ನ್ಯೂಸ್

ಪ.ಬಂಗಾಳ ಹೊತ್ತಿ ಉರಿಯುತ್ತಿದ್ದರೂ ಸಿಎಂ ಮೌನವಾಗಿದ್ದಾರೆ! ಮಮತಾ ಬ್ಯಾನರ್ಜಿ ವಿರುದ್ಧ ಯೋಗಿ ಆದಿತ್ಯನಾಥ್ ವಾಗ್ದಾಳಿ| Yogi adithyanath

ಉತ್ತರ ಪ್ರದೇಶ | ಪಶ್ಚಿಮ ಬಂಗಾಳದಲ್ಲಿ ವಕ್ಫ್ ಕಾಯ್ದೆಯ ವಿರುದ್ಧ ಪ್ರತಿಭಟನೆಗಳ ಕುರಿತು ನಡೆಯುತ್ತಿರುವ ಹೋರಾಟಕ್ಕೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಿಡಿದೆದ್ದಿದ್ದಾರೆ. ಪಶ್ಚಿಮ ಬಂಗಾಳ ಸರ್ಕಾರ ಮತ್ತು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಆದಿತ್ಯನಾಥ್​ ಆಕ್ರೋಶ ಹೊರಹಾಕಿದ್ದಾರೆ. ಬಂಗಾಳ ಹೊತ್ತಿ ಉರಿಯುತ್ತಿದ್ದರೂ ಸಹ, ರಾಜ್ಯದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೌನವಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.

ಉತ್ತರ ಪ್ರದೇಶದ, ಹರ್ದೋಯ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್ ಅವರು, ಪಶ್ಚಿಮ ಬಂಗಾಳ ಹೊತ್ತಿ ಉರಿಯುತ್ತಿದೆ. ಆದರೆ ರಾಜ್ಯದ ಮುಖ್ಯಮಂತ್ರಿಯಾದವರು ಮೌನವಾಗಿದ್ದಾರೆ. ಗಲಭೆಕೋರರನ್ನು ಶಾಂತಿಪ್ರಿಯರು ಎಂದು ಕರೆಯುತ್ತಾರೆ. ರಾಜ್ಯದಲ್ಲಿ ಜಾತ್ಯತೀತತೆಯ ಹೆಸರಿನಲ್ಲಿ ಗಲಭೆ ಸೃಷ್ಟಿಸಲು ಬ್ಯಾನರ್ಜಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಬಂಗಾಳದಲ್ಲಿನ ಅಶಾಂತಿಯ ಬಗ್ಗೆ ಧ್ವನಿ ಎತ್ತದ ಪಶ್ಚಿಮ ಬಂಗಾಳ ಸರ್ಕಾರ ಮಾತ್ರವಲ್ಲದೆ, ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷವನ್ನೂ ಯೋಗಿ ಆದಿತ್ಯನಾಥ್ ಟೀಕಿಸಿದ್ದಾರೆ.

2017 ರಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಮೊದಲು ಉತ್ತರ ಪ್ರದೇಶದಲ್ಲಿ ಪ್ರತಿ ಎರಡು ಮೂರು ದಿನಗಳಿಗೊಮ್ಮೆ ಕೋಮು ಗಲಭೆ ಸಂಭವಿಸುತ್ತಿತ್ತು ಎಂದು ಹೇಳಿದ್ದಾರೆ.

ವಕ್ಫ್ ಕಾನೂನು ತಿದ್ದುಪಡಿಗಳ ವಿರುದ್ಧದ ಪ್ರತಿಭಟನೆಗಳು ಹಿಂಸಾತ್ಮಕವಾಗಿ ತಿರುಗಿದ ನಂತರ ಉತ್ತರ ಬಂಗಾಳದ ಮುರ್ಷಿದಾಬಾದ್‌ನಲ್ಲಿ ಮೂವರು ಸಾವನ್ನಪ್ಪಿದರು ಮತ್ತು ಅನೇಕ ಕುಟುಂಬಗಳ ಮನೆಗಳು ನಾಶವಾದವು. ಕಲ್ಕತ್ತಾ ಹೈಕೋರ್ಟ್‌ನ ಹಸ್ತಕ್ಷೇಪದ ನಂತರ, ಹಿಂಸಾಚಾರ ಪೀಡಿತ ಪ್ರದೇಶಗಳಲ್ಲಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ ಮತ್ತು ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಅವರು ನಿಯಮಿತವಾಗಿ ಗಸ್ತು ತಿರುಗುತ್ತಿದ್ದಾರೆ. ಗಲಭೆ ಪೀಡಿತ ಪ್ರದೇಶಗಳಲ್ಲಿ ಪೊಲೀಸರು ಮತ್ತು ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿದೆ. ಯಾವುದೇ ಪ್ರಚೋದನೆಗೆ ಮಣಿಯದೆ ಶಾಂತಿ ಕಾಪಾಡುವಂತೆ ಯೋಗಿ ಆದಿತ್ಯನಾಥ್ ಅವರು ಸಾಮಾನ್ಯ ಜನರಿಗೆ ಮನವಿ ಮಾಡಿದ್ದಾರೆ.

(ಏಜೆನ್ಸೀಸ್)