

ಕೋವಿಡ್-19 ಚಿಕಿತ್ಸೆಗೆ ವ್ಯಾಪಕವಾಗಿ ಬಳಸಲಾದ ವೈರಲ್​ವಿರೋಧಿ ಔಷಧ ಮೊಲ್ನುಪಿರಾವಿರ್, ಸಾರ್ಸ್-ಸಿಒವಿ-2 ವೈರಸ್ ರೂಪಾಂತರಗಳ ವಿಧಾನಕ್ಕೆ ಕಾರಣವಾಗಿರ ಬಹುದು ಎಂದು ನೇಚರ್ ಪತ್ರಿಕೆಯಲ್ಲಿ ಪ್ರಕಟವಾದ ಅಧ್ಯಯನವೊಂದು ಅಭಿಪ್ರಾಯ ಪಟ್ಟಿದೆ. ಪುನರಾವರ್ತನೆಯ ವೇಳೆ, ವೈರಸ್​ನ ಜೈವಿಕ ಮಾಹಿತಿ ಅಥವಾ ಜಿನೋಮ್ ರೂಪಾಂತರಕ್ಕೆ ಮೊಲ್ನುಪಿರಾವಿರ್ ಪ್ರೇರಣೆ ನೀಡುತ್ತದೆ ಎಂದು ಬ್ರಿಟನ್​ನ ಫ್ರಾನ್ಸಿಸ್ ಕ್ರಿಕ್ ಸಂಸ್ಥೆ ಮತ್ತು ಕೇಂಬ್ರಿಜ್ ವಿಶ್ವವಿದ್ಯಾಲಯದ ಸಂಶೋಧಕರ ತಂಡವೊಂದು ಕಂಡುಕೊಂಡಿದೆ.

ಪರಿಸರ ನಾಶದಿಂದಲೂ ಹಬ್ಬುವ ವ್ಯಾಧಿ

1. ಅರಣ್ಯ ನಾಶ, ಆಧುನಿಕ ಕೃಷಿ ವಿಧಾನಗಳು ಮತ್ತು ಜೌಗು ಪ್ರದೇಶಗಳ ನಾಶದಿಂದಾಗಿ ವೈರಸ್​ಗಳು 1 ತಳಿಯಿಂದ ಇನ್ನೊಂದು ತಳಿಗೆ ವರ್ಗಾವಣೆಗೊಳ್ಳುತ್ತವೆ.

2. 2023 ಮೇ ತಿಂಗಳಲ್ಲಿ ಡಬ್ಲ್ಯುಎಚ್​ಒ ತನ್ನ ವೆಬ್​ಸೈಟ್​ನಲ್ಲಿ ಮೊದಲ ಬಾರಿಗೆ ಎಕ್ಸ್ ಕಾಯಿಲೆ ಬಗ್ಗೆ ಉಲ್ಲೇಖಿಸಿತ್ತು.

ಎಬೊಲಾದಂತೆ ಮಾರಕ

ಎಕ್ಸ್ ರೋಗವು ದಢಾರದಂತೆ ಸಾಂಕ್ರಾಮಿಕತೆ ಹಾಗೂ ಎಬೋಲಾದ ಮರಣ ಪ್ರಮಾಣವನ್ನು ಹೊಂದಿದೆ ಎನ್ನುವುದನ್ನು ಊಹಿಸಿಕೊಳ್ಳಿ. ಜಗತ್ತಿನ ಒಂದಲ್ಲ ಒಂದು ಕಡೆ ಅದು ಪುನರಾವರ್ತನೆಗೊಳ್ಳುತ್ತದೆ ಮತ್ತು ಬೇಗನೇ ಅಥವಾ ವಿಳಂಬವಾಗಿಯಾದರೂ ಒಬ್ಬರಲ್ಲ ಒಬ್ಬರು ಅನಾರೋಗ್ಯದ ಕಾರಣಕ್ಕೆ ನರಳಲು ಆರಂಭಿಸುತ್ತಾರೆ ಎಂದು ಕೇಟ್ ವಿವರಿಸಿದ್ದಾರೆ. ಎಬೋಲಾದ ಮರಣ ಪ್ರಮಾಣ ಶೇ. 67 ಆಗಿದೆ. ಇದಲ್ಲದೆ, ಹಕ್ಕಿ ಜ್ವರ ಮತ್ತು ಎಂಇಆರ್​ಎಸ್ ಕೂಡ ದೊಡ್ಡ ಪ್ರಮಾಣದಲ್ಲಿ ಜೀವಹಾನಿಗೆ ಕಾರಣವಾಗಿವೆ. ಆದ್ದರಿಂದ, ಮುಂದಿನ ಸಾಂಕ್ರಾಮಿಕತೆಯನ್ನು ಸುಲಭವಾಗಿ ನಿಯಂತ್ರಿಸಬಹುದೆಂದು ಭಾವಿಸಲು ಸಾಧ್ಯವಿಲ್ಲ ಎಂದು ಕೇಟ್ ಕಳವಳ ವ್ಯಕ್ತಪಡಿಸಿದ್ದಾರೆ.